ಕರಾವಳಿಯಲ್ಲಿ ಮಳೆಯ ಆರ್ಭಟ | ತತ್ತರಿಸಿದ ಉಡುಪಿ | ಮುಂದುವರಿದ ರಕ್ಷಣಾ ಕಾರ್ಯಾಚರಣೆ
Prasthutha: September 20, 2020

ಕರ್ನಾಟಕದ ವಿವಿಧ ಭಾಗಗಳಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಕರಾವಳಿಯಲ್ಲಿ ವಿಶೇಷವಾಗಿ ಉಡುಪಿ ಜಿಲ್ಲೆಯ ಹಲವು ಪ್ರದೇಶಗಳು ಈ ಮಹಾಮಳೆಗೆ ತತ್ತರಿಸಿ ಹೋಗಿವೆ. ಉಡುಪಿ, ಕಾರ್ಕಳ, ಕಾಪು, ಬ್ರಹ್ಮಾವರ ಸುತ್ತಮುತ್ತಲ ಪ್ರದೇಶಗಳಲ್ಲಿ ಎಡೆಬಿಡದೆ ಮಳೆ ಸುರಿದಿದ್ದು, ವ್ಯಾಪಕ ಹಾನಿಯಾಗಿರುವುದು ವರದಿಯಾಗಿದೆ.
ಉಡುಪಿ ಜಿಲ್ಲೆಯ ಹಲವು ಪ್ರದೇಶಗಳು ಮುಳುಗಡೆಯ ಭೀತಿಯಲ್ಲಿದ್ದು, ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ಮನೆ, ಅಂಗಡಿ, ರಸ್ತೆ, ವಾಹನಗಳು ಜಲಾವೃತಗೊಂಡಿರುವ ದೃಶ್ಯಗಳು ಕಂಡುಬಂದಿದ್ದು, ಪ್ರವಾಹಪೀಡಿತ ಪ್ರದೇಶಗಳಿಂದ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸುವ ಪ್ರಕ್ರಿಯೆ ಮುಂದುವರಿದಿದೆ.
ಉಡುಪಿ ನಗರ ಮತ್ತು ಆಸುಪಾಸಿನ ಪ್ರದೇಶಗಳಾದ ಅಲೆವೂರು, ಪುತ್ತಿಗೆ, ಗುಂಡಿಬಾಗಿಲು, ಕಲ್ಸಂಕ, ಬೈಲಕೆರೆ, ಆದಿ ಉಡುಪಿ, ಕಿನ್ನಿಮುಲ್ಕಿ, ಕೊಡವೂರು ಮೊದಲಾದ ಪ್ರದೇಶಗಳಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಇಲ್ಲಿ ದಾಖಲೆಯ ನೆರೆ ಉಂಟಾಗಿದೆ. ಈಗಾಗಲೇ ಮಂಗಳೂರಿನಿಂದ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ(NDRF)ವನ್ನು ಕರೆಸಿಕೊಳ್ಳಲಾಗಿದ್ದು, ಈ ತಂಡವು ಜಿಲ್ಲೆಯಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ತನ್ನನ್ನು ತೊಡಗಿಸಿಕೊಂಡಿದೆ. ಕರ್ನಾಟಕ ರಾಜ್ಯ ಪ್ರಾಕೃತಿಕ ವಿಕೋಪ ನಿರೀಕ್ಷಣಾ ಕೇಂದ್ರದ ಅಧಿಕಾರಿಗಳು ಮಲೆನಾಡು, ಕರಾವಳಿ ಪ್ರದೇಶಗಳು ಮತ್ತು ಉತ್ತರದ ಕೆಲವು ಜಿಲ್ಲೆಗಳಲ್ಲಿ ಮುಂದಿನ ಎರಡು ದಿನಗಳ ಕಾಲ ಭಾರೀ ಮಳೆಯಾಗುವ ಸೂಚನೆಯನ್ನು ನೀಡಿದ್ದಾರೆ.
ಈ ಮಧ್ಯೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(PFI)ದ ರೆಸ್ಕ್ಯೂ ಮತ್ತು ರಿಲೀಫ್ ತಂಡವು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದೆ ಮತ್ತು ಸಂತ್ರಸ್ತ ಜನರಿಗೆ ಅಗತ್ಯ ತುರ್ತು ಪರಿಹಾರವನ್ನೂ ಕಲ್ಪಿಸಿದೆ.


