ಬಿಜೆಪಿ ಕೊಟ್ಟ ಭರವಸೆಗಳಲ್ಲಿ ಶೇ.10 ಕೂಡ ಈಡೇರಿಲ್ಲ: ಸಿದ್ದರಾಮಯ್ಯ

Prasthutha|

ಬೆಂಗಳೂರು: ನಾವು 2013ರ ಚುನಾವಣೆ ವೇಳೆ ಜನರಿಗೆ 165 ಭರವಸೆಗಳನ್ನು ನೀಡಿ 158 ಭರವಸೆಗಳನ್ನು ಈಡೇರಿಸಿದ್ದೆವು, ಬಿಜೆಪಿಯವರು 2018ರ ಚುನಾವಣೆ ಸಂದರ್ಭದಲ್ಲಿ “ಕರ್ನಾಟಕಕ್ಕೆ ನಮ್ಮ ವಚನಗಳು” ಎಂಬ ತಲೆಬರಹದಡಿ ಸುಮಾರು 600 ಭರವಸೆಗಳನ್ನು ನೀಡಿದ್ದರು. ಅಧಿಕಾರಕ್ಕೆ ಬಂದು 3 ವರ್ಷಗಳ ನಂತರ ಎಷ್ಟು ವಚನಗಳನ್ನು ಈಡೇರಿಸಿದ್ದಾರೆ ಎಂಬುದನ್ನು ಜನರೇ ಅರ್ಥ ಮಾಡಿಕೊಳ್ಳಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

- Advertisement -

ರಾಜ್ಯ ಉಸ್ತುವಾರಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ಅವರ ಜೊತೆಗೂಡಿ ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಿದ್ದ ಜಂಟಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಬಿಜೆಪಿ ಕೊಟ್ಟ ಭರವಸೆಗಳಲ್ಲಿ 10% ಕೂಡ ಅವರು ಈಡೇರಿಸಿಲ್ಲ. ಜನರಿಗೆ ಮಾತು ಕೊಟ್ಟ ನಂತರ ಆ ಮಾತಿನಂತೆ ನಡೆದುಕೊಳ್ಳಬೇಕು. ಆದರೆ ಈ ಸರ್ಕಾರ ಕೊಟ್ಟ ಮಾತಿಗೆ ತಪ್ಪಿ ಜನರ ನಂಬಿಕೆಗೆ ದ್ರೋಹ ಎಸಗಿದೆ. ಹಾಗಾಗಿ ನಾವು ಇದನ್ನು ವಚನ ವಂಚನೆ ಎಂದಿದ್ದೇವೆ. ಬಿಜೆಪಿಯ ಭರವಸೆಗಳನ್ನೇ ಅವರ ಮುಂದಿಟ್ಟು ಉತ್ತರಿಸುವಂತೆ ಕೇಳಿದ್ದೇವೆ, ನಮ್ಮ ಪ್ರಶ್ನೆಗಳಿಗೆ ಉತ್ತರ ಕೊಡಲಿ ನೋಡೋಣ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಸವಾಲು ಹಾಕಿದರು.

- Advertisement -

ಬಾಕಿ ಇರುವ ಎಲ್ಲಾ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು 1.5 ಲಕ್ಷ ಕೋಟಿ ಖರ್ಚು ಮಾಡುತ್ತೇವೆ ಎಂದು ವಚನ ನೀಡಿದ್ದರು. ಕಳೆದ ಮೂರು ವರ್ಷಗಳಲ್ಲಿ ಕೇವಲ 48 ಸಾವಿರ ಕೋಟಿ ಖರ್ಚು ಮಾಡಿದ್ದಾರೆ. ಇನ್ನೂ 100 ಲಕ್ಷ ಕೋಟಿ ಎಲ್ಲಿ? ನಾವು ಅಧಿಕಾರಕ್ಕೆ ಬಂದರೆ ಐದು ವರ್ಷಗಳಲ್ಲಿ 50 ಸಾವಿರ ಕೋಟಿ ಹಣ ಖರ್ಚು ಮಾಡುತ್ತೇವೆ ಎಂದು ಜನರಿಗೆ ಭರವಸೆ ನೀಡಿದ್ದೆವು. ನಾವು ನೀರಾವರಿಗಾಗಿ 58 ಸಾವಿರ ಕೋಟಿಗೂ ಅಧಿಕ ಹಣವನ್ನು ಖರ್ಚು ಮಾಡಿದ್ದೆವು ಎಂದು ಅವರು ಹೇಳಿದರು.

