ನವದೆಹಲಿ: ದೇಶದ ಪ್ರಜೆಗಳ ಮೇಲೆ ನಿಗಾ ಇಡಲು ಪೆಗಸಸ್ ತಂತ್ರಾಂಶ ಬಳಸಲಾಗಿದೆಯೇ ಎಂಬುದನ್ನು ಬಹಿರಂಗಪಡಿಸಲು ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂಬ ಕುರಿತು ಸಲ್ಲಿಸಲಾದ ವಿವಿಧ ಅರ್ಜಿಗಳಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಮಧ್ಯಂತರ ಆದೇಶ ಕಾಯ್ದಿರಿಸಿದೆ.
ಪೆಗಸಸ್ ಸಾಫ್ಟ್‌ವೇರ್ ಬಳಸಿದೆಯೇ ಅಥವಾ ಇಲ್ಲವೇ ಎಂಬುದನ್ನು ವಿವರಿಸುವ ಅಫಿಡವಿಟ್ ಸಲ್ಲಿಸಲು ಕೇಂದ್ರ ಹಿಂಜರಿಯುತ್ತಿರುವ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ, ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಹಿಮಾ ಕೊಹ್ಲಿ ಅವರಿದ್ದ ಪೀಠ ಈ ಆದೇಶ ನೀಡಿತು.
ಕೇಂದ್ರ ಸರ್ಕಾರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರನ್ನು ಉದ್ದೇಶಿಸಿ ನ್ಯಾಯಾಲಯವು, “ಅಫಿಡವಿಟ್‌ನಲ್ಲಿ ಏನನ್ನೂ ಸೇರಿಸಲು ಬಯಸುವುದಿಲ್ಲ ಎಂದು ನೀವು ನೀವು ಪದೇ ಪದೇ ಹೇಳುತ್ತಿದ್ದೀರಿ. ಭದ್ರತೆಗೆ ಸಂಬಂಧಿಸಿದ ವಿಚಾರಗಳನ್ನು ಅದರಲ್ಲಿ ಸೇರಿಸಲು ನಾವು ಕೂಡ ಬಯಸುತಿಲ್ಲ. ಸಮಿತಿಯೊಂದನ್ನು ರಚಿಸುವ ಸಾಧ್ಯತೆಗಳಿದ್ದು ಆ ಬಳಿಕ ವರದಿಯನ್ನು ಇಲ್ಲಿಗೆ ಸಲ್ಲಿಸಲಾಗುತ್ತದೆ. ನಾವು ಪ್ರಕರಣವನ್ನು ಇಡಿಯಾಗಿ ಗಮನಿಸಿದ ನಂತರವಷ್ಟೇ ನಿರ್ಧಾರಕ್ಕೆ ಬರಬೇಕಿದೆ” ಎಂದರು.ವಾದದ ವೇಳೆ ಎಸ್ ಜಿ ಮೆಹ್ತಾ, “ಕೇಂದ್ರ ಸರ್ಕಾರ ಪೆಗಸಸ್ ಬೇಹು ತಂತ್ರಾಂಶವನ್ನು ಬಳಸಿದೆಯೋ ಇಲ್ಲವೋ ಎಂಬುದನ್ನು ಅಫಿಡವಿಟ್‌ನಲ್ಲಿ ಚರ್ಚಿಸಲು ಸಾಧ್ಯವಿಲ್ಲ” ಎಂದಿದ್ದರು.
