ಬ್ಯಾಲನ್‌ ಡಿ ಓರ್‌ ಪ್ರಶಸ್ತಿ | 30 ಆಟಗಾರರ ಪಟ್ಟಿಯಿಂದ ಮೆಸ್ಸಿ ಔಟ್‌ !

Prasthutha|

‘ಫ್ರಾನ್ಸ್‌ ಫುಟ್ಬಾಲ್‌ ಮ್ಯಾಗಝಿನ್‌ʼ ನೀಡುವ ಪ್ರತಿಷ್ಠಿತ ಬ್ಯಾಲನ್ ಡಿ’ಓರ್‌ ಪ್ರಶಸ್ತಿಗೆ ಒಟ್ಟು 30 ಆಟಗಾರರನ್ನು ನಾಮನಿರ್ದೇಶನ ಮಾಡಲಾಗಿದೆ. ಆದರೆ ಅಚ್ಚರಿ ಎಂಬಂತೆ ಅಂತಿಮ 30 ಆಟಗಾರರ ಪಟ್ಟಿಯಿಂದ ಫುಟ್ಬಾಲ್‌ ದಿಗ್ಗಜ, ಹಾಲಿ ವಿಜೇತ ಲಿಯೋನೆಲ್ ಮೆಸ್ಸಿ ಹೆಸರನ್ನು ಕೈಬಿಡಲಾಗಿದೆ.

- Advertisement -

2005ರ ಬಳಿಕ ಇದೇ ಮೊದಲ ಬಾರಿಗೆ ಮೆಸ್ಸಿ ಅಗ್ರ 30 ಪಟ್ಟಿಯಿಂದ ಹೊರಗುಳಿದಿದ್ದಾರೆ. ದಾಖಲೆಯ 7 ಬಾರಿ ಬ್ಯಾಲನ್ ಡಿ’ಓರ್‌ ಪ್ರಶಸ್ತಿ ಗೆದ್ದಿರುವ ಮೆಸ್ಸಿ ಪ್ರಸ್ತುತ ಪ್ಯಾರಿಸ್‌ ಸೇಂಟ್‌ ಜರ್ಮನ್‌ ತಂಡದ ಪರ ಆಡುತ್ತಿದ್ದಾರೆ. ಪಿಎಸ್‌ಜಿಯ ಸಹ ಆಟಗಾರ ನೇಮರ್‌ ಜೂನಿಯರ್‌ ಸಹ ಅಂತಿಮ 30 ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದಾರೆ. ಮತ್ತೊಂದೆಡೆ ಕ್ರಿಸ್ಟಿಯಾನೋ ರೊನಾಲ್ಡೊ ಸತತವಾಗಿ 18ನೇ ವರ್ಷವೂ  ನಾಮನಿರ್ದೇಶನಗೊಳ್ಳುವ ಮೂಲಕ ದಾಖಲೆ ನಿರ್ಮಿಸಿದ್ದಾರೆ.

2018ನೇ ವರ್ಷ ಹೊರತುಪಡಿಸಿ, 2007ರಿಂದಲೂ ಲಿಯೋನೆಲ್ ಮೆಸ್ಸಿ, ಬ್ಯಾಲನ್ ಡಿ’ಓರ್‌ ಪ್ರಶಸ್ತಿಯ ಟಾಪ್‌ 3 ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತಲೇ ಬಂದಿದ್ದಾರೆ. ಈ ನಡುವೆ ದಾಖಲೆಯ 7 ಬಾರಿ ಈ ಪ್ರತಿಷ್ಠಿತ ಪ್ರಶಸ್ತಿಯನ್ನು 35 ವರ್ಷದ ಮೆಸ್ಸಿ ತನ್ನದಾಗಿಸಿಕೊಂಡಿದ್ದಾರೆ. ಕಳೆದ ಬಾರಿ ಬಾರ್ಸಿಲೋನಾದಿಂದ ಪಿಎಸ್‌ಜಿ ಕ್ಲಬ್‌ ಸೇರಿದ ಬಳಿಕ ಮೆಸ್ಸಿ ಪ್ರದರ್ಶನ ಮಂಕಾಗಿದೆ. ಕಳೆದ ಆವೃತ್ತಿಯಲ್ಲಿ ಕೇವಲ 11 ಗೋಲು ಗಳಿಸಲಷ್ಟೇ ಮೆಸ್ಸಿ ಶಕ್ತರಾಗಿದ್ದರು.

- Advertisement -

ಬ್ಯಾಲನ್ ಡಿ’ಓರ್‌ ಪ್ರಶಸ್ತಿಗೆ  ವೈಯಕ್ತಿಕ ಪ್ರದರ್ಶನ ಮತ್ತು ತಂಡದ ಗೆಲುವಿನಲ್ಲಿ ವಹಿಸುವ ನಿರ್ಣಾಯಕ ಪಾತ್ರವೇ ಮಾನದಂಡ ಎಂದು ಫ್ರಾನ್ಸ್‌ ಫುಟ್ಬಾಲ್‌ ಮ್ಯಾಗಝಿನ್‌ ಸ್ಪಷ್ಟಪಡಿಸಿದೆ.

