ಉತ್ತರ ಪ್ರದೇಶದ ಜೈಲಿನಿಂದ ಜೀವಂತವಾಗಿ ಬಿಡುಗಡೆಗೊಂಡದ್ದೇ ನನ್ನ ಅದೃಷ್ಟ : ಡಾ ಕಫೀಲ್ ಖಾನ್

Prasthutha|

ಅಲಹಾಬಾದ್ ಹೈಕೋರ್ಟ್ ನ ಆದೇಶದ ಹಿನ್ನೆಲೆಯಲ್ಲಿ ಮಥುರಾ ಜೈಲಿನಿಂದ ಬಿಡುಗಡೆಯಾದ ಡಾ.ಕಫೀಲ್ ಖಾನ್, “ಉ ಪ್ರ ಪೊಲೀಸರು ನನ್ನನ್ನು ಎನ್ ಕೌಂಟರ್ ನಲ್ಲಿ ಕೊಲ್ಲದೆ ಜೀವಂತವಾಗಿ ಬಿಡುಗಡೆಗೊಳಿಸಿರುವುದು ನನ್ನ ಅದೃಷ್ಟ“ ಎಂದು ಪ್ರತಿಕ್ರಿಯಿಸಿದ್ದಾರೆ.

- Advertisement -

ಬಿಡುಗಡೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಡಾ ಕಫೀಲ್ ಖಾನ್, ‘ಉತ್ತರಪ್ರದೇಶ ಸರಕಾರ ನನ್ನನ್ನು 8 ತಿಂಗಳು ಬಂಧನದಲ್ಲಿರಿಸಿತ್ತು. ಒಂದು ಹಂತದಲ್ಲಿ ಐದು ದಿನಗಳವರೆಗೆ ಆಹಾರ ಕೂಡಾ ನೀಡಿರಲಿಲ್ಲ” ಎಂದು ಜೈಲಿನ ತನ್ನ ಕರಾಳ ಅನುಭವಗಳನ್ನು ಹಂಚಿಕೊಂಡಿದ್ದಾರೆ.  ತನ್ನ ಬಿಡುಗಡೆಗಾಗಿ ಧ್ವನಿ ಎತ್ತಿದ ಎಲ್ಲರಿಗೂ ಕಫೀಲ್ ಖಾನ್ ಧನ್ಯವಾದ ಅರ್ಪಿಸಿದರು. ನನ್ನನ್ನು ಬಿಡುಗಡೆಗೊಳಿಸಲು ಸರಕಾರ ಸಿದ್ಧವಿರಲಿಲ್ಲ. ಜನರ ಪ್ರಾರ್ಥನೆಯಿಂದ ಬಿಡುಗಡೆ ಸಾಧ್ಯವಾಯಿತು. ರಾಮಾಯಣದಲ್ಲಿ ಮಹರ್ಷಿ ವಾಲ್ಮೀಕಿ ರಾಜಧರ್ಮದ ಬಗ್ಗೆ ಹೇಳುತ್ತಾರೆ. ಆದರೆ ಯು.ಪಿಯ `ರಾಜ’ ತನ್ನ ರಾಜಧರ್ಮವನ್ನು ನಿರ್ವಹಿಸುತ್ತಿಲ್ಲ ಎಂದು ಕಫೀಲ್ ಖಾನ್ ಹೇಳಿದರು. ಯೋಗಿ ಸರಕಾರ ನನ್ನ ವಿರುದ್ಧ ಮತ್ತೊಂದು ಪ್ರಕರಣ ದಾಖಲಿಸಬಹುದು. ಈಗ ನಾನು ಬಿಹಾರ ಮತ್ತು ಅಸ್ಸಾಂ ನಲ್ಲಿ ಪ್ರವಾಹ ಪೀಡಿತರಿಗೆ ಸಹಾಯ ಮಾಡಲು ಹೋಗುತ್ತಿದ್ದೇನೆ ಎಂದು ಕಫೀಲ್ ಖಾನ್ ಹೇಳಿದರು.

 ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಉತ್ತರ ಪ್ರದೇಶ ಸರಕಾರದಿಂದ ಬಂಧನಕ್ಕೊಳಗಾಗಿದ್ದ ಡಾ.ಕಫೀಲ್ ಖಾನ್ ರವರನ್ನು ನ್ಯಾಯಾಲಯದ ಆದೇಶದಂತೆ ನಿನ್ನೆ ಮಧ್ಯರಾತ್ರಿ ಬಿಡುಗಡೆ ಮಾಡಲಾಗಿತ್ತು. ಸಿಎಎ ವಿರೋಧಿ ಅಭಿಯಾನದ ಅಂಗವಾಗಿ ಆಲಿಘರ್ ವಿಶ್ವವಿದ್ಯಾನಿಲಯದಲ್ಲಿ ಮಾತನಾಡಿದ ಕಫೀಲ್ ಖಾನ್ ರನ್ನು ಮುಂಬೈಯಲ್ಲಿ ಬಂಧಿಸಲಾಗಿತ್ತು. ಫೆಬ್ರವರಿಯಲ್ಲಿ ಯು.ಪಿ ಪೋಲೀಸರು ಕಫೀಲ್ ಖಾನ್ ವಿರುದ್ಧ ಎನ್.ಎಸ್.ಎ ದಾಖಲಿಸಿದ್ದರು

- Advertisement -

ಪೌರತ್ವ ಕಾನೂನಿನ ವಿರುದ್ಧ ಕಫೀಲ್ ಖಾನ್ ಮಾಡಿದ ಭಾಷಣದಲ್ಲಿ ರಾಷ್ಟ್ರ ವಿರೋಧದ ಬಗ್ಗೆ ಯಾವುದೇ ಉಲ್ಲೇಖವಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಕಫೀಲ್ ಖಾನ್ ರ ಬಂಧನ ಕಾನೂನುಬಾಹಿರ ಎಂದು ತೀರ್ಪು ನೀಡಿದ ನ್ಯಾಯಾಲಯ ಅವರ ಮೇಲೆ ವಿಧಿಸಿದ ರಾಷ್ಟ್ರೀಯ ಭದ್ರತಾ ಕಾಯ್ದೆಯನ್ನು ರದ್ದುಗೊಳಿಸಿತ್ತು. ಅಲಹಾಬಾದ್ ನ್ಯಾಯಾಲಯದ ಆದೇಶದ ಹೊರತಾಗಿಯೂ ಯು.ಪಿ ಪೋಲೀಸರು ಅವರನ್ನು ಗಂಟೆಗಳ ಕಾಲ ಬಂಧನದಲ್ಲಿರಿಸಿದ ಕ್ರಮದ ವಿರುದ್ಧ ಕುಟುಂಬವು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲು ಹೊರಟಾಗ ಅವರನ್ನು ಮಧ್ಯರಾತ್ರಿ ಬಿಡುಗಡೆಗೊಳಿಸಲಾಯಿತು.

Join Whatsapp