ಸಹಕಾರಿ ಮತ್ತು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿರುವ 1 ಲಕ್ಷದ ವರೆಗಿನ ರೈತರ ಸಾಲ ಮನ್ನಾ ಮಾಡುವ ಭರವಸೆ ನೀಡಿದ್ದರು. ಇದನ್ನು ಈಡೇರಿಸಿದ್ದಾರ? ಹಿಂದೊಮ್ಮೆ ಯಡಿಯೂರಪ್ಪ ಅವರು ನಮ್ಮ ಪಕ್ಷದ ನಾಯಕರಾದ ಉಗ್ರಪ್ಪನವರ ಕೇಳಿದ ಪ್ರಶ್ನೆಗೆ ಸದನದಲ್ಲಿ ಉತ್ತರಿಸುವಾಗ ರೈತರ ಸಾಲ ಮನ್ನಾ ಮಾಡಲು ನಮ್ಮ ಬಳಿ ನೋಟು ಪ್ರಿಂಟ್ ಮಾಡುವ ಮೆಷಿನ್ ಇಟ್ಟುಕೊಂಡಿದ್ದೇವಾ ಎಂದು ಹೇಳಿದ್ದರು. ಆದರೆ ಸಾಲ ಮನ್ನಾ ಮಾಡುವುದನ್ನು ರಕ್ತದಲ್ಲಿ ಬರೆದುಕೊಡ್ತೀನಿ ಎಂದು ಯಡಿಯೂರಪ್ಪ ಅವರು ಹೇಳಿದ್ದರು. ರೈತರ ಆದಾಯ ದುಪ್ಪಟ್ಟು ಮಾಡುತ್ತೇವೆ ಎಂದು ಹೇಳಿದ್ದರು. ದುಪ್ಪಟ್ಟಾಗಿದೆಯಾ? ಆದರೆ ರೈತರು ಕೃಷಿ ಕೆಲಸಗಳಿಗಾಗಿ ಮಾಡುವ ಖರ್ಚು ದುಪ್ಪಟ್ಟಾಗಿದೆ. ಈ ಸರ್ಕಾರದ ಯೋಗ್ಯತೆಗೆ ಪರಿಶಿಷ್ಟ ಜಾತಿ, ಹಿಂದುಳಿದ ಜಾತಿಗಳ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನ ನೀಡಿಲ್ಲ. ಎಸ್,ಸಿ,ಪಿ/ಟಿ,ಎಸ್,ಪಿ ಯೋಜನೆಗೆ ಜನಸಂಖ್ಯೆಗೆ ಅನುಗುಣವಾಗಿ ಹಣ ನೀಡಿಲ್ಲ. ಸರಿಯಾಗಿ ಈ ಯೋಜನೆಗೆ ಹಣ ಬಿಡುಗಡೆ ಆಗಿದ್ದರೆ ಈ ವರ್ಷ ಕನಿಷ್ಠ 40,000 ಕೋಟಿ ಬರಬೇಕಿತ್ತು, ಆದರೆ ಕೇವಲ 28,000 ಕೋಟಿ ಹಣ ನೀಡಿದ್ದಾರೆ. ನಮ್ಮ ಸರ್ಕಾರದ ಕೊನೆ ಬಜೆಟ್ ಗಾತ್ರ 2.02 ಲಕ್ಷ ಕೋಟಿ ಇತ್ತು, ಆಗ ಈ ಯೋಜನೆಗೆ 30,000 ಕೋಟಿ ಹಣ ನೀಡಿದ್ದೆವು. ಈಗ ಬಜೆಟ್ ಗಾತ್ರ 2.65 ಲಕ್ಷ ಕೋಟಿ ಆಗಿದೆ, ಅನುದಾನವೂ ಹೆಚ್ಚಾಗಬೇಕಿತ್ತು. ಪರಿಶಿಷ್ಟ ಸಮುದಾಯದ ಜನರಿಗೆ ಟೋಪಿ ಹಾಕಿದ್ದೀರಿ ಎಂದು ಸಿದ್ದರಾಮಯ್ಯ ಟೀಕಾಪ್ರಹಾರ ನಡೆಸಿದರು.