“ಕೇಂದ್ರ ಪೆಗಸಸ್ ಬಳಸುತ್ತಿದೆಯೇ ಅಥವಾ ಇಲ್ಲವೇ ಎಂಬುದನ್ನು ಅಫಿಡವಿಟ್‌ಗಳಲ್ಲಿ ಚರ್ಚಿಸಲು ಸಾಧ್ಯವಿಲ್ಲ ಮತ್ತು ಡೊಮೇನ್ ತಜ್ಞರು ಇದನ್ನು ಪರಿಶೀಲಿಸಬಹುದು… ಇದನ್ನು ಎ ಸಾಫ್ಟ್ ವೇರ್‌ನಿಂದ ಮಾಡಲಾಗಿದೆಯೇ ಅಥವಾ ಬಿ ಸಾಫ್ಟ್ ವೇರ್‌ನಿಂದಲೇ ಎಂಬುದನ್ನು ಅಫಿಡವಿಟ್‌ನಲ್ಲಿ ಹೇಳಲು ಸಾಧ್ಯವಿಲ್ಲ. ಸರ್ಕಾರದೊಂದಿಗೆ ಸಂಪರ್ಕ ಹೊಂದಿರದ ಡೊಮೇನ್ ತಜ್ಞರು ಆ ಬಗ್ಗೆ ಗಮನ ಹರಿಸಲಿದ್ದು ಅವರ ಮುಂದೆ ಚರ್ಚಿಸುತ್ತೇವೆ “ಎಂದು ಮೆಹ್ತಾ ತಿಳಿಸಿದರು.
ಇದಕ್ಕೆ ಪ್ರತಿಕ್ರಿಯೆಯಾಗಿ, ನ್ಯಾಯಮೂರ್ತಿ ಸೂರ್ಯಕಾಂತ್ “ಕೆಲ ದಿನಗಳ ಹಿಂದೆ ಪ್ರಕರಣದ ವಿಚಾರಣೆ ನಡೆದು ರಾಷ್ಟ್ರೀಯ ಭದ್ರತೆಯ ಪ್ರಶ್ನೆ ಉದ್ಭವಿಸಿದಾಗ ನಾವು (ನ್ಯಾಯಾಲಯ) ಆಂತರಿಕ ಅಥವಾ ಬಾಹ್ಯ ರಾಷ್ಟ್ರೀಯ ಭದ್ರತೆಯನ್ನು ಒಳಗೊಂಡ ಯಾವುದೇ ವಿಚಾರ ಬಹಿರಂಗಪಡಿಸುವ ಬಗ್ಗೆ ಯಾರಿಗೂ ಆಸಕ್ತಿ ಇಲ್ಲ ಎಂದು ಹೇಳಿದ್ದೇವೆ… ಎ ಅಥವಾ ಬಿ ಏಜೆನ್ಸಿ ತಮ್ಮ ಹಕ್ಕುಗಳನ್ನು ಉಲ್ಲಂಘಿಸಿದೆ ಎಂದು ಅರ್ಜಿದಾರರು ಹೇಳಿದ್ದರಿಂದ ನಾವು ಸೀಮಿತ ಪ್ರಮಾಣಪತ್ರವನ್ನು ಮಾತ್ರ ನಿರೀಕ್ಷಿಸಿದ್ದೆವು. ಈ ಕಾರ್ಯ ಕಾನೂನುಬದ್ಧವಾಗಿ ನಡೆಯಿತೆ ಇಲ್ಲವೇ ಕಾನೂನುಬಾಹಿರವಾಗಿ ನಡೆಯಿತೆ ಎಂಬುದನ್ನು ನೀವು ಹೇಳಬೇಕು” ಎಂದರು.
