ಪೊಲೀಸ್ ಠಾಣೆಯಲ್ಲಿ ಮಹಿಳಾ ಸಿಬ್ಬಂದಿಯಿಂದ ರಾತ್ರಿ ಪಾಳಿ ಯಶಸ್ವಿ

Prasthutha|

ಮೈಸೂರು; ನಂಜನಗೂಡು ಉಪವಿಭಾಗದ ಬಿಳಿಗೆರೆ ಪೊಲೀಸ್ ಠಾಣೆಯಲ್ಲಿ ನ.24ರಂದು ರಾತ್ರಿ ಪಾಳಿಯಲ್ಲಿ ಮಹಿಳಾ ಪೊಲೀಸ್ ಅಧಿಕಾರಿಗಳು ಮಾತ್ರವೇ ಕಾರ್ಯನಿರ್ವಹಿಸುವ ಮೂಲಕ ಮಹಿಳೆಯರಲ್ಲಿ ಆತ್ಮಸ್ಥೈರ್ಯ ತುಂಬುವ ಪ್ರಯತ್ನ ಮಾಡಿದ್ದಾರೆ.

- Advertisement -


ರಾಷ್ಟ್ರೀಯ ಐಕ್ಯತಾ ಸಪ್ತಾಹದ ಹಿನ್ನೆಲೆಯಲ್ಲಿ ಒಟ್ಟು 50 ಮಹಿಳಾ ಸಿಬ್ಬಂದಿ ರಾತ್ರಿ ಪಾಳಿಯಲ್ಲಿ ಕೆಲಸ ನಿರ್ವಹಿಸಿದ್ದಾರೆ. ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಕೇವಲ ಮಹಿಳಾ ಸಿಬ್ಬಂದಿ ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಈ ಬಗ್ಗೆ ಮಹಿಳಾ ಮುಖ್ಯ ಪೇದೆ ಪಿ.ಚಂಪಕಾ ಅಭಿಪ್ರಾಯ ಹಂಚಿಕೊಂಡಿದ್ದು, ಮೊದಲು ಕೇವಲ ಮಹಿಳಾ ಸಿಬ್ಬಂದಿಗಳೇ ಕರ್ತವ್ಯ ನಿರ್ವಹಿಸಬೇಕು ಎಂದಾಗ ಆತಂಕವಾಗಿತ್ತು. ಆದರೆ ಈಗ ಆತ್ಮವಿಶ್ವಾಸ ಹೆಚ್ಚಾಗಿದೆ ಎಂದು ಹೇಳಿದ್ದಾರೆ.


ಉಪ ಪೊಲೀಸ್ ವರಿಷ್ಠಾಧಿಕಾರಿ ಜಿ. ನಿಖಿತಾ ನೇತೃತ್ವದಲ್ಲಿ ಮಹಿಳಾ ಅಧಿಕಾರಿಗಳು ಈ ವಿಚಾರದೊಂದಿಗೆ ಉನ್ನತಾಧಿಕಾರಿಗಳನ್ನು ಸಂಪರ್ಕಿಸಿದ್ದು, ಮೈಸೂರು ಎಸ್ ಪಿ ಆರ್. ಚೇತನ್ ಅವರು ಒಪ್ಪಿಗೆ ನೀಡಿದ್ದಾರೆ. ಮಹಿಳಾ ಮುಖ್ಯ ಪೇದೆ ಪಿ. ಚಂಪಕಾ ಈ ಮೊದಲು ಪುರುಷ ಪೊಲೀಸ್ ಸಿಬ್ಬಂದಿ ಜತೆ ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಿದ್ದರು.ಆದರೆ ಇದೇ ಮೊದಲ ಬಾರಿಗೆ ಮಹಿಳಾ ಸಿಬ್ಬಂದಿ ಜತೆ ರಾತ್ರಿ ಪಾಳಿ ಮಾಡಿದ್ದಾರೆ. ಆ ಮೂಲಕ ಪಿ. ಚಂಪಕಾ ಅಧಿಕಾರವನ್ನು ನಿರ್ವಹಿಸುವಲ್ಲಿ ಯಶಸ್ವಿಯಾಗಿದ್ದಾರೆ.

- Advertisement -


17 ವರ್ಷಗಳ ಪೊಲೀಸ್ ಸೇವೆಯಲ್ಲಿ ಮುಖ್ಯ ಪೇದೆ ಪಿ. ಚಂಪಕ ಎಂದೂ ಎಲ್ಲಾ ಬೀಟ್ ಪಾಯಿಂಟ್ ಗಳನ್ನು ಅಂದರೆ ರೌಡಿಶೀಟರ್ಗಳ ಚಲನವಲನ, ವಾಹನಗಳ ಉಸ್ತುವಾರಿ, ಅಪರಾಧಿಗಳ ಪಟ್ಟಿ ಮಾಡುವಿಕೆ, ಅನುಮಾಸ್ಪದವಾಗಿ ಓಡಾಡುವವರ ಪರಿಶೀಲನೆ ಒಟ್ಟಿಗೆ ಮಾಡಿಲ್ಲ. ಏಕೆಂದರೆ ಮಹಿಳಾ ಪೇದೆಗಳು ಮತ್ತು ಮುಖ್ಯಪೇದೆಗಳು ವಿಶೇಷ ಸಂದರ್ಭಗಳಲ್ಲಿ ಮಾತ್ರ ರಾತ್ರಿ ಪಾಳಿಯ ಕೆಲಸದಲ್ಲಿ ತೊಡಗುತ್ತಾರೆ.


ನ.26ರಂದು ರಾತ್ರಿ 9 ಗಂಟೆಗೆ ಪ್ರಾರಂಭವಾದ ಗಸ್ತು ಸತತ ಎಂಟು ಗಂಟೆಗಳ ಕಾಲ ನಡೆಯಿತು. ಒಂಬತ್ತು ಸ್ಥಳಗಳಿಗೆ ಭೇಟಿ ನೀಡುತ್ತಾ ಪಿ. ಚಂಪಕ, ತಮ್ಮ ದ್ವಿಚಕ್ರ ವಾಹನವನ್ನು ಓಡಿಸಿದ್ದಾರೆ. ತಮ್ಮ ಫೋನ್ ನಲ್ಲಿ ಇ-ಬೀಟ್ ಅಪ್ಲಿಕೇಶನ್ ಅನ್ನು ಬಳಸಿಕೊಂಡು ತಮ್ಮ ಉಪಸ್ಥಿತಿಯನ್ನು ನೋಂದಾಯಿಸಿದ್ದರು. ಎಂಟು ಪೊಲೀಸ್ ಠಾಣೆಗಳ 25 ಮಹಿಳಾ ಪೇದೆಗಳು ಮತ್ತು ಮುಖ್ಯ ಪೇದೆಗಳಿಗೂ ಇದು ಹೊಸ ಅನುಭವವಾಗಿತ್ತು ಎನ್ನುವುದು ವಿಶೇಷ. ಮಹಿಳಾ ಸಬಲೀಕರಣದ ಕಾರ್ಯಕ್ರಮವೊಂದರಲ್ಲಿ ತಮಗೆ ಈ ಹೊಸ ಅವಕಾಶ ಸಿಕ್ಕಿದೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ನಿಕಿತಾ ಹೇಳಿದ್ದಾರೆ.

Join Whatsapp