ಪ್ಲೇ ಸ್ಟೋರ್ ನಿಂದ ಪೇಟಿಎಂ ಅನ್ನು ತೆಗೆದು ಹಾಕಿದ ಗೂಗಲ್ | ಕಾರಣವೇನು ಗೊತ್ತೇ?

Prasthutha|

ಹಣ ವರ್ಗಾವಣೆಯ ಖ್ಯಾತ ಆ್ಯಪ್ ಪೇಟಿಎಂ ಅನ್ನು, ಗೂಗಲ್  ತನ್ನ ಪ್ಲೇ ಸ್ಟೋರ್ ನಿಂದ ತೆಗೆದು ಹಾಕಿದೆ ಎಂದು ವರದಿಯಾಗಿದೆ. ಗೂಗಲ್ ಪ್ಲೇ ಸ್ಟೋರ್ ನಲ್ಲಿ ಇದೀಗ ಪೇಟಿಎಂ ಡೌನ್ ಲೋಡ್ ಗೆ ಲಭ್ಯವಿಲ್ಲ ಎಂಬುದನ್ನು ಗೂಗಲ್ ಖಚಿತಪಡಿಸಿದೆ.

- Advertisement -

ಪೇಟಿಎಂನ ಸೇವೆಗಳು ಒನ್97 ಕಮ್ಯುನಿಕೇಷನ್ ಲಿಮಿಟೆಡ್ ನ ಅಧೀನದಲ್ಲಿ ಬರುತ್ತವೆ. ಇದೀಗ ಪೇಟಿಎಂನ ಮುಖ್ಯ ಆ್ಯಪ್ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಕಂಡು ಬರುತ್ತಿಲ್ಲ. ಆದಾಗ್ಯೂ, ಇದರ ಪೇಟಿಎಂ ಬಿಸಿನೆಸ್, ಪೇಟಿಎಂ ಮನಿ, ಪೇಟಿಎಂ ಮಾಲ್ ಗಳಮತಹ ಇತರ ಆ್ಯಪ್ ಗಳು ಇನ್ನು ಕೂಡ ಗೂಗಲ್ ಪ್ಲೇ ಸ್ಟೋರ್ ನಲ್ಲಿರುವುದು ಕಂಡು ಬರುತ್ತಿದೆ.

ಗೂಗಲ್ ಬಿಡುಗಡೆಗೊಳಿಸಿದ ಹೇಳಿಕೆಯ ಪ್ರಕಾರ, ಮಾರ್ಗದರ್ಶನಗಳನ್ನು ಉಲ್ಲಂಘಿಸಿದ ಕಾರಣಕ್ಕಾಗಿ ಈ ರೀತಿ ಮಾಡಲಾಗಿದೆ. ‘’ನಾವು ಆನ್ ಲೈನ್ ಜೂಜು ಅಥವಾ ಕ್ರೀಡಾ ಬೆಟ್ಟಿಂಗ್ ಗೆ ಒತ್ತು ನೀಡುವಮತಹ ಯಾವುದೇ ಆ್ಯಪ್ ಗಳಿಗೆ ಉತ್ತೇಜನ ನೀಡುವುದಿಲ್ಲ. ಇದರ ಹೊರತಾಗಿ ಹಣದ ಬಹುಮಾನ, ನಗದು ಬಹುಮಾನ ಅಥವಾ ಪಾವತಿ ಪಂದ್ಯಾವಳಿಯಲ್ಲಿ ಹಣ ಗೆಲ್ಲಿಸುವ ಭರವಸೆ ನೀಡುವಂತಹ ಯಾವುದೇ ಆ್ಯಪ್ ಗಳನ್ನು ನಾವು ಪ್ರೋತ್ಸಾಹಿಸುವುದಿಲ್ಲ’’ ಎಂದು ಅದು ಹೇಳಿಕೆಯಲ್ಲಿ ತಿಳಿಸಿದೆ.

- Advertisement -

ವರದಿಗಳ ಪ್ರಕಾರ, ಗೂಗಲ್ ಪ್ಲೇ ಸ್ಟೋರ್ ನಿಂದ ಅವರ ಆ್ಯಪ್ ಅನ್ನು ತೆಗೆದು ಹಾಕಲಾಗುತ್ತಿದೆ ಮತ್ತು ಇದಕ್ಕಾಗಿ ಅವರು ಯಾವ ಸ್ಪಷ್ಟನೆ ನೀಡ ಬಯಸುತ್ತಾರೆಯೋ ಅದನ್ನು ನೀಡಬಹುದಾಗಿದೆ ಎಂಬ ಮಾಹಿತಿಯನ್ನು ಗೂಗಲ್ ಅವರ ಡೆವಲಪರ್ ಕಂಪೆನಿಗೆ ನೀಡಿದೆ.

ಪೇಟಿಎಂ ಈ ಹೊತ್ತಿನ ಅತ್ಯಂತ ಪ್ರಮುಖ ಆ್ಯಪ್ ಆಗಿ ಮಾರ್ಪಟ್ಟಿದೆ. ಈ ವಿಚಾರದ ಕುರಿತು ಪ್ರತಿಕ್ರಿಯಿಸಿರುವ ಪೇಟಿಎಂ, “ಹೊಸ ಡೌನ್ ಲೋಡ್ ಮತ್ತು ಅಪ್ಡೇಟ್ ಗಳಿಗಾಗಿ ಪೇಟಿಎಂ ಆ್ಯಂಡ್ರಾಯಿಡ್ ಆ್ಯಪ್, ಗೂಗಲ್ ಪ್ಲೇ ಸ್ಟೋರ್ ನಲ್ಲಿ ತಾತ್ಕಾಲಿಕವಾಗಿ ಲಭ್ಯವಿರುವುದಿಲ್ಲ. ಬೇಗನೆ ಇದು ಹಿಂದಿರುಗಲಿದೆ. ನಿಮ್ಮ ಎಲ್ಲಾ ಹಣವು ಸಂಪೂರ್ಣ ಸುರಕ್ಷಿತವಾಗಿದೆ. ನಿಮ್ಮ ಪೇಟಿಎಂ ಅ್ಯಪ್ ಸಾಮಾನ್ಯದಂತೆ  ಬಳಸಿ ಆನಂದಿಸಬಹುದು” ಎಂದು ಹೇಳಿದೆ.

Join Whatsapp