ಜನರಿಗೆ ಚುನಾವಣೆ ವೇಳೆ ಭರವಸೆಗಳನ್ನು ನೀಡುವುದು ಸುಮ್ಮನೆನಾ? ನಾವು ನೀಡಿದ್ದ 165 ಭರಸವೆಗಳಲ್ಲಿ 158 ಭರವಸೆಗಳನ್ನು ಈಡೇರಿಸುವ ಜೊತೆಗೆ, 30 ಹೊಸ ಯೋಜನೆಗಳನ್ನು ಜಾರಿ ಮಾಡಿದ್ದೆವು. ಬಿಜೆಪಿಯವರು ಜನರಿಗೆ ದ್ರೋಹ ಮಾಡಿ, ತೆರಿಗೆ ಹಣ ಲೂಟಿ ಮಾಡುತ್ತಿದ್ದಾರೆ. ಇದಕ್ಕೆ ಜನರು ಪ್ರಶ್ನಿಸುತ್ತಾರೆ ಎಂದು ಧಾರ್ಮಿಕ ಹಾಗೂ ಜಾತಿ ವಿಚಾರಗಳನ್ನು ಮುನ್ನೆಲೆಗೆ ತರುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ,  ನಮ್ಮ ರಾಜ್ಯ ಬಸವಣ್ಣನ ನಾಡು. ಅವರು ನಮಗೆ ನುಡಿದಂತೆ ನಡೆಯಬೇಕು ಎಂಬ ಸಂದೇಶ ಸಾರಿದ್ದಾರೆ. ಹೀಗಾಗಿ ರಾಹುಲ್ ಗಾಂಧಿ ಅವರು ಬಸವಕಲ್ಯಾಣದಲ್ಲಿ, ನಾವು ನುಡಿದಂತೆ ನಡೆದಿದ್ದೇವೆ. ನೀವು ನುಡಿದಂತೆ ನಡೆಯುತ್ತಿದ್ದೀರಾ? ಎಂದು ಬಿಜೆಪಿಗೆ ಸವಾಲು ಹಾಕಿದರು.

ಕಳೆದ ಚುನಾವಣೆಯಲ್ಲಿ ಬಿಜೆಪಿ ಪ್ರಣಾಳಿಕೆಯನ್ನು ನಾನಿಂದು ನಿಮ್ಮ ಮುಂದೆ ಇಡುತ್ತಿದ್ದೇವೆ. ಆಮೂಲಕ ಬಿಜೆಪಿಯಿಂದ ವಚನ ವಂಚನೆಯಾಗಿದೆ ಎಂದು ಹೇಳುತ್ತಿದ್ದೇನೆ. ಯಡಿಯೂರಪ್ಪನವರು ತಮ್ಮ ಪ್ರಣಾಳಿಕೆಯಲ್ಲಿ ‘ಕರ್ನಾಟಕದ ಮುಂದೆ ನಮ್ಮ ವಚನ’ ಎಂದು ಹೇಳಿದ್ದರು. ಹಾಗಾಗಿ ಕಾಂಗ್ರೆಸ್ ಪಕ್ಷ ಇಂದಿನಿಂದ ಸರ್ಕಾರಕ್ಕೆ ಉತ್ತರ ಕೇಳುತ್ತಿದ್ದು, ಕಾಂಗ್ರೆಸ್ ನಾಯಕರೆಲ್ಲರೂ ಸಾಮಾಜಿಕ ಜಾಲತಾಣಗಳ ಮೂಲಕ ಬಿಜೆಪಿಯವರು ಕೊಟ್ಟ ವಚನ ಉಳಿಸಿಕೊಂಡಿದ್ದಾರಾ ಎಂದು ಕೇಳುತ್ತಿದ್ದೇವೆ. ನಮ್ಮ ಈ ಪ್ರಶ್ನೆಗಳಿಗೆ ನಿಮ್ಮ ಹತ್ತಿರ ಇದೆಯಾ ಉತ್ತರ? ಎಂಬ ಪ್ರಶ್ನೆ ಕಾಡುತ್ತಿದೆ.