ರಾಷ್ಟ್ರೀಯ ಭದ್ರತೆಯ ಸಮಸ್ಯೆಗೂ ಪ್ರಸ್ತುತ ವಿಚಾರಣೆಗೂ ಸಂಬಂಧವಿಲ್ಲ ಎಂದು ಸಿಜೆಐ ರಮಣ ಸ್ಪಷ್ಟಪಡಿಸಿದರು. “ರಾಷ್ಟ್ರೀಯ ಭದ್ರತೆ ಸಮಸ್ಯೆಗಳ ಬಗ್ಗೆ ತಿಳಿದುಕೊಳ್ಳಲು ನಮಗೆ ಆಸಕ್ತಿ ಇಲ್ಲ, ಬದಲಿಗೆ ಕೆಲವು ಸಾಫ್ಟ್ ವೇರ್‌ಗಳನ್ನು ವಕೀಲರಂತಹ ನಾಗರಿಕರ ವಿರುದ್ಧ ಬಳಸಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಮಾತ್ರ ತಿಳಿದುಕೊಳ್ಳಲು ಇಚ್ಛಿಸಿದ್ದೇವೆ. ಕಾನೂನಿನ ಅಡಿಯಲ್ಲಿ ಇದಕ್ಕೆ ಅನುಮತಿ ನೀಡಲಾಗಿದೆಯೇ ಎಂದು ತಿಳಿಯಲು ನಾವು ಬಯಸುತ್ತೇವೆ” ಎಂದು ಅವರು ಹೇಳಿದರು.
ಈ ಹಂತದಲ್ಲಿ ಮೆಹ್ತಾ ಅವರು “ಭಯೋತ್ಪಾದನೆ ನಂಟನ್ನು ಪತ್ತೆಹಚ್ಚಲು ಸಾಧ್ಯವಿರುವ ತಡೆಗಳನ್ನು ಮಾಹಿತಿ ತಂತ್ರಜ್ಞಾನ ಕಾಯಿದೆಯ ಸೆಕ್ಷನ್ 69 ಅನುಮತಿಸುತ್ತದೆ” ಎಂದು ಹೇಳಿದರು. ಪೆಗಸಸ್ ವಿವಾದಕ್ಕೆ ಸಂಬಂಧಿಸಿದಂತೆ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವರು ನೀಡಿದ ಹೇಳಿಕೆಯನ್ನೂ ಅವರು ಉಲ್ಲೇಖಿಸಿದರು.
“ಗೌಪ್ಯತೆಯ ಆಕ್ರಮಣವಾಗಿದೆ ಎನ್ನುತ್ತಿರುವ ಕೆಲವು ವ್ಯಕ್ತಿಗಳ ಆರೋಪಗಳ ವಿರುದ್ಧ ನಾನಿಲ್ಲ. ಇದು ಗಂಭೀರವಾಗಿದ್ದು ಅದರ ವಿಚಾರಣೆ ನಡೆಯಬೇಕು. ಪ್ರಶ್ನೆ ಪೆಗಸಸ್ ನದ್ದಾಗಿರಲಿ ಅಥವಾ ಇನ್ನಾವುದಾದರೂ ಆಗಿರಲಿ. ನಮ್ಮ ನಿಲುವು ಏನೆಂದರೆ ಇದನ್ನು ಅಫಿಡವಿಟ್ ಗೆ ಸೇರಿಸುವುದು ರಾಷ್ಟ್ರೀಯ ಹಿತಾಸಕ್ತಿಗೆ ಅನುಗುಣವಾಗಿರುವುದಿಲ್ಲ” ಎಂದು ಎಸ್‌ಜಿ ಮೆಹ್ತಾ ತಿಳಿಸಿದರು. ಸರ್ಕಾರದ ಸದಸ್ಯರಿಲ್ಲದ ಡೊಮೇನ್ ತಜ್ಞರ ಸಮಿತಿ ರಚಿಸಿ ಅರ್ಜಿಗಳಲ್ಲಿ ಪ್ರಸ್ತಾಪಿಸಲಾದ ಸಮಸ್ಯೆ ಪರಿಶೀಲಿಸುವಂತೆ ಅವರು ಹೇಳಿದರು.
