ಕಾಂಗ್ರೆಸ್ ಇಲ್ಲದೆ ವಿರೋಧ ಪಕ್ಷಗಳ ಮೈತ್ರಿಕೂಟ ಸಾಧ್ಯವಿಲ್ಲ: ಸಂಜಯ್ ರಾವುತ್

Prasthutha|

ಮುಂಬೈ: ಕಾಂಗ್ರೆಸ್ ಸಹಭಾಗಿಯಾಗದೆ ವಿರೋಧಪಕ್ಷಗಳ ಮೈತ್ರಿಕೂಟ ರಚನೆ ಅಸಾಧ್ಯ ಎಂದು ಶಿವಸೇನೆಯ ಸಂಸದ ಸಂಜಯ್ ರಾವುತ್ ಮಂಗಳವಾರ ಹೇಳಿದರು. ರಾಹುಲ್ ಗಾಂಧಿ ಅವರನ್ನು ಭೇಟಿಯಾದ ನಂತರ ಮಾತನಾಡಿದ ಅವರು, ವಿರೋಧ ಪಕ್ಷಗಳ ಮೈತ್ರಿಕೂಟ ರಚನೆ ಬಗ್ಗೆ ಶಿವಸೇನೆಗೆ ಆಸಕ್ತಿಯಿದೆ. ಈ ಮೈತ್ರಿಕೂಟದ ಮುಖ ಯಾರಾಗಿರಬೇಕು ಎನ್ನುವುದನ್ನು ಚರ್ಚೆಯ ನಂತರ ನಿರ್ಧರಿಸಬೇಕು. ರಾಹುಲ್ ಗಾಂಧಿ ಅವರು ಶೀಘ್ರ ಮುಂಬೈಗೆ ಬರಲಿದ್ದಾರೆ. ದೇಶದಲ್ಲಿ ಒಂದೇ ಒಂದು ವಿರೋಧಪಕ್ಷಗಳ ಮೈತ್ರಿಕೂಟ ಇರಬೇಕು ಎಂದರು.

- Advertisement -

ರಾಹುಲ್ ಗಾಂಧಿ ಅವರೊಂದಿಗೆ ಸುದೀರ್ಘ ಚರ್ಚೆ ನಡೆಸಿದೆ. ಮೊದಲು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರನ್ನು ಭೇಟಿಯಾಗಿ ಚರ್ಚೆಯ ವಿವರಗಳನ್ನು ತಿಳಿಸುತ್ತೇನೆ. ಅದಾದ ನಂತರ ಎಲ್ಲರಿಗೂ ಮಾಹಿತಿ ನೀಡುತ್ತೇನೆ ಎಂದರು. ಕಾಂಗ್ರೆಸ್ ಪಕ್ಷದ ಮತ್ತೋರ್ವ ಪ್ರಭಾವಿ ನಾಯಕರಾದ ಪ್ರಿಯಾಂಕಾ ಗಾಂಧಿ ಅವರನ್ನು ರಾವುತ್ ಬುಧವಾರ (ಡಿ 8) ಭೇಟಿಯಾಗುವ ಸಾಧ್ಯತೆಯಿದೆ. ಮಹಾರಾಷ್ಟ್ರದಲ್ಲಿ ಪ್ರಸ್ತುತ ಕಾಂಗ್ರೆಸ್, ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್ಸಿಪಿ) ಮತ್ತು ಶಿವಸೇನೆ ಮೈತ್ರಿಯ ಮಹಾ ವಿಕಾಸ್ ಅಘಾಡಿ ಸರ್ಕಾರ ಅಧಿಕಾರದಲ್ಲಿದೆ.

ರಾಹುಲ್ ಗಾಂಧಿ ಭೇಟಿಗೂ ಮುನ್ನ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ್ದ ಸಂಜಯ್ ರಾವುತ್, ‘ಮಹಾರಾಷ್ಟ್ರದಲ್ಲಿ ಅಧಿಕಾರದಲ್ಲಿರುವ ಎಂವಿಎ (ಮಹಾವಿಕಾಸ್ ಅಘಾಡಿ) ಎನ್ನುವುದೇ ಮಿನಿ ಯುಪಿಎ’ ಎಂದು ಹೇಳಿದ್ದರು. ಈ ಹಿಂದೆ ದೇಶದಲ್ಲಿ ಆಡಳಿತ ನಡೆಸಿದ್ದ ಯುಪಿಎ ಅಥವಾ ಎನ್ಡಿಎ ಮಾದರಿಯಲ್ಲಿ ನಾವೂ ಸಹ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಆಧರಿಸಿ ಕೆಲಸ ಮಾಡುತ್ತಿದ್ದೇವೆ. ಮೈತ್ರಿಕೂಟದ ಭಾಗವಾಗಿರುವ ಪಕ್ಷಗಳ ರಾಜಕೀಯ ದೃಷ್ಟಿಕೋನ ಬೇರೆಯೇ ಆಗಿರಬಹುದು. ಆದರೆ ಅವೆಲ್ಲವೂ ದೇಶದ ಹಿತದೃಷ್ಟಿಯಿಂದ ಒಂದಾಗಿವೆ’ ಎಂದು ವಿವರಿಸಿದರು



Join Whatsapp