ಬೆಂಗಳೂರು: ನಗರದಲ್ಲಿ ಅಕ್ರಮವಾಗಿ ನೆಲೆಸಿದ್ದ ಪಾಕಿಸ್ತಾನದ ಇಕ್ರಾ ಜೀವನಿ (19) ಎಂಬ ಯುವತಿ ಹಾಗೂ ಆಕೆಯ ಪತಿ ಸೇರಿದಂತೆ ಇಬ್ಬರನ್ನು ಬಂಧಿಸಿರುವ ಬೆಳ್ಳಂದೂರು ಪೊಲೀಸರು ತೀವ್ರ ವಿಚಾರಣೆ ಕೈಗೊಂಡಿದ್ದಾರೆ.
ಉತ್ತರಪ್ರದೇಶ ಮೂಲದ ಮುಲಾಯಂ ಸಿಂಗ್ ಜೊತೆ ಮದುವೆ ಆಗಿದ್ದ ಪಾಕಿಸ್ತಾನದ ಇಕ್ರಾ, ಬೆಂಗಳೂರಿನ ಸರ್ಜಾಪುರ ರಸ್ತೆಯ ಜುನ್ನಸಂದ್ರದಲ್ಲಿ ನೆಲೆಸಿದ್ದರು.
ಖಚಿತವಾದ ಮಾಹಿತಿಯನ್ನು ಅಧರಿಸಿ ಕಾರ್ಯಾಚರಣೆ ಕೈಗೊಂಡ ಪೊಲೀಸರು, ಪಾಕ್ ಯುವತಿ ಇಕ್ರಾ ಜೀವನಿ ಹಾಗೂ ಆಕೆಯ ಪತಿ ಮುಲಾಯಂ ಸಿಂಗ್ ಇಬ್ಬರನ್ನೂ ಬಂಧಿಸಿದ್ದಾರೆ.
ನೇಪಾಳದ ಮೂಲಕ ಭಾರತ ಗಡಿ ಪ್ರವೇಶಿಸಿದ್ದ ಪಾಕ್’ನ ಇಕ್ರಾ, ಡೇಟಿಂಗ್ ಆ್ಯಪ್ ಮೂಲಕ ಮುಲಾಯಂ ಸಿಂಗ್ ಜೊತೆ ಮದುವೆಯಾಗಿ ಜುನ್ನಸಂದ್ರದಲ್ಲಿ ನೆಲೆಸಿದ್ದಳು. ಈ ನಡುವೆ ತನ್ನ ತಾಯಿಯನ್ನು ಸಂಪರ್ಕಿಸಲು ಯತ್ನಿಸಿದ್ದ ಇಕ್ರಾ ಬಗ್ಗೆ ಕೇಂದ್ರ ಗುಪ್ತಚರ ಇಲಾಖೆ ರಾಜ್ಯಕ್ಕೆ ಮಾಹಿತಿ ನೀಡಿತ್ತು.
ಮಾಹಿತಿ ಮೇರೆಗೆ ವಿಶೇಷ ಕಾರ್ಯಾಚರಣೆ ನಡೆಸಿ ಇಕ್ರಾ ಜೀವನಿ, ಮುಲಾಯಂನನ್ನು ಬಂಧಿಸಲಾಗಿದೆ. ವಿಚಾರಣೆ ವೇಳೆ ರಾವಾ ಯಾದವ್ ಎಂದು ಹೆಸರು ಬದಲಿಸಿ ಪಾಸ್’ಪೋರ್ಟ್’ಗೆ ಅರ್ಜಿ ಹಾಕಿರುವ ವಿಷಯ ಬಹಿರಂಗವಾಗಿದೆ. ಈ ಬಗ್ಗೆ ಪೊಲೀಸರು ಎಫ್ಆರ್’ಆರ್’ಒ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಇಕ್ರಾಳನ್ನು ಮಹಿಳಾ ಪುನರ್ವಸತಿ ಕೇಂದ್ರದಲ್ಲಿರಿಸಲಾಗಿದೆ.
ಗೇಮ್ ಆ್ಯಪ್ ಮೂಲಕ ಪರಿಚಯ
ಗೇಮ್ ಆ್ಯಪ್ ಲೂಡೊ ಆಟದ ಮುಖಾಂತರ ಇಕ್ರಾ ಹಾಗೂ ಮುಲಾಯಂ ಪರಸ್ಪರ ಪರಿಚಯವಾಗಿದೆ. ಬಳಿಕ ಒಬ್ಬರ ನಡುವೆ ಪ್ರೀತಿ ಶುರುವಾಗಿ ಇಬ್ಬರೂ ಮದುವೆಯಾಗಲು ನಿರ್ಧರಿಸಿದ್ದರು. ಆಗ ಇಕ್ರಾ ಪಾಕಿಸ್ತಾನ ತೊರೆದು ಭಾರತಕ್ಕೆ ಬಂದಿದ್ದಳು. ಮುಲಾಯಂ ಸಿಂಗ್ ಬೆಂಗಳೂರಿನ ಖಾಸಗಿ ಕಂಪನಿಯ ಸೆಕ್ಯೂರಿಟಿಯಾಗಿದ್ದಾನೆ.
ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಇಕ್ರಾ ಭಾರತಕ್ಕೆ ಬಂದಿದ್ದಳು. ಸದ್ಯ ಈಗ ಇಬ್ಬರ ವಿರುದ್ಧವೂ ಎಫ್’ಐಆರ್ ದಾಖಲಾಗಿದೆ.