ಚಿನ್ನದ ಹುಡುಗ ನೀರಜ್ ಚೋಪ್ರಾ, ಶ್ರೀಜೇಶ್ ಸೇರಿದಂತೆ 12 ಮಂದಿಗೆ ‘ಖೇಲ್ ರತ್ನ’ ಪ್ರಶಸ್ತಿ ಪ್ರದಾನ

Prasthutha|

ಪ್ರಶಸ್ತಿ ವಿಜೇತರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ..

- Advertisement -

ನವದೆಹಲಿ: ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಐತಿಹಾಸಿಕ ಚಿನ್ನದ ಪದಕ ಗೆದ್ದು ಕೀರ್ತಿ ತಂದಿದ್ದ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಹಾಗೂ ಒಲಿಂಪಿಕ್‌ ಪದಕ ವಿಜೇತರಾದ ಹಾಕಿ ಗೋಲ್‌ ಕೀಪರ್‌ ಪಿಆರ್‌ ಶ್ರೀಜೇಶ್‌ ಸೇರಿದಂತೆ ಒಟ್ಟು 12 ಮಂದಿಗೆ ಭಾರತದಲ್ಲಿ ಕ್ರೀಡಾ ಕ್ಷೇತ್ರದಲ್ಲಿನ ಸಾಧಕರಿಗೆ ನೀಡಲಾಗುವ ಸರ್ವಶ್ರೇಷ್ಠ “ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ” ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ.

ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಸಾಧಕರಿಗೆ ರಾಷ್ಟ್ರಪತಿ ರಾಮನಾಥ ಕೋವಿಂದ ಅವರು ಪ್ರಶಸ್ತಿ ಪ್ರದಾನ ಮಾಡಿದರು.

- Advertisement -

ಒಲಿಂಪಿಕ್ಸ್ ಇತಿಹಾಸದಲ್ಲೇ ಟ್ರ್ಯಾಕ್ ಅಂಡ್ ಫೀಲ್ಡ್ ವಿಭಾಗದಲ್ಲಿ ಮೊತ್ತಮೊದಲ ಬಾರಿಗೆ ಭಾರತಕ್ಕೆ ಐತಿಹಾಸಿಕ ಚಿನ್ನದ ಪದಕ ಗೆದ್ದುಕೊಟ್ಟ ಜಾವೆಲಿನ್‌ ಥ್ರೋ ಪಟು ನೀರಜ್‌ ಜೋಪ್ರಾ, ಹಾಗೂ 41 ವರ್ಷಗಳ ಬಳಿಕ ಹಾಕಿ ತಂಡ ಒಲಿಂಪಿಕ್ಸ್ ನಲ್ಲಿ ಪದಕ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಗೋಲ್ ಕೀಪರ್ ಪಿ.ಆರ್ ಶ್ರೀಜೇಶ್, ಜೊತೆಗೆ ಒಲಿಂಪಿಕ್‌ ಪದಕ ವಿಜೇತರಾದ ಕುಸ್ತಿಪಟು ರವಿ ದಹಿಯಾ ಮತ್ತು ಮಹಿಳಾ ಬಾಕ್ಸರ್‌ ಲವ್ಲೀನಾ ಬೊರ್ಗೊಹೈನ್‌ ಹಾಗೂ ಭಾರತ ಮಹಿಳಾ ಏಕದಿನ/ಟೆಸ್ಟ್ ತಂಡದ ನಾಯಕಿ ಮಿಥಾಲಿ ರಾಜ್‌, ಭಾರತ ಫುಟ್ಬಾಲ್‌ ತಂಡದ ನಾಯಕ ಸುನಿಲ್‌ ಚೆಟ್ರಿ ಇದೇ ಸಂದರ್ಭದಲ್ಲಿ ಖೇಲ್‌ ರತ್ನ ಪ್ರಶಸ್ತಿ ಸ್ವೀಕರಿಸಿದರು.

