ಡಿಜೆಹಳ್ಳಿ-ಕೆಜಿಹಳ್ಳಿ ಗಲಭೆ | NIAಯಿಂದ SDPI ನಾಯಕ ಹಾಗೂ ಇತರರ ಬಂಧನ; ಷಡ್ಯಂತರದ ಮುಂದುವರಿದ ಭಾಗ: ಅಪ್ಸರ್ ಕೊಡ್ಲಿಪೇಟೆ

Prasthutha|

ಬೆಂಗಳೂರು : ಡಿ.ಜೆ.ಹಳ್ಳಿ- ಕೆ.ಜಿ. ಹಳ್ಳಿ ಗಲಭೆಗೆ ಸಂಬಂಧಿಸಿದಂತೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ಬೆಂಗಳೂರು ಜಿಲ್ಲಾಧ್ಯಕ್ಷ, ಕಾಂಗ್ರೆಸ್ ಹಾಗೂ ಎಸ್.ಡಿ.ಪಿ.ಐ ಸ್ಥಳೀಯ ನಾಯಕರನ್ನೊಳಗೊಂಡಂತೆ 17 ಮಂದಿಯನ್ನು ರಾಷ್ಟ್ರೀಯ ತನಿಖಾ ದಳ (ಎನ್.ಐ.ಎ) ನಿನ್ನೆ ಬಂಧಿಸಿದೆ. ಎಸ್.ಡಿ.ಪಿ.ಐ ನಾಯಕರ ಬಂಧನವು ಷಡ್ಯಂತ್ರದ ಮುಂದುವರಿದ ಭಾಗ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಹೇಳಿದೆ.

- Advertisement -

“ಬಂಧನಕ್ಕೊಳಗಾಗಿರುವ ಷರೀಫ್ ಈಗಾಗಲೇ ಅನೇಕ ಬಾರಿ ಎನ್.ಐ.ಎ. ಕಛೇರಿಗೆ ಭೇಟಿ ನೀಡಿ ತನಿಖೆಗೆ ಸ್ಪಂದಿಸಿದ್ದಾರೆ. ವಿವಿಧ ದೃಷ್ಟಿಕೋನದಲ್ಲಿ ತನಿಖೆ ನಡೆಸಿ ನೈಜ ಆರೋಪಿಗಳನ್ನು ಬಂಧಿಸ ಬೇಕಾಗಿದ್ದ ತನಿಖಾ ಸಂಸ್ಥೆ, ಕೊನೆ ಕ್ಷಣದಲ್ಲಿ ನಮ್ಮ ಸೈದ್ಧಾಂತಿಕ ವಿರೋಧಿಯಾದ ಬಿಜೆಪಿಯ ರಾಜಕೀಯ ಒತ್ತಡಕ್ಕೆ ಮಣಿದು ಷರೀಫ್ ಸೇರಿದಂತೆ ಇನ್ನಿತರ ಸ್ಥಳೀಯ ನಾಯಕರನ್ನು ಬಂಧಿಸಿ ತನಿಖಾ ಸಂಸ್ಥೆ ಸ್ವತಃ ಕಪ್ಪು ಚುಕ್ಕೆ ಹಾಕಿಕೊಂಡಿದೆ” ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ, ಅಪ್ಸರ್ ಕೊಡ್ಲಿಪೇಟೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

“ಸರ್ಕಾರ ರೂಪಿಸುವ ಜನ ವಿರೋಧಿ ನೀತಿಗಳನ್ನು ಜನತೆ ಒಪ್ಪಿಕೊಳ್ಳುವಂತೆ ಪರಿಸ್ಥಿತಿಗಳನ್ನು ನಿರ್ಮಿಸಲು ಬಿಜೆಪಿ ನೇತೃತ್ವದ ಸರ್ಕಾರ ಈ ರೀತಿಯ ಬಂಧನಗಳನ್ನು ನಡೆಸುತ್ತಿದೆ.  ಖಂಡಿತವಾಗಿಯೂ ಎಸ್.ಡಿ.ಪಿ.ಐ. ಇದನ್ನು ಒಂದು ಸವಾಲಾಗಿ ಸ್ವೀಕರಿಸುತ್ತದೆ. ಈ ಕುತಂತ್ರದ ಕುರಿತು ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಲಿದ್ದೇವೆ” ಎಂದು ಅವರು ಹೇಳಿದ್ದಾರೆ.

- Advertisement -

ಎಸ್.ಡಿ.ಪಿ.ಐ ಜಿಲ್ಲಾಧ್ಯಕ್ಷ‌ ಎಂ.ಡಿ.ಷರೀಫ್, ಎಸ್.ಡಿ.ಪಿ.ಐ, ಕಾಂಗ್ರೆಸ್ ಪಕ್ಷಗಳ ಸ್ಥಳೀಯ ನಾಯಕರು ಹಾಗೂ ಇನ್ನಿತರರನ್ನು ಎನ್.ಐ.ಎ ನಿನ್ನೆ ಬಂಧಿಸಿದೆ. ಈ ಬಂಧನದೊಂದಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರ ಸಂಖ್ಯೆ 187ಕ್ಕೆ ಏರಿಕೆಯಾಗಿದೆ.

Join Whatsapp