ಕಾರ್ಮಿಕ ಹೋರಾಟಗಾರ್ತಿ ನವದೀಪ್ ಕೌರ್ ಗೆ ಜಾಮೀನು ಮಂಜೂರು

Prasthutha|

ನವದೆಹಲಿ : ದೇಶಾದ್ಯಂತ ಭಾರೀ ಸುದ್ದಿಯಾಗಿದ್ದ ಕಾರ್ಮಿಕ ಹೋರಾಟಗಾರ್ತಿ ನವದೀಪ್ ಕೌರ್ ಗೆ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ಶುಕ್ರವಾರ ಜಾಮೀನು ಮಂಜೂರು ಮಾಡಿದೆ.

ಕೌರ್ ಅವರನ್ನು ಜ.12ರಂದು ದೆಹಲಿಯ ಗಡಿ ಭಾಗ ಕುಂಡ್ಲಿಯಲ್ಲಿ ಕಾರ್ಮಿಕರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಸಂದರ್ಭ ಪೊಲೀಸರು ಬಂಧಿಸಿದ್ದರು. ಕೇಂದ್ರದ ಕೃಷಿ ಕಾನೂನುಗಳನ್ನು ಹಿಂಪಡೆಯುವಂತೆ ದೆಹಲಿ ಗಡಿ ಭಾಗಗಳಲ್ಲಿ ರೈತರು ನಡೆಯುತ್ತಿದ್ದಾಗಲೇ, ಕಾರ್ಮಿಕರ ವಿವಿಧ ಹಕ್ಕುಗಳಿಗಾಗಿ ಕುಂಡ್ಲಿಯಲ್ಲಿ ಪ್ರತಿಭಟನೆ ನಡೆಸಿದ್ದ ಕೌರ್ ಅವರನ್ನು ಬಂಧಿಸಲಾಗಿತ್ತು. ತನ್ನ ವಿರುದ್ಧ ದಾಖಲಾಗಿದ್ದ ಕೊಲೆ ಯತ್ನ ಪ್ರಕರಣದಲ್ಲಿ ಕೌರ್ ಗೆ ಇಂದು ಜಾಮೀನು ನೀಡಲಾಗಿದೆ.

- Advertisement -

ಕೌರ್ ಅವರನ್ನು ಹರ್ಯಾಣದ ಕರ್ನಲ್ ಜೈಲಿನಲ್ಲಿ ಇರಿಸಲಾಗಿತ್ತು. ಕಸ್ಟಡಿಯಲ್ಲಿದ್ದಾಗ ಪೊಲೀಸರು ತನಗೆ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಕೌರ್ ಆರೋಪಿಸಿದ್ದರು. ಆದರೆ, ಜೈಲು ಅಧಿಕಾರಿಗಳು ಆರೋಪ ತಳ್ಳಿ ಹಾಕಿದ್ದರು. ಕೌರ್ ಅವರ ಬಂಧನ ಕುರಿತಂತೆ ದೇಶಾದ್ಯಂತ ಭಾರೀ ಚರ್ಚೆಗಳಾಗಿದ್ದವು. ಅವರ ಮೇಲಿನ ಪೊಲೀಸ್ ದೌರ್ಜನ್ಯದ ಆರೋಪಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.  

- Advertisement -