ಖೇಲ್‌ ರತ್ನ ಪ್ರಶಸ್ತಿ ಪಡೆದ ಭಾರತದ ಮೊತ್ತ ಮೊದಲ ಫುಟ್ಬಾಲ್‌ ಆಟಗಾರ ಎಂಬ ಹೆಗ್ಗಳಿಕೆಗೆ ಈ ಮೂಲಕ ಸುನಿಲ್ ಚೆಟ್ರಿ ಪಾತ್ರರಾಗಿದ್ದಾರೆ. ಟೋಕಿಯೋ ಪ್ಯಾರಾ ಒಲಿಂಪಿಕ್ಸ್‌ನಲ್ಲಿ 2 ಪದಕ ಗೆದ್ದು ಸಾಧನೆ ಮಾಡಿದ್ದ  ಮೊತ್ತ ಮೊದಲ ಭಾರತೀಯ ಮಹಿಳಾ ಕ್ರೀಡಾಪಟು ಅವನಿ ಲಾಖ್ರಾ ಕೂಡ ಖೇಲ್‌ ರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ಪಡೆದ ಕ್ರೀಡಾಪಟುಗಳ ಪಟ್ಟಿ ಇಲ್ಲಿದೆ:

ನೀರಜ್ ಚೋಪ್ರಾ (ಅಥ್ಲೆಟಿಕ್ಸ್)

ರವಿ ದಹಿಯಾ (ಕುಸ್ತಿ)

ಪಿಆರ್ ಶ್ರೀಜೇಶ್ (ಹಾಕಿ)

ಲೊವ್ಲಿನಾ ಬೊರ್ಗೊಹೈ (ಬಾಕ್ಸಿಂಗ್)

ಸುನಿಲ್ ಛೆಟ್ರಿ (ಫುಟ್‌ಬಾಲ್)

ಮಿಥಾಲಿ ರಾಜ್ (ಕ್ರಿಕೆಟ್)

ಪ್ರಮೋದ್ ಭಗತ್ (ಬ್ಯಾಡ್ಮಿಂಟನ್)

ಸುಮಿತ್ ಆಂಟಿಲ್ (ಜಾವೆಲಿನ್)

ಅವನಿ ಲೇಖರ (ಶೂಟಿಂಗ್)

ಕೃಷ್ಣ ನಗರ (ಬ್ಯಾಡ್ಮಿಂಟನ್)

ಎಂ ನರ್ವಾಲ್ (ಶೂಟಿಂಗ್).

ಖೇಲ್ ರತ್ನ ಪ್ರಶಸ್ತಿಯ ಜೊತೆಗೆ 35 ಕ್ರೀಡಾಪಟುಗಳು ಅರ್ಜುನ ಪ್ರಶಸ್ತಿಯನ್ನು ಪಡೆದರು. ಇದರಲ್ಲಿ ಹೆಚ್ಚಿನ ಪಾಲು ಹಾಕಿ ಆಟಗಾರರ ಪಾಲಾಗಿದೆ. ರಾಜೀವ್‌ ಗಾಂಧಿ ಖೇಲ್‌ ರತ್ನ ಪ್ರಶಸ್ತಿ ಎಂದು ನೀಡಲಾಗುತ್ತಿದ್ದ ಪ್ರಶಸ್ತಿಯ ಹೆಸರನ್ನು ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗಷ್ಟೇ ಮೇಜರ್‌ ಧ್ಯಾನ್‌ ಚಂದ್‌ (ಭಾರತ ಹಾಕಿ ತಂಡದ ಮಾಜಿ ನಾಯಕ) ಖೇಲ್‌ ರತ್ನ ಪ್ರಶಸ್ತಿ ಎಂದು ಮರು ನಾಮಕರಣ ಮಾಡಿದ್ದರು.

ಖೇಲ್ ರತ್ನ ಪ್ರಶಸ್ತಿ ಪುರಸ್ಕೃತರು 25 ಲಕ್ಷ ರೂ., ಅರ್ಜುನ ಪ್ರಶಸ್ತಿ ಪುರಸ್ಕೃತರಿಗೆ 15 ಲಕ್ಷ ರೂ., ದ್ರೋಣಾಚಾರ್ಯ (ಜೀವಮಾನ) ಪ್ರಶಸ್ತಿ ಪುರಸ್ಕೃತರಿಗೆ 15 ಲಕ್ಷ ರೂ. ಮತ್ತು ಧ್ಯಾನ್‌ಚಂದ್ ವಿಜೇತರಿಗೆ 10 ಲಕ್ಷ ರೂ. ನೀಡಿ ಗೌರವಿಸಲಾಯಿತು.



Join Whatsapp