ಗೂಂಡಾ ಕಾಯ್ದೆಯಡಿ ಕುಖ್ಯಾತ ರೌಡಿ ಬಂಧನ

Prasthutha|

ಬೆಂಗಳೂರು: ಗಂಭೀರ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ಸಾರ್ವಜನಿಕರನ್ನು ಬೆದರಿಸಿ ಭಯಭೀತಿ ಉಂಟುಮಾಡುತ್ತಿದ್ದ ಕುಖ್ಯಾತ ರೌಡಿ ಬಿ. ಹನುಮಂತರಾಜು ಅಲಿಯಾಸ್ ಕುರಿಯನ್ನು ರಾಜಗೋಪಾಲನಗರ ಪೊಲೀಸರು ಗೂಂಡಾ ಕಾಯ್ದೆಯಡಿ ಬಂಧಿಸಿದ್ದಾರೆ.

- Advertisement -

ಪೀಣ್ಯದ ನಾರಾಯಣಪುರ ವಾಸಿ ರೌಡಿ ಬಿ. ಹನುಮಂತರಾಜು ಅಲಿಯಾಸ್ ಕುರಿ(29) ನಗರದ ರಾಜಗೋಪಾಲನಗರದಲ್ಲಿ ಸಕ್ರಿಯವಾಗಿ ರೌಡಿ ಚಟುವಟಿಕೆಯಲ್ಲಿ ಭಾಗಿಯಾಗಿದ್ದು, ಈತನ ವಿರುದ್ಧ ರಾಜಗೋಪಾಲನಗರ, ಪೀಣ್ಯ, ಸೋಲದೇವನಹಳ್ಳಿ, ಬ್ಯಾಡರಹಳ್ಳಿ, ಪೊಲೀಸ್ ಠಾಣೆಗಳಲ್ಲಿ ಸುಲಿಗೆ, ದರೋಡೆ, ದರೋಡೆಗೆ ಪ್ರಯತ್ನ, ಕೊಲೆಗೆ ಪ್ರಯತ್ನ, ಹಲ್ಲೆ, ಹಣ ಸುಲಿಗೆ ಮಾಡುವುದು, ಕನ್ನಾ, ಕಳವು, ಮನೆಕಳವು ಮಾಡುವುದು, ಕೃತ್ಯಕ್ಕೆ ಶಸ್ತ್ರ ಬಳಕೆ, ಪ್ರಾಣ ಬೆದರಿಕೆ ಪ್ರಕರಣಗಳು ದಾಖಲಾಗಿವೆ.

ಕಳೆದ 2012ರಿಂದ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದ ಕುರಿ ವಿರುದ್ಧ 2012 ರಿಂದ 2022 ನೇ ಸಾಲಿನ ಆಗಸ್ಟ್ ರವರೆಗೆ 17 ಪ್ರಕರಣಗಳು ದಾಖಲಾಗಿವೆ. ರಾಜಗೋಪಾಲನಗರ ಠಾಣೆಯ 2022 ನೇ ಸಾಲಿನ ಸುಲಿಗೆ ಪ್ರಕರಣದಲ್ಲಿ ಕಳೆದ ಸೆ.7 ರಂದು ಬಂಧಿಸಲಾಗಿದೆ. ಈತನು ನ್ಯಾಯಾಲಯದ ಜಾಮೀನಿನ ಷರತ್ತುಗಳನ್ನು ಉಲ್ಲಂಘನೆ ಮಾಡುತ್ತಿದ್ದು, ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವ ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿರುತ್ತಾನೆ. ಈತನು ರೌಡಿ ಚಟುವಟಿಕೆ ಮತ್ತು ಅಪರಾಧ ಚಟುವಟಿಕೆಗಳನ್ನು ಮುಂದುವರಿಸಿಕೊಂಡು ಸಾರ್ವಜನಿಕರಲ್ಲಿ ಭಯ ಭೀತಿಯನ್ನುಂಟು ಮಾಡುತ್ತಿರುವುದರಿಂದ ಈತನನ್ನು ಗೂಂಡಾ ಕಾಯ್ದೆಯಡಿಯಲ್ಲಿ ಬಂಧನದಲ್ಲಿಡಲಾಗಿದೆ.

- Advertisement -

ಈತನನ್ನು ಗೂಂಡಾ ಕಾಯ್ದೆಯಡಿಯಲ್ಲಿ ಬಂಧಿಸಲು ಇನ್ಸ್’ಪೆಕ್ಟರ್ ಬಿ.ಆರ್. ಜಗದೀಶ್ ವರದಿಯನ್ನು ಸಲ್ಲಿಸಿದ್ದು ಪರಿಶೀಲಿಸಿ ನಗರ ಪೊಲೀಸ್ ಆಯುಕ್ತರು ಗೂಂಡಾ ಕಾಯ್ದೆಯಡಿಯಲ್ಲಿ ಬಂಧಿಸಲು ಆದೇಶ ಮಾಡಿದ್ದಾರೆ ಎಂದು ಡಿಸಿಪಿ ವಿನಾಯಕ ಪಾಟೀಲ್ ತಿಳಿಸಿದ್ದಾರೆ.



Join Whatsapp