ಆದರೆ ನ್ಯಾಯಾಲಯ, “ನಾವು ಮತ್ತೆ ಮತ್ತೆ ಹಿಂದಕ್ಕೆ ಹೋಗುತ್ತಿದ್ದೇವೆ. ದೇಶದ ಹಿತಾಸಕ್ತಿ ಕಾಪಾಡಲು ನೀವು ಏನು ಮಾಡುತ್ತಿದ್ದೀರಿ ಎಂಬುದನ್ನು ಅರಿಯಲು ನಮಗೆ ಆಸಕ್ತಿಯಿಲ್ಲ… ಸಮಿತಿಯನ್ನು ನೇಮಿಸುವುದು ಅಥವಾ ವಿಚಾರಣೆ ಮಾಡುವುದು ಇಲ್ಲಿ ಪ್ರಶ್ನೆಯಲ್ಲ. ನೀವು ಅಫಿಡವಿಟ್ ಸಲ್ಲಿಸಿದರೆ ನಿಮ್ಮ ನಿಲುವೇನು ಎಂದು ತಿಳಿಯುತ್ತದೆ ” ಎಂದಿತು.
ಅಫಿಡವಿಟ್ ಸಲ್ಲಿಸಲು ಕೇಂದ್ರ ಹಿಂಜರಿಯುತ್ತಿರುವ ಹಿನ್ನೆಲೆಯಲ್ಲಿ ನ್ಯಾಯಾಲಯ ಆದೇಶ ಹೊರಡಿಸಬೇಕಾಗುತ್ತದೆ ಎಂದು ಸಿಜೆಐ ರಮಣ ಎಚ್ಚರಿಸಿದರು. “ಕೇಂದ್ರಕ್ಕೆ ಹೇಳಿಕೆ ನೀಡಲು ನಾವು ನ್ಯಾಯಯುತ ಅವಕಾಶ ನೀಡಿದ್ದೇವೆ. ಈಗ ಅವರು ಅಫಿಡವಿಟ್ ಸಲ್ಲಿಸಲು ಬಯಸುತ್ತಿಲ್ಲ. ಹಾಗಾಗಿ ನಾವು ಆ ರೀತಿ ಆದೇಶ ನೀಡಬೇಕಾಗುತ್ತದೆ … ಏನು ಮಾಡಬೇಕು?” ಎಂದು ಅವರು ಕೇಳಿದರು.
ವಿವಾದಕ್ಕೆ ಸಂಬಂಧಿಸಿದ ವಿವರಗಳನ್ನು ತಜ್ಞರ ಸಮಿತಿಗೆ ನೀಡಲು ಸಿದ್ಧವಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದ ಬಳಿಕ ನ್ಯಾಯಾಲಯ ಆಗಸ್ಟ್ 17 ರಂದು ಕೇಂದ್ರಕ್ಕೆ ನೋಟಿಸ್ ನೀಡಿತ್ತು. ಆದರೆ ರಾಷ್ಟ್ರೀಯ ಭದ್ರತೆ ಮೇಲೆ ಪರಿಣಾಮ ಬೀರುವ ಹಿನ್ನೆಲೆಯಲ್ಲಿ ಅದನ್ನು ನ್ಯಾಯಾಲಯದ ಮುಂದೆ ಬಹಿರಂಗಪಡಿಸಿರಲಿಲ್ಲ. ಇತ್ತ ಅರ್ಜಿಗಳಿಗೆ ಪ್ರತಿಕ್ರಿಯೆಯಾಗಿ ವಿವರವಾದ ಅಫಿಡವಿಟ್ ಸಲ್ಲಿಸಲು ಏಕೆ ಸಾಧ್ಯವಿಲ್ಲ ಎಂದು ಕೇಂದ್ರವನ್ನು ನ್ಯಾಯಾಲಯ ಪ್ರಶ್ನಿಸಿತ್ತು.
ವಿವಿಧ ಅರ್ಜಿದಾರರ ಪರವಾಗಿ ಹಿರಿಯ ನ್ಯಾಯವಾದಿಗಳಾದ ಕಪಿಲ್ ಸಿಬಲ್, ಶ್ಯಾಂ ದಿವಾನ್, ರಾಕೇಶ್ ದ್ವಿವೇದಿ ವಾದ ಮಂಡಿಸಿದರು.
(ಕೃಪೆ: ಬಾರ್ & ಬೆಂಚ್)