ಮಸ್ಕತ್: ಬ್ಯಾರೀಸ್ ಟ್ರೋಫಿ 2023; ಟೀಮ್ ಶೃಜನ್ ಚಾಂಪಿಯನ್, ಅರೇಬಿಯನ್ ಗೈಯ್ಸ್ ರನ್ನರ್ ಅಪ್

Prasthutha|

ಮಸ್ಕತ್: ಇಂಡಿಯನ್ ಸೋಶಿಯಲ್ ಕ್ಲಬ್ ಒಮಾನ್ ಇದರ ಬ್ಯಾರಿ ವಿಂಗ್ ವತಿಯಿಂದ ನಗರದ ವಾದಿಕಬೀರ್ ಮಸ್ಕತ್ ಕ್ರಿಕೆಟ್ ಕ್ಲಬ್ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ “ಬ್ಯಾರೀಸ್ ಟ್ರೋಫಿ 2023” ಅಹರ್ನಿಶಿ ಕ್ರಿಕೆಟ್ ಟೂರ್ನಿಯ ಚಾಂಪಿಯನ್ ಪಟ್ಟವನ್ನು ಮಂಗಳೂರು ಕರಾವಳಿಯ ಶೃಜನ್ ತಂಡ ಅಲಂಕರಿಸಿತು.

ರನ್ನರ್ ಅಪ್ ಪ್ರಶಸ್ತಿಯನ್ನು ಅರೇಬಿಯನ್ ಗೈಯ್ಸ್ ತಂಡ ತನ್ನದಾಗಿಸಿಕೊಂಡಿತು. ಕರ್ನಾಟಕದ ಒಟ್ಟು 22 ತಂಡ ಭಾಗವಹಿಸಿದ್ದ 30 ಗಜಗಳ ಚುಟುಕು ಕ್ರಿಕೆಟ್ ಪಂದ್ಯಾವಳಿಯನ್ನು ಒಮಾನ್ ರಾಷ್ಟ್ರೀಯ ಕ್ರಿಕೆಟ್ ತಂಡದ ಕಪ್ತಾನ ಝೀಶಾನ್ ಮಕ್ಸೂದ್ ಉದ್ಘಾಟಿಸಿದರು. ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಗಳಾಗಿ ಇಂಡಿಯನ್ ಸೋಶಿಯಲ್ ಕ್ಲಬ್ ಒಮಾನ್ ಪ್ರಧಾನ ಕಾರ್ಯದರ್ಶಿ ಬಾಬು ರಾಜೇಂದ್ರನ್, ಡಿಕೆಎಸ್’ಸಿ ಒಮಾನ್ ಅಧ್ಯಕ್ಷ ಮೋನಬ್ಬ ಬ್ಯಾರಿ, ಇಂಡಿಯನ್ ಸೋಶಿಯಲ್ ಕ್ಲಬ್  ತುಳು ವಿಂಗ್ ಕನ್ವೀನರ್ ರಮಾನಂದ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

- Advertisement -

ಇದೇ ಸಂದರ್ಭದಲ್ಲಿ ಒಮಾನ್ ರಾಷ್ಟ್ರೀಯ ಕ್ರಿಕೆಟ್ ತಂಡದ ಕಪ್ತಾನ ಝೀಶಾನ್ ಮಕ್ಸೂದ್ ಅವರನ್ನು ಶಾಲುಹೊದಿಸಿ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಇಂಡಿಯನ್ ಸೋಶಿಯಲ್ ಕ್ಲಬ್  ಬ್ಯಾರಿ ವಿಂಗ್ ಕನ್ವೀನರ್ ಫಯಾಝ್ ಹಸೈನಾರ್ ವಹಿಸಿದ್ದರು. ಕಾರ್ಯಕ್ರಮವನ್ನು ಮೊಹ್ಸಿನ್ ಬ್ಯಾರಿ ನಿರ್ವಹಿಸಿದರು.

“ಬ್ಯಾರೀಸ್ ಟ್ರೋಫಿ 2023” ಕ್ರಿಕೆಟ್ ಟೂರ್ನಿಯ ಚಾಂಪಿಯನ್ ವಿಜೇತ ಟೀಮ್  ಶೃಜನ್ ತಂಡದ ನಾಯಕ ಸಚಿನ್ ಹಾಗೂ ವ್ಯವಸ್ಥಾಪಕ ಅನಿಲ್ ಅವರಿಗೆ ಬ್ಯಾರಿ ವಿಂಗ್ ಕನ್ವೀನರ್ ಫಯಾಝ್ ಹಸೈನಾರ್ ಟ್ರೋಫಿ ಮತ್ತು ನಗದು ಪ್ರಶಸ್ತಿಯನ್ನು ಪ್ರದಾನಿಸಿದರು. ರನ್ನರ್ ಅಪ್ ತಂಡ ಅರೇಬಿಯನ್ ಗೈಯ್ಸ್ ಕಪ್ತಾನ ನೂರ್ ಪಡುಬಿದ್ರೆ ಅವರಿಗೆ ಬ್ಯಾರಿ ವಿಂಗ್ ಟ್ರೆಶರರ್ ಸಹಾಬುದ್ದೀನ್ ಪ್ರಶಸ್ತಿ ವಿತರಿಸಿದರು. ಪಂದ್ಯಾಕೂಟದ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಅರೇಬಿಯನ್ ತಂಡದ ಖಲಂದರ್ ಕೊಕ್ಕಡ ಹಾಗೂ ಫೈನಲ್ ಪಂದ್ಯದ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಟೀಮ್ ಶೃಜನ್ ತಂಡದ ಸಚಿನ್ ಪಡೆದುಕೊಂಡರು. ಟೂರ್ನಿಯ ಶಿಸ್ತಿನ ತಂಡ ಪ್ರಶಸ್ತಿಯನ್ನು ಮಂಗಳೂರು ಇಲೆವನ್ ತಂಡದ ನಾಯಕ ಅಲ್ಫಾಝ್ ಅವರಿಗೆ ನೀಡಲಾಯಿತು.

- Advertisement -