ಅಚ್ಛೇ ದಿನ್! | ಲೋಕಲ್ ಪ್ರಯಾಣಕ್ಕೆ ರೈಲ್ವೆ ಪ್ರಯಾಣ ದರ ದುಪ್ಪಟ್ಟು ಏರಿಕೆ

Prasthutha|

ನವದೆಹಲಿ : ‘ಅಚ್ಛೇ ದಿನ್’ ನೀಡುವುದಾಗಿ ಭರವಸೆ ನೀಡಿ ಅಧಿಕಾರಕ್ಕೆ ಬಂದಿರುವ ಪ್ರಧಾನಿ ನರೇಂದ್ರ ಮೋದಿ ಸರಕಾರ ಈಗ ಎಲ್ಲಾ ರಂಗದಲ್ಲಿ ವಿಫಲವಾಗಿರುವ ಜೊತೆಗೆ, ಜನ ಸಾಮಾನ್ಯರ ಬದುಕನ್ನು ಇನ್ನಷ್ಟು ಸಂಕಷ್ಟಕ್ಕೆ ಗುರಿಯಾಗಿಸಿರುವ ಬಗ್ಗೆ ಆರೋಪಗಳು ಕೇಳುತ್ತಲೇ ಇವೆ. ಈ ನಡುವೆ, ಅದಕ್ಕೆ ಪೂರಕವೆಂಬಂತೆ ಸರಕಾರದ ನೀತಿಗಳೂ ಪ್ರಕಟವಾಗುತ್ತಿವೆ. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯ ನಡುವೆಯೇ, ಇದೀಗ ಪ್ರಯಾಣಿಕರ ರೈಲುಗಳ ಕಡಿಮೆ ದೂರದ ಪ್ರಯಾಣದ ಟಿಕೆಟ್ ದರ ದುಪ್ಪಟ್ಟು ಏರಿಕೆ ಮಾಡುವ ಮೂಲಕ ನಾಗರಿಕರಿಗೆ ಮತ್ತಷ್ಟು ಶಾಕ್ ನೀಡಲು ಮುಂದಾಗಿದೆ.  

- Advertisement -

ಕೊರೊನದ ನೆಪವೊಡ್ಡಿ ರೈಲ್ವೆ ಸಚಿವಾಲಯ ದರ ಏರಿಕೆಗೆ ಮುಂದಾಗಿದೆ. ಕೊರೊನ ವೈರಸ್ ಬಿಕ್ಕಟ್ಟಿನಿಂದಾಗಿ ಕಳೆದ ಮಾರ್ಚ್ ನಲ್ಲಿಯೇ ಎಲ್ಲಾ ಪ್ಯಾಸೆಂಜರ್ ರೈಲುಗಳನ್ನು ಬಂದ್ ಮಾಡಲಾಗಿತ್ತು. ಬಹುತೇಕ ರೈಲುಗಳ ಸಂಚಾರ ಸ್ಥಗಿತಗೊಂಡಿತ್ತು. ಬಳಿಕ ದೂರದ ಪ್ರಯಾಣಕ್ಕಾಗಿ ವಿಶೇಷ ರೈಲುಗಳನ್ನು ಮಾತ್ರ ಅನುಮತಿಸಲಾಗಿತ್ತು.

ಇದೀಗ ಕಡಿಮೆ ದೂರದ ಪ್ರಯಾಣಿಕರ ರೈಲುಗಳನ್ನೂ ವಿಶೇಷ ರೈಲುಗಳಾಗಿ ಪರಿವರ್ತಿಸಿ, ಪ್ರಯಾಣಿಕರ ದರ ಹೆಚ್ಚಿಸಲಾಗಿದೆ. ಉದಾಹರಣೆಗೆ, ಅಮೃತಸರದಿಂದ ಪಠಾಣ್ ಕೋಟ್ ಟಿಕೆಟ್ ದರ ಈಗ 55 ರೂ., ಇದಕ್ಕೂ ಮೊದಲು ಇದು 25 ರೂ. ಆಗಿತ್ತು. ಜಲಂಧರ್ ನಿಂದ ಫಿರೋಜ್ ಪುರ ನಡುವಿನ ಪ್ರಯಾಣಕ್ಕೆ ಈಗಿನ ಬೆಲೆ 60 ರೂ., ಮೊದಲು ಇದು 30 ರೂ. ಆಗಿತ್ತು. ಹೀಗೆ ಬಹುತೇಕ ಪ್ಯಾಸೆಂಜರ್ ರೈಲಿಗೆ ಮೊದಲಿರುವ ದರದ ದುಪ್ಪಟ್ಟು ದರವನ್ನು ನಿಗದಿಪಡಿಸಲಾಗಿದೆ ಎಂದು ತಿಳಿದುಬಂದಿದೆ.

- Advertisement -

ಕಡಿಮೆ ದೂರದ ಅನಗತ್ಯ ಪ್ರಯಾಣವನ್ನು ತಪ್ಪಿಸುವ ಉದ್ದೇಶದಿಂದ ಬೆಲೆ ಏರಿಕೆ ಮಾಡಲಾಗಿದೆ ಎನ್ನಲಾಗುತ್ತಿದೆ. ಕಡಿಮೆ ದೂರದ ಪ್ರಯಾಣಕ್ಕಾಗಿ ಪ್ರಯಾಣಿಕರು ಬದಲಿ ವ್ಯವಸ್ಥೆ ಮಾಡಿಕೊಳ್ಳಲಿ ಎಂದಂತಾಗಿದೆ.



Join Whatsapp