ಗೋಧಿ ಚೀಲಗಳನ್ನು ಕದ್ದನೆಂದು ಟ್ರಕ್ ನ ಬಾನೆಟ್’ಗೆ ಕಟ್ಟಿ ಪೊಲೀಸ್ ಠಾಣೆಗೆ ಕರೆದೊಯ್ದ ಚಾಲಕ

Prasthutha|

ಚಂಡೀಗಢ: ಟ್ರಕ್’ನಿಂದ ಎರಡು ಚೀಲ ಗೋಧಿಯನ್ನು ಕದ್ದಿದ್ದಾನೆಂಬ ಆರೋಪದ ಮೇಲೆ ಕಾರ್ಮಿಕನೊಬ್ಬನನ್ನು  ಟ್ರಕ್’ನ ಬಾನೆಟ್’ಗೆ ಕಟ್ಟಿ ಪೊಲೀಸ್ ಠಾಣೆಗೆ ಕರೆದೊಯ್ದಿರುವ ಘಟನೆ ಪಂಜಾಬ್’ನ ಮುಕ್ತಸರ್ ಜಿಲ್ಲೆಯಲ್ಲಿ ನಡೆದಿದೆ.

- Advertisement -

ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ ಪೊಲೀಸರು  ಟ್ರಕ್ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ವ್ಯಕ್ತಿಯೊಬ್ಬನ ಜೀವಕ್ಕೆ ಅಪಾಯವೊಡ್ಡಿದ ಆರೋಪದ ಮೇಲೆ ಆತನ ವಿರುದ್ಧ ಪ್ರಕರಣ ದಾಖಲಾಗಿದೆ.

ಧಾನ್ಯಗಳ ಸಾಗಾಟ ಕಾರ್ಮಿಕನಾಗಿದ್ದ ಭುರಾಲಿ ಎಂಬ ಯುವಕ ತಾನು ಕೆಲಸ ಮಾಡುತ್ತಿದ್ದ ಟ್ರಕ್ ನಿಂದ ಎರಡು ಮೂಟೆ ಗೋಧಿ ಕದ್ದಿದ್ದಾನೆಂದು ಆರೋಪಿಸಿ ಚಾಲಕ ಝೈಲ್ ಸಿಂಗ್ ಆತನನ್ನು ವಾಹನದ ಬಾನೆಟ್’ಗೆ ಕಟ್ಟಿ ಹಾಕಿ ಟ್ರಕ್ ಅನ್ನು ಅಬೋಹರ್ ರಸ್ತೆಯಿಂದ 1.5 ಕಿಮೀ ದೂರದಲ್ಲಿರುವ ಮುಕ್ತಸರ್ ಪೊಲೀಸ್ ಠಾಣೆ ತನಕ ತೆಗೆದುಕೊಂಡು ಹೋಗಿದ್ದ.

- Advertisement -

ವೀಡಿಯೊದಲ್ಲಿ, ಕಟ್ಟಿದ ವ್ಯಕ್ತಿಯು ಎರಡು ಚೀಲ ಗೋಧಿಯನ್ನು ಕದ್ದಿದ್ದಾನೆ ಮತ್ತು ಅವನನ್ನು ಬಸ್ ನಿಲ್ದಾಣ ಪೊಲೀಸ್ ಠಾಣೆಗೆ ಕರೆದೊಯ್ಯಲಾಗುತ್ತಿದೆ ಎಂದು ಟ್ರಕ್ ಚಾಲಕನ ಸಹಾಯಕನು ಇನ್ನೊಬ್ಬ ಅಪರಿಚಿತ ವ್ಯಕ್ತಿಗೆ ಹೇಳುವುದನ್ನು ಕೇಳಬಹುದು.

ಆರಂಭದಲ್ಲಿ ಮುಕ್ತಸರ್ ಪೊಲೀಸರು ಕಾರ್ಮಿಕನ ವಿರುದ್ಧ ಮಾತ್ರ ಪ್ರಕರಣ ದಾಖಲಿಸಿದ್ದರು. ವೀಡಿಯೋ ವೈರಲ್ ಆಗುತ್ತಿದ್ದಂತೆಯೇ ಚಾಲಕನ ವಿರುದ್ಧವೂ ಎಫ್ಐಆರ್ ದಾಖಲಿಸಲಾಗಿದೆ.

ಘಟನೆಗೆ ಸಂಬಂಧಿಸಿದ ಎರಡು ವೀಡಿಯೊಗಳನ್ನು ಸ್ವೀಕರಿಸಲಾಗಿದ್ದು, ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಮುಕ್ತಸರ್ ನ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Join Whatsapp