ಸ್ಪೈಸ್’ಜೆಟ್ ಸಂಸ್ಥೆಯನ್ನು ಮುಚ್ಚಲು ಮದ್ರಾಸ್ ಹೈಕೋರ್ಟ್ ಆದೇಶ !

Prasthutha|

 ಚೆನ್ನೈ: ಖಾಸಗಿ ವೈಮಾನಿಕ ಸಂಸ್ಥೆಯಾದ ಸ್ಪೈಸ್‌’ಜೆಟ್‌ ವಿರುದ್ಧ ಸ್ವಿಸ್‌ ಕಂಪನಿಯೊಂದು ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿ ಮಹತ್ವದ ಆದೇಶ ಹೊರಡಿಸಿರುವ ಮದ್ರಾಸ್‌ ಹೈಕೋರ್ಟ್‌, ಸ್ಪೈಸ್‌ಜೆಟ್‌ ಸಂಸ್ಥೆಯನ್ನು ಮುಚ್ಚಲು ಹಾಗೂ ಅದರ ಆಸ್ತಿಯನ್ನು ಅಧಿಕೃತ ಬರ್ಖಾಸ್ತುದಾರರ ಸುಪರ್ದಿಗೆ ವಹಿಸುವಂತೆ ಆದೇಶ ನೀಡಿದೆ.

- Advertisement -

ಸ್ವಿಸ್ ಕಂಪನಿಯಾದ SR ಟೆಕ್ನಿಕ್ಸ್’ಗೆ ಬಿಡಿಭಾಗಗಳ ಜೋಡಣೆ ಹಾಗೂ ದುರಸ್ತಿ ಸೇರಿದಂತೆ ವಿವಿಧ ವಿಭಾಗಗಳ ನಿರ್ವಹಣೆಯ ಬಾಬ್ತು 24 ಮಿಲಿಯನ್ ಡಾಲರ್’ಗಿಂತಲೂ (ಸುಮಾರು 170 ಕೋಟಿ ರುಪಾಯಿ) ಅಧಿಕ ಮೊತ್ತವನ್ನು ಸ್ಪೈಸ್‌ಜೆಟ್‌ ಸಂಸ್ಥೆ ಬಾಕಿ ಉಳಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಸ್ಪೈಸ್‌ಜೆಟ್ ಸಂಸ್ಥೆಯ ವಿರುದ್ಧ ಕ್ರಮ ಜರುಗಿಸಬೇಕು ಹಾಗೂ ಆಸ್ತಿ ಜಪ್ತಿ ಪ್ರಕ್ರಿಯೆ ಜಾರಿಗೊಳಿಸಲು ಅಧಿಕೃತವಾಗಿ ಬರ್ಖಾಸ್ತುದಾರರನ್ನು ನೇಮಿಸಬೇಕು ಎಂದು ಕೋರಿ ಸ್ವಿಟ್ಜರ್‌ಲೆಂಡ್‌ ಕಾಯ್ದೆಯಡಿ ನೋಂದಣಿಯಾಗಿರುವ ಕ್ರೆಡಿಟ್‌ ಸ್ಯೂಸ್‌ ಎ.ಜಿ ಸಂಸ್ಥೆಯು ಸಲ್ಲಿಸಿದ್ದ ಅರ್ಜಿ ವಿಚಾರಣೆಯ ವೇಳೆ ಮದ್ರಾಸ್‌ ಹೈಕೋರ್ಟ್‌ ಮಹತ್ವದ ತೀರ್ಪು ನೀಡಿದೆ.

ಆದರೆ ಈ ಕುರಿತು ಪ್ರತಿಕ್ರಿಯಿಸಿರುವ ಸ್ಪೈಸ್‌ಜೆಟ್ ಸಂಸ್ಥೆಯ ಅಧಿಕಾರಿಗಳು, ಎರಡು ವಾರದ ಒಳಗಾಗಿ ಐದು ಮಿಲಿಯನ್‌ ಡಾಲರ್‌ (ಸುಮಾರು 37.72 ಕೋಟಿ ರುಪಾಯಿ) ಮೊತ್ತವನ್ನು ಠೇವಣಿ ಇಡಬೇಕು ಎಂಬ ಷರತ್ತನ್ನು ಹೈಕೋರ್ಟ್ ವಿಧಿಸಿದ್ದು, ಜಪ್ತಿ ಆದೇಶಕ್ಕೆ ಮೂರು ವಾರದ ಅವಧಿಗೆ ತಡೆಯಾಜ್ಞೆ ನೀಡಿದೆ’ ಎಂದು ತಿಳಿಸಿದೆ. ಮೇಲ್ಮನವಿ ಸಲ್ಲಿಸುವುದು ಸೇರಿದಂತೆ ಇತರ ಆಯ್ಕೆಗಳ ಬಗ್ಗೆ ಸಂಸ್ಥೆಯು ತಜ್ಞರ ಜೊತೆ ಮಾತುಕತೆ ನಡೆಸುತ್ತಿರುವುದಾಗಿ ತಿಳಿಸಿದೆ.

Join Whatsapp