ರಾಜ್ಯದ ಪ್ರತಿ ಮೂರು ಜಿಲ್ಲೆಗೆ ಒಂದು SDRF ನಿಯೋಜನೆ: ಗೃಹ ಸಚಿವ ಆರಗ ಜ್ಞಾನೇಂದ್ರ

Prasthutha|

ಬೆಂಗಳೂರು: ರಾಜ್ಯ ವಿಪತ್ತು ಹಾಗೂ ತುರ್ತು ಸೇವೆಗಳ ಪಡೆಯನ್ನು ಇನ್ನಷ್ಟು ಬಲಪಡಿಸಲು ಪ್ರತಿ ಮೂರು ಜಿಲ್ಲೆಗಳಿಗೆ ಒಂದರಂತೆ ಎಸ್.ಡಿ.ಆರ್.ಎಫ್ (State Disaster Response Force) ಪಡೆಗಳನ್ನು ನಿಯೋಜಿಸಲು ರಾಜ್ಯ ಸರಕಾರ ನಿರ್ಧರಿಸಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

- Advertisement -

ಅವರು ರಾಜ್ಯ ಪೌರ ರಕ್ಷಣೆ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಹಾಗೂ ಎಸ್.ಡಿ.ಆರ್.ಎಫ್ ನಿರ್ದೇಶನಾಲಯ ವತಿಯಿಂದ ರಾಜಭವನದಲ್ಲಿ ಆಯೋಜಿಸಲಾದ ಜೀವದ ಹಂಗನ್ನು ತೊರೆದು ಸಂಕಷ್ಟಕ್ಕೆ ಒಳಗಾದ ಜನತೆಯನ್ನು ರಕ್ಷಿಸಿದ ಹಾಗೂ ವಿಶಿಷ್ಟ ಸೇವೆಗೈದ ಸಿಬ್ಬಂದಿಗೆ ರಾಷ್ಟ್ರಪತಿ ಪದಕ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

 ಪ್ರಾಕೃತಿಕ ಸಂಕಷ್ಟದ ಸಮಯದಲ್ಲಿ ಕ್ಷಿಪ್ರವಾಗಿ ಸೇವೆ ಸಲ್ಲಿಸಲು ಅನುಕೂಲವಾಗುವಂತೆ ಯೋಜನೆ ಹಮ್ಮಿಕೊಳ್ಳಲಾಗುತ್ತಿದೆ. ನಾಗರಿಕರ ಸುರಕ್ಷತೆ, ಆಸ್ತಿ ಪಾಸ್ತಿಗಳು ಹಾಗೂ ಸಾರ್ವಜನಿಕ ಸೊತ್ತುಗಳ ರಕ್ಷಣೆ ಮಾಡಲು ಸರಕಾರ ಬದ್ಧವಾಗಿದೆ ಎಂದರು.

- Advertisement -

ಹಲವಾರು ವರ್ಷಗಳ ನಂತರ ರಾಜ್ಯ ಅಗ್ನಿ ಶಾಮಕದಳವನ್ನು ಬಲಪಡಿಸಲು ಸುಮಾರು 1547 ವಿವಿಧ ದರ್ಜೆಯ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ ಹಾಗೂ ತರಬೇತಿ ನೀಡಲಾಗುತ್ತಿದೆ. ಅವಘಡದ ಸಂದರ್ಭದಲ್ಲಿ ಅತ್ಯಂತ ಎತ್ತರದ ಕಟ್ಟಡವನ್ನೂ ತಲುಪಲು ಅನುಕೂಲವಾಗುವಂತೆ ಸುಮಾರು 30 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಏರಿಯಲ್ ಲ್ಯಾಡರ್ ಅನ್ನು ಇಲಾಖೆಗೆ ಸಮರ್ಪಿಸಲಾಗಿದೆ ಎಂದರು.

ಸಮಾರಂಭದಲ್ಲಿ ಸುಮಾರು 61 ಸಿಬ್ಬಂದಿಗಳಿಗೆ ಪದಕವನ್ನು ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ಪ್ರದಾನ ಮಾಡಿದರು.

ರಾಜ್ಯ ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ಅಮರ ಕುಮಾರ್ ಪಾಂಡೆ ಇತರರು ಉಪಸ್ಥಿತರಿದ್ದರು.



Join Whatsapp