ಭಜರಂಗದಳ ವಿರುದ್ಧ ಕ್ರಮ ಕೈಗೊಳ್ಳಲು ಸಾಕ್ಷಿ ಇಲ್ಲ : ಫೇಸ್ ಬುಕ್ ಇಂಡಿಯಾ ಮುಖ್ಯಸ್ಥ ಅಜಿತ್ ಮೋಹನ್

Prasthutha|

ನವದೆಹಲಿ : ಬಿಜೆಪಿ ಬೆಂಬಲಿಗ ಸಂಘಟನೆ ಭಜರಂಗ ದಳ ‘ಅಪಾಯಕಾರಿ ಸಂಘಟನೆ’ ಎಂದು ತಮ್ಮ ಆಂತರಿಕ ಭದ್ರತಾ ತಂಡ ಎಚ್ಚರಿಕೆ ನೀಡಿದ್ದರೂ, ಅದರ ವಿರುದ್ಧ ಕ್ರಮ ಕೈಗೊಳ್ಳಲು ಸೂಕ್ತ ಕಾರಣಗಳಿಲ್ಲ ಎಂದು ಫೇಸ್ ಬುಕ್ ಇಂಡಿಯಾ ಮುಖ್ಯಸ್ಥ ಅಜಿತ್ ಮೋಹನ್ ಹೇಳಿದ್ದಾರೆ. ಸಂಸದೀಯ ಸಮಿತಿ ಮುಂದೆ ವಿಚಾರಣೆಗೆ ಹಾಜರಾದ ಅವರು ಈ ಸ್ಪಷ್ಟನೆ ನೀಡಿದ್ದಾರೆ ಎಂದು ವರದಿಗಳು ತಿಳಿಸಿವೆ.

ಬಳಕೆದಾರರ ಸುರಕ್ಷತೆಯ ಕುರಿತು ಚರ್ಚಿಸುವುದಕ್ಕಾಗಿ ಕಾಂಗ್ರೆಸ್ ನಾಯಕ ಶಶಿ ತರೂರ್ ನೇತೃತ್ವದ ಮಾಹಿತಿ ತಂತ್ರಜ್ಞಾನ ಕುರಿತ ಸಂಸದೀಯ ಸಮಿತಿಯು ಅಜಿತ್ ಮೋಹನ್ ಗೆ ಸಮನ್ಸ್ ಜಾರಿಗೊಳಿಸಿತ್ತು. ತನ್ನದೇ ಆಂತರಿಕ ವರದಿಗಳಿದ್ದಾಗ್ಯೂ ಕ್ರಮ ಕೈಗೊಳ್ಳದ ಬಗ್ಗೆ ಫೇಸ್ ಬುಕ್ ಅನ್ನು ವಿಚಾರಣೆಗೆ ಗುರಿಪಡಿಸಲಾಗಿದೆ.

- Advertisement -

ಕಂಪೆನಿಯ ಸತ್ಯಶೋಧನಾ ತಂಡ ಭಜರಂಗದಳವನ್ನು ತಮ್ಮ ವೇದಿಕೆಯಿಂದ ನಿಷೇಧ ಹೇರಲು ಅಗತ್ಯವಾದ ಯಾವುದೇ ಅಂಶವನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ ಎಂದು ಅವರು ಹೇಳಿದ್ದಾರೆ.

ಭಾರತದಲ್ಲಿ ಅಲ್ಪಸಂಖ್ಯಾತರ ಮೇಲೆ ಹಿಂಸಾತ್ಮಕ ದಾಳಿಗಳನ್ನು ಬೆಂಬಲಿಸುವ ಭಜರಂಗದಳ ಅಪಾಯಕಾರಿ ಸಂಘಟನೆ ಎಂದು ತನ್ನ ಆಂತರಿಕ ಭದ್ರತಾ ತಂಡ ಎಚ್ಚರಿಕೆ ನೀಡಿದ್ದರೂ, ಅದರ ವಿರುದ್ಧ ಫೇಸ್ ಬುಕ್ ಕ್ರಮ ಕೈಗೊಂಡಿರಲಿಲ್ಲ ಎಂದು ‘ವಾಲ್ ಸ್ಟ್ರೀಟ್ ಜರ್ನಲ್’ ವರದಿ ಮಾಡಿತ್ತು. ಈ ವರದಿಯ ವಿರುದ್ಧ ಪತ್ರಿಕೆಯ ವಿರುದ್ಧ ಯಾಕೆ ಕ್ರಮ ಕೈಗೊಂಡಿಲ್ಲ ಎಂಬ ಸಮಿತಿಯ ಪ್ರಶ್ನೆಗೆ ಅಜಿತ್ ಮೋಹನ್ ಉತ್ತರಿಸಿಲ್ಲ ಎಂದು ವರದಿಗಳು ತಿಳಿಸಿವೆ.  

- Advertisement -