‘ಲವ್‌ಜಿಹಾದ್’ ವಿರುದ್ಧ ಸುಗ್ರೀವಾಜ್ಞೆಗೆ ಮುಂದಾದ ಯೋಗಿ ಸರಕಾರ!

Prasthutha|

 ಹೊಸದಿಲ್ಲಿ: ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರಕಾರವು ಧಾರ್ಮಿಕ ಮತಾಂತರದ ವಿರುದ್ಧ ಸುಗ್ರೀವಾಜ್ಞೆಯನ್ನು ಪ್ರಕಟಿಸಲು ಸಜ್ಜಾಗಿದೆ ಎಂದು ಸುದ್ದಿ ಸಂಸ್ಥೆ ಐಎಎನ್‌ಎಸ್ ವರದಿ ಮಾಡಿದೆ.

 ಏಜೆನ್ಸಿ ಉಲ್ಲೇಖಿಸಿದ ಮೂಲದ ಪ್ರಕಾರ, ‘‘ರಾಜ್ಯದಲ್ಲಿ ಹೆಚ್ಚುತ್ತಿರುವ ‘ಲವ್‌ಜಿಹಾದ್’ ಪ್ರಕರಣಗಳ ದೃಷ್ಟಿಯಿಂದ ಇದನ್ನು ಮಾಡಲಾಗುತ್ತಿದೆ’’.

- Advertisement -

 ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಈ ವಾರದಲ್ಲಿ ಎರಡು ದಿನಗಳ ಕಾಲ ನಡೆಸಿದ ಲಕ್ನೋ ಭೇಟಿಯಲ್ಲಿ ಧಾರ್ಮಿಕ ಮತಾಂತರದ ವಿಷಯವನ್ನೂ ಎತ್ತಿದ್ದಾರೆ ಎಂದು ಸುದ್ದಿ ಸಂಸ್ಥೆ ಮತ್ತೊಂದು ಮೂಲವನ್ನು ಉಲ್ಲೇಖಿಸಿದೆ.

 ಹಿಂದೂ ಹುಡುಗಿಯರನ್ನು ಇಸ್ಲಾಮ್‌ಗೆ ಮತಾಂತರಿಸಲು ಮುಸ್ಲಿಮ್ ಯುವಕರು ‘ಲವ್ ಜಿಹಾದ್’ನಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಿಕೊಂಡು ‘ಲವ್‌ಜಿಹಾದ್’ ಹೆಸರಿನಲ್ಲಿ ಮುಸ್ಲಿಮ್ ಸಮುದಾಯವನ್ನು ಕೆಣಕಲು ಬಲಪಂಥೀಯ ಗುಂಪುಗಳು ಪ್ರಚಾರ ನಡೆಸಿವೆ. ಅದಾಗ್ಯೂ, ಅಂತಹ ಪಿತೂರಿ ಅಸ್ತಿತ್ವದಲ್ಲಿದೆ ಎಂದು ಎಂದಿಗೂ ಸಾಬೀತುಗೊಂಡಿಲ್ಲ.

ರಿಹಾಯಿ ಮಂಚ್‌ನ ಪ್ರಧಾನ ಕಾರ್ಯದರ್ಶಿ ರಾಜೀವ್ ಯಾದವ್, ಯೋಗಿಯ ಯೋಜನೆ ದೋಷಪೂರಿತವಾಗಿದೆ ಎಂದು ಹೇಳಿದ್ದಾರೆ. ‘‘ಈ ಸುಗ್ರೀವಾಜ್ಞೆಯು ಅತ್ಯಂತ ಕಾನೂನುಬಾಹಿರ, ಅಸಂವಿಧಾನಿಕ, ಕೋಮುವಾದಿ, ಮಹಿಳಾ ವಿರೋಧಿ ಮತ್ತು ಬ್ರಾಹ್ಮಣ್ಯ ಸ್ವರೂಪದ್ದಾಗಿದೆ. ಇಂತಹ ಕಾನೂನು ಕೋಮುವಾದಿ ಶಕ್ತಿಗಳಿಗೆ ಕಾನೂನನ್ನು ಕೈಗೆ ತೆಗೆದುಕೊಳ್ಳಲು ಪರವಾನಗಿ ನೀಡುತ್ತದೆ’’ ಎಂದು ಹೇಳಿದ್ದಾರೆ.