ನಾಮನಿರ್ದೇಶನ ಪಟ್ಟಿಯಿಂದ ಮೆಸ್ಸಿ ಹೊರಗುಳಿಯುತ್ತಲೇ ರಿಯಲ್‌ ಮ್ಯಾಡ್ರಿಡ್‌ ಕ್ಲಬ್‌ನ ಮುಂಚೂಣಿ ಆಟಗಾರ ಕರೀಮ್‌ ಬೆಂಝೆಮಾ, ಈ ಬಾರಿಯ ಬ್ಯಾಲನ್ ಡಿ’ಓರ್‌ ಪ್ರಶಸ್ತಿ ಗೆಲ್ಲುವ ನೆಚ್ಚಿನ ಆಟಗಾರ ಎನಿಸಿದ್ದಾರೆ. ಚಾಂಪಿಯನ್ಸ್‌ ಲೀಗ್‌ ಕೂಟದಲ್ಲಿ 15 ಗೋಲುಗಳಿಸಿರುವ ಬೆಂಝೆಮಾ, ಲಾ ಲೀಗಾದಲ್ಲಿ 46 ಪಂದ್ಯಗಳಲ್ಲಿ 44 ಗೋಲು ಗಳಿಸಿದ್ದಾರೆ. ಇದಕ್ಕೂ ಮೊದಲು ಫ್ರಾನ್ಸ್‌ನ ರೇಮಂಡ್ ಕೊಪಾ (1958), ಮೈಕೆಲ್ ಪ್ಲಾಟಿನಿ (1983, 1984, 1985), ಜೀನ್-ಪಿಯರ್ ಪಾಪಿನ್ (1991) ಮತ್ತು ಜಿನೆಡಿನ್ ಜಿಡಾನೆ (1998) ಬ್ಯಾಲನ್ ಡಿ’ಓರ್‌ ಪ್ರಶಸ್ತಿ ಗೆದ್ದ ವಿಜೇತರಾಗಿದ್ದಾರೆ.

ನಾಮನಿರ್ದೇಶನಗೊಂಡ ಪ್ರಮುಖ ಆಟಗಾರರು

ಲೆವಾಂಡೋವ್ಸ್ಕಿ, ಕೈಲಿಯನ್ ಎಂಬಪ್ಪೆ, ಕರೀಮ್ ಬೆಂಝೆಮಾ, ಎರ್ಲಿಂಗ್ ಹಾಲೆಂಡ್ ಮತ್ತು ಐದು ಬಾರಿಯ ಬ್ಯಾಲನ್ ಡಿ’ಓರ್‌ ಪ್ರಶಸ್ತಿ ವಿಜೇತ ಕ್ರಿಸ್ಟಿಯಾನೊ ರೊನಾಲ್ಡೊ, ಮುಹಮ್ಮದ್ ಸಲಾಹ್, ಸ್ಯಾಡಿಯೊ ಮಾನೆ, ಕೆವಿನ್ ಡಿ ಬ್ರೂಯ್ನೆ, ಹ್ಯಾರಿ ಕೇನ್ ಮತ್ತು ಸನ್ ಹೆಯುಂಗ್-ಮಿನ್

ಪಟ್ಟಿಯಲ್ಲಿ ಮ್ಯಾಂಚೆಸ್ಟರ್‌ ಸಿಟಿಯ ಆರು ಆಟಗಾರರು

ಇಂಗ್ಲಿಷ್‌ ಪ್ರೀಮಿಯರ್‌ ಲೀಗ್‌ನ ಚಾಂಪಿಯನ್‌ ತಂಡ ಮ್ಯಾಂಚೆಸ್ಟರ್‌ ಸಿಟಿಯ ಆರು ಮಂದಿ ಆಟಗಾರರು ಅಗ್ರ 30 ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಫಿಲ್ ಫೋಡೆನ್, ಜೋವೊ ಕ್ಯಾನ್ಸೆಲೊ, ಕೆವಿನ್ ಡಿ ಬ್ರೂಯ್ನೆ, ರಿಯಾದ್ ಮಹ್ರೆಝ್, ಬರ್ನಾರ್ಡೊ ಸಿಲ್ವಾ, ಎರ್ಲಿಂಗ್ ಹಾಲೆಂಡ್ ಹೀಗೆ ಮ್ಯಾಂಚೆಸ್ಟರ್ ಸಿಟಿಯ ಆರು ಆಟಗಾರರು ಹಾಗೂ ಟ್ರೆಂಟ್ ಅಲೆಕ್ಸಾಂಡರ್-ಅರ್ನಾಲ್ಡ್, ಲೂಯಿಸ್ ಡಯಾಜ್, ಫ್ಯಾಬಿನ್ಹೋ, ಡಾರ್ವಿನ್ ನುನೆಜ್, ಸಲಾಹ್ ಮತ್ತು ವರ್ಜಿಲ್ ವ್ಯಾನ್ ಡಿಜ್ಕ್ ಮೊದಲಾಗಿ ಲಿವರ್‌ಪೂಲ್‌ ತಂಡದ ಆರು ನಾಮನಿರ್ದೇಶಿತರಲ್ಲಿ ಸೇರಿದ್ದಾರೆ.



Join Whatsapp