ಸರ್ಕಾರಿ ನಿವಾಸ ತೆರವುಗೊಳಿಸಲು ಮೆಹಬೂಬಾಗೆ ನೋಟಿಸ್

Prasthutha|

ನವದೆಹಲಿ: ಪೀಪಲ್ಸ್ ಡೆಮಾಕ್ರೆಟಿಕ್ ಪಕ್ಷ- ಪಿಡಿಪಿ ಮುಖ್ಯಸ್ಥೆ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿಯವರನ್ನು ಸರಕಾರಿ ನಿವಾಸ ತೆರವು ಮಾಡಿ ಬೇರೆ ಕಡೆ ಹೋಗುವಂತೆ ನೋಟೀಸು ನೀಡಲಾಗಿದೆ. ಮೆಹಬೂಬಾ ಮುಫ್ತಿಯವರು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಸರಕಾರಿ ಮನೆಯಲ್ಲಿ ವಾಸಿಸುತ್ತಿದ್ದಾರೆ.

- Advertisement -

ಖನಬಾಲ್ ಕಾಲೊನಿ ಸರಕಾರಿ ಹೌಸಿಂಗ್ ಕ್ವಾರ್ಟರ್ಸ್ ನ ಕ್ವಾರ್ಟರ್ ನಂಬರ್ 7ರಲ್ಲಿ ಮೆಹಬೂಬಾ ವಾಸಿಸುತ್ತಿದ್ದು, ಜಮ್ಮು ಮತ್ತು ಕಾಶ್ಮೀರದ ಆಡಳಿತದಿಂದ ಈ ನೋಟಿಸ್ ಜಾರಿಯಾಗಿದೆ. 24 ಗಂಟೆಯೊಳಗೆ ಮನೆ ತೆರವು ಮಾಡದಿದ್ದರೆ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿಯೂ ನೋಟಿಸ್’ನಲ್ಲಿ ತಿಳಿಸಲಾಗಿದೆ.

ನೋಟೀಸಿಗೆ ಅನಂತನಾಗ್ ಜಿಲ್ಲಾಧಿಕಾರಿ ಸಹಿ ಮಾಡಿದ್ದಾರೆ. ಕೂಡಲೆ ಹೊರಡಿ, ಇಲ್ಲದಿದ್ದರೆ ಕಾನೂನು ಕ್ರಮ ಎದುರಿಸಿ ಎಂದು ನೋಟಿಸ್’ನಲ್ಲಿ ತಿಳಿಸಲಾಗಿದೆ. ಅಕ್ಟೋಬರ್ ನಲ್ಲೂ ಮೆಹಬೂಬಾರಿಗೆ ಮನೆ ಕಾಲಿ ಮಾಡಲು ತಿಳಿಸಲಾಗಿತ್ತು ಎನ್ನುವುದನ್ನು ಅವರೇ ಖಚಿತ ಪಡಿಸಿದ್ದರು. ಹೊಸ ನೋಟಿಸ್’ನಲ್ಲಿ 24 ಗಂಟೆಯೊಳಗೆ ಎಂಬ ವಾಕ್ಯವನ್ನು ಸೇರಿಸಲಾಗಿದೆ.

- Advertisement -

ಮೆಹಬೂಬಾರಿಗೆ ಮನೆ ಬಿಡಲು ನೋಟೀಸ್ ಏಕೆ?

ಜಮ್ಮು ಕಾಶ್ಮೀರದ ಆಡಳಿತವು ಮೆಹಬೂಬಾರಿಗೆ ಶ್ರೀನಗರದಲ್ಲಿ ಬೇರೊಂದು ಸರಕಾರಿ ಬಂಗಲೆ ನೀಡಲು ಮುಂದೆ ಬಂದಿದೆ. 2019ರಲ್ಲಿ ರಾಜ್ಯವು ಕೇಂದ್ರಾಡಳಿತ ಪ್ರದೇಶವಾಗಿ ಬದಲಾದುದರಿಂದ ನಿಯಮಾವಳಿಗಳು ಬದಲಾಗಿವೆ. ಆದ್ದರಿಂದ ಬದಲಿ ಮನೆಗೆ ಹೋಗುವಂತೆ ಮೆಹಬೂಬಾರಿಗೆ ತಿಳಿಸಲಾಗಿದೆ.

ರಾಜ್ಯದ ನಿಯಮಾವಳಿಯಲ್ಲಿ ಮುಖ್ಯಮಂತ್ರಿಗಳಿಗೆ ನೀಡುವ ಮನೆಯಲ್ಲಿ ನಿವೃತ್ತರಾದ ಬಳಿಕವೂ ಮುಂದುವರಿಯಲು ಅವಕಾಶವಿತ್ತು. ಈಗ ನಿಯಮಾವಳಿ ಬದಲಾಗಿರುವುದರಿಂದ ಮುಖ್ಯಮಂತ್ರಿಯಿದ್ದು ಮಾಜಿ ಆದವರಿಗೆ ಸರಕಾರಿ ಬಂಗಲೆ ಪಡೆದುಕೊಂಡು ಇರಲು ಅವಕಾಶ ಇಲ್ಲ ಎಂದು ತಿಳಿಸಲಾಗಿದೆ. ಮಾಜಿ ಮುಖ್ಯಮಂತ್ರಿಗಳಾಗಿದ್ದ ಉಮರ್ ಅಬ್ದುಲ್ಲಾ, ಗುಲಾಂ ನಬಿ ಆಜಾದ್ ಅವರು ಹೊಸ ನಿಯಮದಂತೆ 2020ರಲ್ಲೇ ಸರಕಾರಿ ಬಂಗಲೆ ಖಾಲಿ ಮಾಡಿ ಹೋಗಿದ್ದರು.

ಮೆಹಬೂಬಾ ಮುಫ್ತಿಯವರ ಮೆಚ್ಚಿನ ಹಳೆಯ ಬಂಗಲೆ ಗುಪ್ಕರ್ ರಸ್ತೆಯಲ್ಲಿತ್ತು. ಹಿಂದೆ ಅದು ಪಿಎಪಿಎ 2 ವಿಚಾರಣಾ ಬಂಗಲೆಯಾಗಿತ್ತು. 1989ರಲ್ಲಿ ಅದನ್ನು ಗೆಸ್ಟ್ ಹೌಸ್ ಮಾಡಲಾಗಿತ್ತು. 1990ರಲ್ಲಿ ಬಿಎಸ್ಎಫ್- ಗಡಿ ಭದ್ರತಾ ಪಡೆಯವರಿಗೆ ಸೇರಿತು. ಜಮ್ಮು ಮತ್ತು ಕಾಶ್ಮೀರದ ಹಿರಿಯ ಅಧಿಕಾರಿ ಅಶೋಕ ಜೈಟ್ಲಿ  1996ರಲ್ಲಿ ಈ ಮನೆಗೆ ವಾಸಕ್ಕೆ ಬರುವವರೆಗೂ ಈ ಬಂಗಲೆ ವಿಚಾರಣೆ ನಡೆಸಲು ಬಳಕೆಯಾಗುತ್ತಿತ್ತು.

Join Whatsapp