 ‘‘ಕೇಸರಿ ಸಿದ್ದಾಂತ ಮತ್ತು ಮನುವಾದಿ ಜನರು ಯಾವಾಗಲೂ ದ್ವೇಷ ಮತ್ತು ಪ್ರಾಬಲ್ಯದ ರಾಜಕೀಯವನ್ನು ಪ್ರಚಾರ ಮಾಡಿದ್ದಾರೆ. ಭವಿಷ್ಯದಲ್ಲಿ ಮೇಲ್ಜಾತಿ ಮತ್ತು ಕೆಳಜಾತಿಯ ಜನರ ನಡುವಿನ ವಿವಾಹವನ್ನು ತಡೆಯಲು ಸರಕಾರ ಕಾನೂನು ತರಲಿದೆ’’ ಎಂದು ಯಾದವ್ ಹೇಳಿದ್ದಾರೆ.

 ಈ ಸುಗ್ರೀವಾಜ್ಞೆಯು ಸಮಾಜದ ಕೋಮು ಸೌಹಾರ್ದಕ್ಕೆ ಧಕ್ಕೆ ತರುತ್ತದೆ.  ದಂಪತಿಗಳು ತಮ್ಮದೇ ಆದ ಆಯ್ಕೆಯೊಂದಿಗೆ ವಿವಾಹವಾದರೆ ಪುರುಷರನ್ನು ಅಪಹರಣ ಮತ್ತು ಅತ್ಯಾಚಾರದ ಸುಳ್ಳಾರೋಪಗಳಲ್ಲಿ ಸಿಲುಕಿಸಲಾಗುತ್ತದೆ ಎಂಬ ಅಂಶವನ್ನು ಗಮನಕ್ಕೆ ತರುತ್ತದೆ. ‘‘ಇದು ರಾಜ್ಯದಲ್ಲಿ ಮುಸ್ಲಿಮ್ ಯುವಕರ ಮೇಲಿನ ದೌರ್ಜನ್ಯವನ್ನು ಹೆಚ್ಚಿಸುತ್ತದೆ’’ ಎಂದು ಯುಪಿ ನಿವಾಸಿ ಮತ್ತು ಸಾಮಾಜಿಕ ಕಾರ್ಯಕರ್ತ ಆಝಾದ್ ಹೇಳಿದ್ದಾರೆ.

 ಪ್ರಸ್ತುತ ಅರುಣಾಚಲ ಪ್ರದೇಶ, ಒಡಿಶಾ, ಮಧ್ಯಪ್ರದೇಶ, ಛತ್ತೀಸ್‌ಗಢ, ಗುಜರಾತ್, ಹಿಮಾಚಲ ಪ್ರದೇಶ, ಜಾರ್ಖಂಡ್ ಮತ್ತು ಉತ್ತರಾಖಂಡ್ ರಾಜ್ಯಗಳು ಮತಾಂತರ ವಿರೋಧಿ ಕಾನೂನುಗಳನ್ನು ಹೊಂದಿವೆ.

 1967ರಲ್ಲಿ ಈ ಕಾನೂನನ್ನು ಜಾರಿಗೆ ತಂದ ಮೊದಲ ರಾಜ್ಯ ಒಡಿಶಾ, ನಂತರ 1968ರಲ್ಲಿ ಮಧ್ಯಪ್ರದೇಶ ಜಾರಿಗೆ ತಂದಿದೆ. ‘‘ಉತ್ತರ ಪ್ರದೇಶ ಶೀಘ್ರದಲ್ಲೇ ಒಂಬತ್ತನೇ ರಾಜ್ಯವಾಗಬಹುದು’’ ಎಂದು ಕಾನೂನು ಇಲಾಖೆಯ ಅಧಿಕಾರಿಯೋರ್ವರು ಹೇಳಿದ್ದಾರೆ. ಕಾನ್ಪುರದಲ್ಲಿ ‘ಲವ್‌ಜಿಹಾದ್’ ಎಂದು ಹೇಳಲಾದ 11 ಪ್ರಕರಣಗಳ ತನಿಖೆಗಾಗಿ ರಾಜ್ಯ ಸರಕಾರ ವಿಶೇಷ ತನಿಖಾ ತಂಡವನ್ನು(ಎಸ್‌ಐಟಿ) ರಚಿಸಿದೆ.

ಆದಾಗ್ಯೂ, ಲವ್ ಜಿಹಾದ್ ಅನ್ನು ಕಾನೂನಿನಡಿ ವ್ಯಾಖ್ಯಾನಿಸಲಾಗಿಲ್ಲ ಎಂದು ಕೇಂದ್ರ ಸರಕಾರ ಕೆಲ ಸಮಯಗಳ ಹೇಳಿಕೆ ನೀಡಿದ್ದು ಇಲ್ಲಿ ಉಲ್ಲೇಖಾರ್ಹ.

- Advertisement -