ಫಿಫಾ ವಿಶ್ವಕಪ್ ಗ್ಯಾಲರಿಯಲ್ಲೂ ಅಭಿಮಾನಿಗಳಿಂದ ಸಂಜು ಸ್ಯಾಮ್ಸನ್’ಗೆ ಬೆಂಬಲ

Prasthutha|

ಟೀಮ್ ಇಂಡಿಯಾದಿಂದ ಪದೇ ಪದೇ ಕಡೆಗಣಿಸಲ್ಪಡುತ್ತಿರುವ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಸಂಜು ಸ್ಯಾಮ್ಸನ್’ಗೆ ಫಿಫಾ ವಿಶ್ವಕಪ್ ವೇದಿಕೆಯಲ್ಲಿ ಬೆಂಬಲ ವ್ಯಕ್ತವಾಗಿದೆ. 

- Advertisement -

ನ್ಯೂಜಿಲೆಂಡ್ ವಿರುದ್ಧದ ಟಿ20 ಮತ್ತು ಏಕದಿನ ಸರಣಿಗೆ ಪ್ರಕಟಿಸಲಾದ ಟೀಮ್ ಇಂಡಿಯಾದಲ್ಲಿ ಸಂಜು ಸ್ಯಾಮ್ಸನ್ ಸ್ಥಾನ ಪಡೆದಿದ್ದರು. ಆದರೆ ಟಿ20 ಸರಣಿಯಲ್ಲಿ ಆಡುವ ಬಳಗದಿಂದ ಸಂಜು ಸ್ಯಾಮ್ಸನ್’ರನ್ನು ಹೊರಗಿಡಲಾಗಿತ್ತು. ಈ ತೀರ್ಮಾನದ ವಿರುದ್ಧ ಮಾಜಿ ಆಟಗಾರರು ಸೇರಿದಂತೆ ಅಭಿಮಾನಿಗಳಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.

ಪತ್ರಿಕಾಗೋಷ್ಠಿಯಲಿ ಟಿ20 ನಾಯಕ ಹಾರ್ದಿಕ್ ಪಾಂಡ್ಯ ಸಹ ಸಂಜು ಕೈಬಿಟ್ಟ ಕುರಿತ ಪ್ರಶ್ನೆಗೆ ಪ್ರಶ್ನೆಗೆ ಸಮರ್ಪಕ ಉತ್ತರ ನೀಡಿರಲಿಲ್ಲ. ಇದಾದ ಬಳಿಕ ಆರಂಭವಾದ ಮೊದಲ ಏಕದಿನ ಪಂದ್ಯದಲ್ಲಿ ಸಂಜು ಸ್ಥಾನ ಪಡೆದಿದ್ದರು. 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್’ಗೆ ಇಳಿದು 38 ಎಸೆತಗಳಲ್ಲಿ 36 ರನ್’ಗಳಿಸಿ ನಿರ್ಗಮಿಸಿದ್ದರು. ಅದಾಗಿಯೂ ಶುಕ್ರವಾರ ನಡೆದ 2ನೇ ಏಕದಿನ ಪಂದ್ಯದಿಂದ ಸಂಜುರನ್ನು ಕೈಬಿಡಲಾಗಿತ್ತು. ಸಂಜು ಬದಲು ದೀಪಕ್ ಹೂಡಾಗೆ ಅವಕಾಶ ನೀಡಲಾಗಿತ್ತು.

- Advertisement -

ಇದೀಗ ಫಿಫಾ ವಿಶ್ವಕಪ್ ಟೂರ್ನಿ ನಡೆಯುತ್ತಿರುವ ಕತಾರ್’ನಲ್ಲೂ ಸಂಜು ಸ್ಯಾಮ್ಸನ್’ರನ್ನು ಕೈಬಿಡುತ್ತಿರುವ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಫುಟ್’ಬಾಲ್ ಪಂದ್ಯವನ್ನು ವೀಕ್ಷಿಸಲು ತೆರಳುತ್ತಿರುವ ಭಾರತೀಯ ಮೂಲದ ಅಭಿಮಾನಿಗಳು ಸಂಜು ಸ್ಯಾಮ್ಸನ್ ಪರ ಪೋಸ್ಟರ್’ಗಳನ್ನು ಹಿಡಿದು ಬೆಂಬಲ ಸೂಚಿಸುತ್ತಿದ್ದಾರೆ.

ʻಕತಾರ್ನಿಂದ, ಬಹಳಷ್ಟು ಪ್ರೀತಿಯಿಂದ ಸಂಜು ಸ್ಯಾಮ್ಸನ್’ರನ್ನು ಬೆಂಬಲಿಸುತ್ತೇವೆʼ. ಯಾವುದೇ ಪಂದ್ಯ, ಆಟಗಾರ ಅಥವಾ ತಂಡದ ಹಂಗಿಲ್ಲದೇ ನಾವು ಸಂಜು ಸ್ಯಾಮ್ಸನ್ ಜೊತೆಗಿದ್ದೇವೆʼ ಎಂಬ ಬ್ಯಾನರ್’ಗಳನ್ನು ಅಭಿಮಾನಿಗಳು ವಿಶ್ವಕಪ್ ಪಂದ್ಯಗಳು ನಡೆಯುತ್ತಿರುವ ಗ್ಯಾಲರಿಗಳಲ್ಲಿ ಪ್ರದರ್ಶಿಸುತ್ತಿದ್ದಾರೆ. ಈ ಚಿತ್ರಗಳನ್ನು ಸಂಜು ಸ್ಯಾಮ್ಸನ್ ನಾಯಕನಾಗಿರುವ ರಾಜಸ್ಥಾನ ರಾಯಲ್ಸ್ ತಂಡದ ಟ್ವಿಟರ್ ಖಾತೆಯಲ್ಲೂ ಪೋಸ್ಟ್ ಮಾಡಲಾಗಿದೆ.

Join Whatsapp