ಕೇರಳದ ರಸ್ತೆಗಳಲ್ಲಿ ಅತ್ಯಾಧುನಿಕ ಕ್ಯಾಮೆರಾಗಳ ಕಣ್ಗಾವಲು: ನಿಯಮ ಉಲ್ಲಂಘನೆಗೆ ಭಾರಿ ದಂಡ

Prasthutha: April 12, 2022

ಟ್ರಾಫಿಕ್ ನಿಯಮ ಉಲ್ಲಂಘನೆಗಳನ್ನು ಪತ್ತೆಹಚ್ಚಲು ಕೇರಳದ ರಸ್ತೆಗಳಲ್ಲಿ 235 ಕೋಟಿ ರೂಪಾಯಿ ವೆಚ್ಚದಲ್ಲಿ ಅತ್ಯಾಧುನಿಕ ತಂತ್ರಜ್ಞಾನದ 726 AI ಕ್ಯಾಮೆರಾಗಳನ್ನು ಸ್ಥಾಪಿಸಲಾಗಿದೆ. ಮೋಟಾರು ವಾಹನ ಇಲಾಖೆ (ಎಂವಿಡಿ) ಗೆ ಕ್ಯಾಮೆರಾಗಳ ನಿಯಂತ್ರಣ ಜವಾಬ್ದಾರಿಯನ್ನು ವಹಿಸಲಾಗಿದೆ.

ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳು, ಜಿಲ್ಲಾ ಪಂಚಾಯತ್ ರಸ್ತೆ ಸೇರಿದಂತೆ ಟ್ರಾಫಿಕ್ ಸಿಗ್ನಲ್‌ಗಳು, ಜನನಿಬಿಡ ಜಂಕ್ಷನ್‌ಗಳಲ್ಲೂ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಹಗಲು ಮತ್ತು ರಾತ್ರಿಯಲ್ಲಿನ ನಿಯಮಗಳ ಉಲ್ಲಂಘನೆಯನ್ನು ಪತ್ತೆಹಚ್ಚುವಲ್ಲಿ ಈ ಅತ್ಯಾಧುನಿಕ ಕ್ಯಾಮೆರಾಗಳು ಎಂವಿಡಿಗೆ ಸಹಾಯಕವಾಗಲಿದೆ. ಹೆಲ್ಮೆಟ್, ಸೀಟ್ ಬೆಲ್ಟ್ ಧರಿಸದೇ ಇರುವುದು, ಹೆದ್ದಾರಿಗಳಲ್ಲಿ ನಿಯಮಿತ ವೇಗದ ಮೀತಿಯನ್ನು ಮೀರಿ ವಾಹನ ಚಲಾಯಿಸುವುದು, ದ್ವಿಚಕ್ರ ವಾಹನದಲ್ಲಿ ಇಬ್ಬರಿಗಿಂತ ಹೆಚ್ಚು ಮಂದಿ ಪ್ರಯಾಣಿಸುವುದು ಸೇರಿದಂತೆ 800 ಮೀಟರ್ ವ್ಯಾಪ್ತಿಯಲ್ಲಿ ನಡೆಯುವ ಉಲ್ಲಂಘನೆಗಳನ್ನು ಕ್ಯಾಮೆರಾಗಳು ಪತ್ತೆ ಹಚ್ಚಲಿದೆ.