ನೀವು ಬಂಡರು, ಸುಳ್ಳಿನ ಸರದಾರರು. ಒಂದು ಸುಳ್ಳನ್ನು ನೂರು ಬಾರಿ ಹೇಳಿ ಅದನ್ನೇ ಸುಳ್ಳು ಮಾಡಬೇಕು ಎಂದು ಬಿಜೆಪಿಯ ಮಾಜಿ ಅಧ್ಯಕ್ಷ ಈಶ್ವರಪ್ಪ ಭಾಷಣವನ್ನೂ ಮಾಡಿದ್ದಾರೆ. ಹೀಗಾಗಿ ನೀವು ಆತ್ಮಸಾಕ್ಷಿಯ ಉತ್ತರ ನೀಡಬೇಕು.

ಬಿಜೆಪಿ ಸರ್ಕಾರ ಶೇ.90ರಷ್ಟು ಭರವಸೆಗಳಲ್ಲಿ ನುಡಿದಂತೆ ನಡೆಯಲು ಸಾಧ್ಯವಾಗಿಲ್ಲ. ಆಮೂಲಕ ಅವರು ವಚನ ಭ್ರಷ್ಟಚಾರಿಗಳಾಗಿದ್ದಾರೆ. ಇಲ್ಲಿ ವಚನ ವಂಚನೆಯಾಗಿದೆ ಎಂದು ಹೇಳಲು ನಾವಿಂದು ಕೂತಿದ್ದೇವೆ. ಇಂದಿನಿಂದ ನಮ್ಮ ಪಕ್ಷದ ನಾಯಕರೆಲ್ಲರೂ ನಿತ್ಯ ಒಂದೊಂದು ಪ್ರಶ್ನೆ ಕೇಳುತ್ತೇವೆ ಎಂದು ಪ್ರಶ್ನಿಸಿದರು.

 ನೀವು ವಚನ ವಂಚನೆ ಮಾಡಿದ್ದು, ನಿಮ್ಮ ಪ್ರಣಾಳಿಕೆ ವಂಚನೆಗಳ ಸರಮಾಲೆ. ನೀವು ಜನರ ಮತ ಪಡೆದು ಭ್ರಷ್ಟ ಸರ್ಕಾರ ನಡೆಸಿದ್ದೀರಿ. ಭ್ರಷ್ಟಾಚಾರದಲ್ಲಿ ಕರ್ನಾಟಕ ರಾಷ್ಟ್ರ ರಾಜಧಾನಿಯನ್ನಾಗಿ ಮಾಡಿದ್ದೀರಿ. ಇಂದು ಕಾಂಗ್ರೆಸ್ ನ ಎಲ್ಲ ನಾಯಕರು ಈ ಎಲ್ಲ ಪ್ರಶ್ನೆಗಳನ್ನು ಕೇಳುತ್ತಿದ್ದು, ನಿಮ್ಮ ಹತ್ತಿರ ಇದೆಯಾ ಉತ್ತರ?

Join Whatsapp