ಲಕ್ನೋ: ಮುಂದಿನ ವರ್ಷ ನಡೆಯಲಿರುವ ಯುಪಿ ಚುನಾವಣೆಯಲ್ಲಿ ನಮ್ಮ ಪಕ್ಷವು 100 ಸೀಟುಗಳಲ್ಲಿ ಸ್ಪರ್ಧಿಸಲಿದೆಯೆಂದು ಆಲ್ ಇಂಡಿಯಾ ಮಜ್ಲಿಸ್-ಇ-ಇತ್ತೇಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಅಧ್ಯಕ್ಷ ಅಸದುದ್ದೀನ್ ಉವೈಸಿ ಮಂಗಳವಾರ ತಿಳಿಸಿದ್ದಾರೆ.
ನಾವು ಯಾರ ಗುಲಾಮರಲ್ಲ, ಪ್ರಸಕ್ತ ನಾವು ನಮ್ಮ ಹಿತಕ್ಕಾಗಿ ಕೆಲಸ ನಿರ್ವಹಿಸುತ್ತೇವೆ. ಕಳೆದ ದಶಕಗಳಲ್ಲಿ ಎಲ್ಲಾ ಪಕ್ಷಗಳು ಮುಸ್ಲಿಮರ ಲಾಭ ಪಡೆದು ಅವರಿಗೆ ವಂಚನೆ ಮಾಡಿದೆ ಎಂದು ವಾಗ್ದಾಳಿ ನಡೆಸಿದರು.
ಯುಪಿ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವುದು ತಮ್ಮ ಮುಖ್ಯ ಗುರಿಯಾಗಿದೆ ಎಂದು ಹೇಳಿದರು. ಎಂ.ಐ.ಎಂ ನಿಂದ ಹಿಂದೂಗಳಿಗೆ ಟಿಕೆಟ್ ನೀಡಲು ಸಿದ್ದರಿದ್ದೀರಾ ಎಂಬ ಪತ್ರಕರ್ತರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಉವೈಸಿ, ಹಿಂದು ಧರ್ಮೀಯರು ನಮ್ಮ ಸಹೋದರರಾದ ಕಾರಣ ಅವರಿಗೆ ಟಿಕೆಟ್ ನೀಡುವುದರಲ್ಲಿ ತಪ್ಪೇನಿದೆ ಎಂದು ಮರು ಪ್ರಶ್ನೆ ಹಾಕಿದರು.
ಈ ಮಧ್ಯೆ ಮಾಫಿಯಾ ಡಾನ್ ರಾಜಕಾರಣಿಯಾಗಿರುವ ಅತೀಕ್ ಅಹ್ಮದ್ ಅವರ ಪತ್ನಿ ಶೈಸ್ತಾ ಪರ್ವೀನ್ ಮಂಗಳವಾರ ತನ್ನ ಕುಟುಂಬದೊಂದಿಗೆ ಎ.ಐ.ಎಂ.ಐ.ಎಂ ಗೆ ಸೇರ್ಪಡೆಗೊಂಡರು. ಪ್ರಸಕ್ತ ಅತೀಕ್ ಅಹ್ಮದ್ ಯೋಗಿ ಆದಿತ್ಯನಾಥ್ ಸರ್ಕಾರವನ್ನು ಟೀಕಿಸಿದ ಆರೋಪದಲ್ಲಿ ಗುಜರಾತಿನ ಅಹ್ಮದಾಬಾದ್ ನ ಸಬರಮತಿ ಜೈಲಿನಲ್ಲಿದ್ದಾರೆ.