ಮಂಗಳೂರಿನ ಜೆಬಿಎಫ್ ನೌಕರರಿಗೆ 8 ತಿಂಗಳಿಂದ ವೇತನವಿಲ್ಲ: ಸಮಸ್ಯೆ ಇತ್ಯರ್ಥಕ್ಕೆ ಡಿ.20ರಂದು ಸಭೆ

Prasthutha|

ಮಂಗಳೂರು: ಮಂಗಳೂರು ವಿಶೇಷ ಆರ್ಥಿಕ ವಲಯದಲ್ಲಿರುವ ಜೆಬಿಎಫ್ ಕಂಪನಿಯು ಆರ್ಥಿಕ ಮುಗ್ಗಟ್ಟಿನಿಂದಾಗಿ ಕಾರ್ಯ ನಿರ್ವಹಣೆ ಮಾಡದಿರುವುದರಿಂದ ಅಲ್ಲಿನ ಉದ್ಯೋಗಿಗಳಿಗೆ ಕಳೆದ 8 ತಿಂಗಳಿನಿಂದ ವೇತನ ಪಾವತಿಯಾಗುತ್ತಿಲ್ಲ. ಈ ಸಮಸ್ಯೆಗಳ ಬಗ್ಗೆ ಚರ್ಚಿಸಲು ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರ ಅಧ್ಯಕ್ಷತೆಯಲ್ಲಿ ಡಿ.20ರಂದು ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.

- Advertisement -

ಸಂಸದರಾದ ನಳಿನ್ ಕುಮಾರ್ ಕಟೀಲ್, ಕಾರ್ಮಿಕ ಸಚಿವರಾದ ಶಿವರಾಮ್ ಹೆಬ್ಬಾರ್, ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವರಾದ ಎಸ್. ಅಂಗಾರ, ಮೂಡುಬಿದರೆ ಶಾಸಕರಾದ ಉಮನಾಥ್ ಕೋಟ್ಯಾನ್, ಬಂಟ್ವಾಳ ಶಾಸಕರಾದ ರಾಜೇಶ್ ಯು ನಾಯ್ಕ, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಅಪರ ಕಾರ್ಯದರ್ಶಿಗಳು, ಜಿಲ್ಲಾಧಿಕಾರಿಗಳಾದ ಡಾ. ರಾಜೇಂದ್ರ ಕೆ.ವಿ. ಮತ್ತು ಸಂಬಂಧಪಟ್ಟ ಇಲಾಖೆ ಹಾಗೂ ಕಂಪನಿಗಳ ಹಿರಿಯ ಅಧಿಕಾರಿಗಳು ಈ ಸಭೆಯಲ್ಲಿ ಭಾಗವಹಿಸಿದ್ದರು.

ಆರಂಭದಲ್ಲಿ ಶಾಸಕರಾದ ಉಮನಾಥ್ ಕೋಟ್ಯಾನ್ ನೌಕರರ ಸಮಸ್ಯೆಗಳ ಬಗ್ಗೆ ಸಭೆಗೆ ಮಾಹಿತಿ ನೀಡಿದರು.
ಈ ಪ್ರಕರಣವು ನ್ಯಾಷನಲ್ ಕಂಪನಿ ಲಾ ಟ್ರಿಬ್ಯುನಲ್ (ಎನ್ಸಿಎಲ್ಟಿ) ನಲ್ಲಿ ಇರುವುದರಿಂದ ನೌಕರರ ಸಂಘದವರು ವೇತನ ಪಾವತಿ ಬಾಕಿಯಿರುವ ಬಗ್ಗೆ ಅರ್ಜಿ ಸಲ್ಲಿಸುವಂತೆ ಕೈಗಾರಿಕಾ ಸಚಿವರು ಈ ಸಂದರ್ಭದಲ್ಲಿ ಸೂಚಿಸಿದರು.

- Advertisement -

ಜೆಬಿಎಫ್ ಕಂಪನಿಯ ನೌಕರರಿಗೆ ಪರ್ಯಾರ್ಯ ಉದ್ಯೋಗ ಒದಗಿಸಲು ಈ ಕಂಪನಿಯನ್ನು ಬೇರೆಯವರು ಖರೀದಿಸಿದ್ದಲ್ಲೀ ಆ ಉದ್ಯೋಗಿಗಳನ್ನು ಮುಂದುವರಿಸಲು ನಿರ್ದೇಶನ ನೀಡುವ ಬಗ್ಗೆ ಅಥವಾ ಉದ್ಯೋಗಿಗಳ ವಿದ್ಯಾರ್ಹತೆಯ ಆಧಾರದಲ್ಲಿ ಅವರನ್ನು ಇತರೆ ಕಂಪನಿಗಳಲ್ಲಿ ಉದ್ಯೋಗಕ್ಕೆ ಕೊಡಿಸಿಕೊಡುವ ಬಗ್ಗೆಯೂ ಸಭೆಯಲ್ಲಿ ವಿಸ್ತೃತವಾಗಿ ಚರ್ಚಿಸಲಾಯಿತು.
ಬರುವ ಜನವರಿಯಲ್ಲಿ ಮುಂದಿನ ಸಭೆಯನ್ನು ಬೆಂಗಳೂರಿನಲ್ಲಿ ನಡೆಸುವಂತೆ ಈ ಸಭೆಯಲ್ಲಿ ತೀರ್ಮಾನಿಸಲಾಯಿತು.

ಮಂಗಳೂರು ವಿಶೇಷ ಆರ್ಥಿಕ ವಲಯದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಅಧಿಕಾರಿಗಳು, ಜೆಬಿಎಫ್ ಸಂಸ್ಥೆಯ ಅಧಿಕಾರಿಗಳು ಮತ್ತು ನೌಕರರ ಸಂಘದ ಪದಾಧಿಕಾರಿಗಳು, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು ಸಭೆಯಲ್ಲಿದ್ದರು.



Join Whatsapp