ಸಿಎಂ ಬೊಮ್ಮಾಯಿಗೆ ಶಾಪ ಹಾಕಿದ ಬಸವಪ್ರಕಾಶ ಸ್ವಾಮೀಜಿ !

Prasthutha|

ಬೆಳಗಾವಿ: ಪೊಲೀಸರನ್ನು ಬಿಟ್ಟು ಖಾವಿಧಾರಿಗಳಿಗೆ ಸರಕಾರ ಅವಮಾನ ಮಾಡಿದೆ ಎಂದು ಕೂಡಲಸಂಗಮ ಬಸವ ಧರ್ಮ ಪೀಠದ ಬಸವಪ್ರಕಾಶ ಸ್ವಾಮೀಜಿಯವರು ಸರಕಾರದ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಅಷ್ಟೇ ಅಲ್ಲದೇ, ಇನ್ನು ಒಂದು ತಿಂಗಳಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳಲಿದ್ದಾರೆ ಎಂದು ಶಾಪವನ್ನು ಹಾಕಿದ ಘಟನೆ ನಡೆದಿದೆ. ಈ ಶಾಪಕ್ಕೆ ಪೀಠದ ದಯಾನಂದ ಸ್ವಾಮೀಜಿ, ಡಾ. ಗಂಗಾನಾಥ ಸ್ವಾಮೀಜಿಗಳೂ ಧ್ವನಿಗೂಡಿಸಿದ್ದಾರೆ.

- Advertisement -

“ಎಲ್ಲಾ ಸಸ್ಯಾಹಾರಿ ಸಂಘಗಳ ಸಹಯೋಗದೊಂದಿಗೆ ಪ್ರತಿಭಟನೆ ನಡೆಸುವವರಿದ್ದೇವೆ ಎಂದು ಮೊದಲೇ ಪ್ರಕಟಿಸಿದ್ದೆವು. ಹಾಗೆಯೇ ಪ್ರತಿಭಟನೆ ಜೋರಾಗಿ ನಡೆಯುತ್ತಿತ್ತು. ಆ ಸಂದರ್ಭದಲ್ಲಿ ಶಾಸಕರಾದ ಅರವಿಂದ್ ಬೆಲ್ಲದ ಮತ್ತು ಮಹೇಶ್ ಕಮಟಳ್ಳಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ್ದರು. ಮೊಟ್ಟೆ ಕೊಡುವುದಕ್ಕೆ ನಮ್ಮ ವಿರೋಧವೂ ಇದೆ ಎಮದಿದ್ದರು” ಎಂದು ಗಂಗಾದರ ಸ್ವಾಮೀಜಿ ಹೇಳಿದ್ದಾರೆ.

“ಆಗ ನಾವು ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲು ಮುಂದಾದಾಗ ಪೊಲೀಸರು ನಮ್ಮನ್ನು ತಡೆದರಲ್ಲದೆ ಅವಾಚ್ಯ ಶಬ್ದಗಳಿಂದ ನಮ್ಮನ್ನೆಲ್ಲಾ ನಿಂದಿಸಿದ್ದಾರೆ. ಬೂಟುಗಾಲಿನಲ್ಲಿ ಒದ್ದು ನಮಗೆ ಅವಮಾನ ಮಾಡಿದ್ದಾರೆ. ಪೊಲೀಸ್ ಇಲಾಖೆಗೆ ನಮ್ಮ ಧಿಕ್ಕಾರವಿದೆ. ಆಗ ನಮ್ಮ ಕಾರ್ಯಕರ್ತರು ಮುನ್ನುಗ್ಗಲು ಬಂದಾಗ ಲಾಠಿಚಾರ್ಚ್ ಮಾಡಲಾಗಿದೆ. ಇದಕ್ಕೆ ಸರಕಾರವೇ ಹೊಣೆ ಹೊರಬೇಕಾಗುತ್ತದೆ. ಇವರೆಲ್ಲಾ ಆರಕ್ಷಕರಲ್ಲ, ನರಭಕ್ಷಕರು “ಎಂದು ಬಸವಪ್ರಕಾಶ ಸ್ವಾಮೀಜಿಯವರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

- Advertisement -

“ಮುಂದಿನ ದಿನಮಾನಗಳಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳು ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳಲಿದ್ದಾರೆ. ನಮ್ಮೆಲ್ಲಾ ಸ್ವಾಮೀಜಿಗಳ ಶಾಪ ಮುಖ್ಯಮಂತ್ರಿಗಳನ್ನು ಸುಮ್ಮನೆ ಬಿಡುವುದಿಲ್ಲ. ಹರನ ರೂಪ ಜಂಗಮ ಎಂಬ ಮಾತಿದೆ. ಅಂತಹ ಜಂಗಮ ಮೂರ್ತಿಗಳನ್ನು ನಿಂದನೆ ಮಾಡಲಾಗಿದೆ. ಯಾಕೆ ಮುಖ್ಯಮಂತ್ರಿಗಳಿಗೆ ಕಿವಿಯಿಲ್ಲವೇ, ನಮ್ಮಂತಹ ಹಲವಾರು ಸ್ವಾಮೀಜಿಗಳ ಶಾಪ ಅವರಿಗೆ ತಟ್ಟಲಿದೆ”ಎಂದು ಬಸವಪ್ರಕಾಶ ಸ್ವಾಮೀಜಿಯವರು ಶಾಪ ಹಾಕಿದ್ದಾರೆ.

Join Whatsapp