ಫೇಸ್ ಬುಕ್ – ಬಿಜೆಪಿ ಅನೈತಿಕ ನಂಟು | ಸಂಸದೀಯ ಸಮಿತಿ ವಿಚಾರಣೆಗೆ ಎಫ್ ಬಿ ಇಂಡಿಯಾ ಮುಖ್ಯಸ್ಥ ಹಾಜರು

Prasthutha|

ನವದೆಹಲಿ : ಫೇಸ್ ಬುಕ್ ಮತ್ತು ದೇಶದ ಆಡಳಿತಾರೂಢ ಬಿಜೆಪಿ ನಡುವಿನ ಅನೈತಿಕ ನಂಟಿನ ಕುರಿತಂತೆ ವ್ಯಾಪಕ ವರದಿಗಳಾಗುತ್ತಿರುವ ನಡುವೆ, ಫೇಸ್ ಬುಕ್ ಭಾರತದ ಮುಖ್ಯಸ್ಥ ಅಜಿತ್ ಮೋಹನ್ ಮಾಹಿತಿ ತಂತ್ರಜ್ಞಾನದ ಸಂಸದೀಯ ಸ್ಥಾಯಿ ಸಮಿತಿ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ.

- Advertisement -

ನಾವು ಸುಮಾರು ಮೂರೂವರೆ ಗಂಟೆಗಳ ಕಾಲ ಚರ್ಚೆ ನಡೆಸಿದೆವು ಮತ್ತು ಫೇಸ್ ಬುಕ್ ಪ್ರತಿನಿಧಿ ಸೇರಿದಂತೆ ಮುಂದಿನ ಹಂತದ ಮಾತುಕತೆಗೆ ಮತ್ತೆ ಸೇರುವುದಾಗಿ ನಿರ್ಧರಿಸಿದೆವು ಎಂದು ಸ್ಥಾಯಿ ಸಮಿತಿಯ ಅಧ್ಯಕ್ಷ ಶಶಿ ತರೂರ್ ಟ್ವೀಟ್ ಮಾಡಿದ್ದಾರೆ. ಮೂರು ಅಜೆಂಡಾಗಳೊಂದಿಗೆ ಸ್ಥಾಯಿ ಸಮಿತಿಯ ಸಭೆ ನಡೆದಿದೆ. ಈ ಮೂರು ಅಜೆಂಡಾಗಳಲ್ಲಿ ವಿಷಯಕ್ಕೆ ಸಂಬಂಧಿಸಿ ಫೇಸ್ ಬುಕ್ ಇಂಡಿಯಾದ ಪ್ರತಿನಿಧಿಗಳ ನಿಲುವನ್ನು ಆಲಿಸುವುದೂ ಸೇರಿತ್ತು. ಸಾಮಾಜಿಕ ಜಾಲತಾಣಗಳ ದುರ್ಬಳಕೆಗೆ ಸಂಬಂಧಿಸಿ ನಾಗರಿಕರ ಹಕ್ಕುಗಳ ರಕ್ಷಣೆ ಕುರಿತಂತೆ ಮಾತುಕತೆ ನಡೆಯಿತು.

ಸಭೆಯಲ್ಲಿ ಬಿಜೆಪಿ ಸಂಸದ ರಾಜ್ಯವರ್ಧನ ರಾಥೋಡ್ ಕೂಡ ಉಪಸ್ಥಿತರಿದ್ದು, ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದ್ದಾರೆ. ಆದರೆ, ಫೇಸ್ ಬುಕ್ ಇಂಡಿಯಾ ದೇಶದ ಜನಕ್ಕೆ ಉತ್ತರ ನೀಡಬೇಕಾಗಿದೆ ಮತ್ತು ಹಲವಾರು ವಿಷಯಗಳ ಬಗ್ಗೆ ಪ್ರಶ್ನಿಸಲಾಯಿತು ಎಂದು ಅವರು ಹೇಳಿದ್ದಾರೆ. ಸಮತಿಯು ಅಜಿತ್ ಮೋಹನ್ ಅವರಿಗೆ 90 ಪ್ರಶ್ನೆಗಳನ್ನು ನೀಡಿದ್ದು, ಅದಕ್ಕೆ ಅವರು ಲಿಖಿತವಾಗಿ ಉತ್ತರಿಸಬೇಕಾಗಿದೆ. ಇದೀಗ ಅವರು ಮೌಖಿಕ ಉತ್ತರ ನೀಡಿದ್ದಾರೆ ಎನ್ನಲಾಗಿದೆ.
ವಾಲ್ ಸ್ಟ್ರೀಟ್ ಜರ್ನಲ್ ನಲ್ಲಿ ಫೇಸ್ ಬುಕ್ ಮತ್ತು ಬಿಜೆಪಿ ಅನೈತಿಕ ನಂಟಿನ ಕುರಿತಂತೆ ವರದಿಗಳಾದ ಬಳಿಕ, ಶಶಿ ತರೂರ್ ಆಡಳಿತಾರೂಢ ಪಕ್ಷವನ್ನು ಕಟುವಾಗಿ ಟೀಕಿಸುತ್ತಾ ಬಂದಿದ್ದಾರೆ.

Join Whatsapp