ಸೌದಿ ಅರೇಬಿಯಾದಲ್ಲಿ ಇನ್ನು ಮುಂದೆ ನಮಾಝ್ ಸಮಯದಲ್ಲಿ ಅಂಗಡಿ ಬಂದ್ ಇಲ್ಲ ?

Prasthutha|

ಸೌದಿ ಅರೇಬಿಯಾದಲ್ಲಿ ಇನ್ನು ಮುಂದೆ ನಮಾಝ್ ಸಮಯದಲ್ಲಿ ಅಂಗಡಿ ಮುಂಗಟ್ಟು ಬಂದ್ ಇರುವುದಿಲ್ಲ.
ಹೌದು, ಇಂತಹ ಚರ್ಚೆಯೊಂದು ಸೌದಿಯಲ್ಲಿ ನಡೆಯುತ್ತಿದ್ದು, ನಾಳೆ ನಡೆಯುವ ಸೌದಿ ಅರೇಬಿಯಾ ಶೂರಾ ಕೌನ್ಸಿಲ್ ಈ ಸಂಬಂಧ ಸ್ಪಷ್ಟ ತೀರ್ಮಾನ ಕೈಗೊಳ್ಳಲಿದೆ. ಈ ವಿಷಯದಲ್ಲಿ ಕೌನ್ಸಿಲ್ ನಲ್ಲಿ ಮತದಾನ ಕೂಡ ನಡೆಯಲಿದ್ದು, ಪ್ರಸ್ತಾವ ಅಂಗೀಕಾರಗೊಂಡರೆ ಅದು ಕಾನೂನಾಗುವ ಸಾಧ್ಯತೆ ಇದೆ.

- Advertisement -


ಶುಕ್ರವಾರದ ನಮಾಝ್ ಹೊರತುಪಡಿಸಿ ಉಳಿದ ದಿನಗಳ ನಮಾಝ್ ಸಮಯದಲ್ಲಿ ಬಲವಂತವಾಗಿ ವ್ಯಾಪಾರ ವಹಿವಾಟುಗಳನ್ನು ಮುಚ್ಚಿಸುವುದು ಸರಿಯಲ್ಲ ಎಂದು ಸೌದಿ ಶೂರಾದ ನಾಲ್ಕೂ ವಿಭಾಗಗಳು ಅಭಿಪ್ರಾಯಪಟ್ಟಿವೆ.
ನಮಾಜ್ ವೇಳೆ ಕಡ್ಡಾಯವಾಗಿ ವ್ಯಾಪಾರ ವಹಿವಾಟುಗಳನ್ನು ಮುಚ್ಚಿಸುವ ನಿಯಮಗಳಲ್ಲಿ ಬದಲಾವಣೆ ತರಬೇಕು ಎಂದು ಶೂರಾ ಕೌನ್ಸಿಲ್ , ಸೌದಿಯ ಇಸ್ಲಾಮಿಕ್ ವ್ಯವಹಾರಗಳ ಸಚಿವಾಲಯಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಈ ವಿಷಯದಲ್ಲಿ ಶೂರಾ ಕೌನ್ಸಿಲ್ ನಲ್ಲಿ ನಾಳೆ ಮತದಾನ ನಡೆಯಲಿದೆ.


ನಮಾಝ್ ವೇಳೆ ಔಷಧಾಲಯ, ಪೆಟ್ರೋಲ್ ಬಂಕ್, ಅಂಗಡಿ ಮುಂಗಟ್ಟುಗಳನ್ನು ಮುಚ್ಚುವ ನಿಯಮ ಸೂಕ್ತವಾದುದಲ್ಲ. ಶುಕ್ರವಾರದ ನಮಾಝ್ ವೇಳೆ ಮಾತ್ರ ಇವುಗಳನ್ನು ಮುಚ್ಚಿದರೆ ಸಾಕು ಎಂಬುದು ಶೂರಾ ಕೌನ್ಸಿಲ್ನ ವಾದವಾಗಿದೆ. ಶೂರಾ ಕೌನ್ಸಿಲ್ ನಲ್ಲಿ ಈ ಪ್ರಸ್ತಾವನೆ ಅಂಗೀಕಾರಗೊಂಡರೆ ಸೌದಿಯ ಉನ್ನತ ಮಟ್ಟದ ಸಮಿತಿ ಹಾಗೂ ಮಂತ್ರಿಮಂಡಲದ ಅನುಮೋದನೆ ಕೂಡ ಬೇಕಾಗುತ್ತದೆ. ಹಾಗಾದರೆ ಮಾತ್ರ ಈ ನಿಯಮ ಜಾರಿಗೆ ಬರಲಿದೆ.
ಗಲ್ಫ್ ನ ಇಸ್ಲಾಮಿಕ್ ದೇಶಗಳ ಪೈಕಿ ಸೌದಿಯಲ್ಲಿ ಮಾತ್ರ ಈ ನಿಯಮ ಜಾರಿಯಲ್ಲಿದೆ. ನಮಾಜ್ ಸಂದರ್ಭದಲ್ಲಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಬೇಕು ಎಂದು ಕುರ್ ಆನ್ ಆಗಲೀ, ಹದೀಸ್ ಆಗಲಿ ಹೇಳುತ್ತಿಲ್ಲ ಎಂದು ಶೂರಾ ಕೌನ್ಸಿಲ್ನ ಬಹುತೇಕ ಸದಸ್ಯರು ಹೇಳಿದ್ದಾರೆ.
ಐದು ಸಮಯದ ನಮಾಝ್ ವೇಳೆ ಅಂಗಡಿಗಳನ್ನು ಮುಚ್ಚುವುದರಿಂದ ಪ್ರವಾಸಿಗರು, ಯಾತ್ರಾರ್ಥಿಗಳು ಹಾಗೂ ರೋಗಿಗಳಿಗೆ ತೊಂದರೆಯಾಗುತ್ತಿರುವುದರಿಂದ ಈ ತಿದ್ದುಪಡಿ ಅಗತ್ಯ ಎಂದು ಕೌನ್ಸಿಲ್ ಅಭಿಪ್ರಾಯಪಟ್ಟಿದೆ.

Join Whatsapp