ವಿಂಡ್ ಶೀಲ್ಡ್ ಮೂಲಕ ಕಾರುಗಳ ಒಳಭಾಗವೂ ಕ್ಯಾಮೆರಾದಲ್ಲಿ ಗೋಚರಿಸಲಿದೆ. ನೋಂದಣಿ ಸಂಖ್ಯೆಯ ಚಿತ್ರ ಸೆರೆಹಿಡಿದು ಆ ಮೂಲಕ ವಾಹನದ ಮಾಲೀಕರಿಗೆ ಚಲನ್ ನೀಡಲು AI ಕ್ಯಾಮೆರಾಗಳು ಎಂವಿಡಿಗೆ ಸಹಾಯಕವಾಗಲಿದೆ. ಕೇರಳ ಸ್ಟೇಟ್ ಇಲೆಕ್ಟ್ರಾನಿಕ್ಸ್ ಡೆವಲಪ್‌ಮೆಂಟ್ ಕಾರ್ಪೊರೇಷನ್ ಲಿಮಿಟೆಟ್‌ನ ಉದ್ಯಮವಾಗಿರುವ ʻಕೆಲ್ಟ್ರಾನ್ʼ ಕ್ಯಾಮೆರಾಗಳನ್ನು ಸ್ಥಾಪಿಸುತ್ತಿದೆ. ಸ್ಥಳಗಳ ಪಟ್ಟಿಯನ್ನು ಮೋಟಾರು ವಾಹನ ಇಲಾಖೆಯು ಈಗಾಗಲೇ ಕೆಲ್ಟ್ರಾನ್‌ಗೆ ಕಳುಹಿಸಿದೆ. ಕ್ಯಾಮೆರಾಗಳ ಮುಖ್ಯ ನಿಯಂತ್ರಣ ಸರ್ವರ್ ತಿರುವನಂತಪುರದಲ್ಲಿ ಕಾರ್ಯಾಚರಿಸಲಿದೆ.

ಕಾಸರಗೋಡಿನಲ್ಲಿ 44 ಕ್ಯಾಮೆರಾಗಳು, ಕಣ್ಣೂರ್ ನಗರದಲ್ಲಿ 50-60 ಕ್ಯಾಮೆರಾಗಳು, ವಯನಾಡು ಮತ್ತು ಇಡುಕ್ಕಿಯಲ್ಲಿ ಸುಮಾರು 30-45 ಕ್ಯಾಮೆರಾಗಳನ್ನು ಸ್ಥಾಪಿಸಲಾಗಿದೆ. ರಾಜಧಾನಿ ತಿರುವನಂತಪುರಂ, ಎರ್ನಾಕುಲಂ ಮತ್ತು ಕೋಝಿಕ್ಕೋಡ್ ನಗರಗಳಲ್ಲಿ 60 ಕ್ಯಾಮೆರಾಗಳು ಕಾರ್ಯನಿರ್ವಹಿಸುತ್ತಿದೆ.

ನಿಯಮಗಳನ್ನು ಉಲ್ಲಂಘಿಸುವವರ ಚಿತ್ರಗಳನ್ನು ಸ್ವಯಂಚಾಲಿತವಾಗಿ ಸೆರೆಹಿಡಿಯುವ ಕ್ಯಾಮೆರಾ, ಬಳಿಕ ಅವುಗಳನ್ನು ನಿಯಂತ್ರಣ ಕೊಠಡಿಗೆ ರವಾನಿಸುತ್ತವೆ. ಈ ಕ್ಯಾಮೆರಾಗಳು ಸೌರ ಶಕ್ತಿಯ ಮೇಲೆ ಕಾರ್ಯನಿರ್ವಹಿಸುತ್ತವೆ.
ಕೇರಳದಲ್ಲಿ ಕಳೆದ ಕೆಲವು ತಿಂಗಳುಗಳಲ್ಲಿ ಅಪಘಾತಗಳು ಮತ್ತು ಸಂಚಾರ ನಿಯಮ ಉಲ್ಲಂಘನೆಗಳ ಸಂಖ್ಯೆ ಹೆಚ್ಚಾಗಿದೆ. ಕಳೆದ ವರ್ಷ ಜೂನ್ವರೆಗೆ 2,269 ಅಪಘಾತಗಳು ಸಂಭವಿಸಿದ್ದು, ಈ ಪೈಕಿ 769 ಉಲ್ಲಂಘನೆಗಳು ನಗರದಲ್ಲಿ ಮತ್ತು 1,500 ಗ್ರಾಮೀಣ ಪ್ರದೇಶದಲ್ಲಿ ಸಂಭವಿಸಿವೆ. ಈ ಅಪಘಾತಗಳಲ್ಲಿ 201 ಜನರು ಸಾವನ್ನಪ್ಪಿದ್ದಾರೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!