ಪ್ರಕೃತಿ ವಿಕೋಪ: ತುರ್ತು ಪರಿಹಾರ 50 ಸಾವಿರ ರೂ.ಗೆ ಹೆಚ್ಚಿಸಲು ಆಗ್ರಹ

Prasthutha|

ಮಂಗಳೂರು: ಭಾರೀ ಮಳೆಯಿಂದ ಸಂಕಷ್ಟಕ್ಕೀಡಾದವರಿಗೆ ತುರ್ತು 10 ಸಾವಿರ ರೂ.ಗಳ ಪರಿಹಾರ ಯಾವುದಕ್ಕೂ ಸಾಲುವುದಿಲ್ಲ, ಪ್ರವಾಹದಿಂದ ಜನಸಾಮಾನ್ಯರ ಬದುಕು ದುಸ್ತರವಾಗಿದೆ. ಸಂಕಷ್ಟಕ್ಕೀಡಾದವರಿಗೆ ತುರ್ತಾಗಿ ಕನಿಷ್ಠ 50 ಸಾವಿರ ರೂ.ಗಳ ಪರಿಹಾರವನ್ನು ಸರ್ಕಾರ ನೀಡಬೇಕು ಎಂದು ಕೆ.ಪಿ.ಸಿ.ಸಿ.ಮಾಧ್ಯಮ ವಕ್ತಾರ ಶೌವಾದ್ ಗೂನಡ್ಕ ಆಗ್ರಹಿಸಿದ್ದಾರೆ.

- Advertisement -


ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಅವರು, ದ.ಕ.ಜಿಲ್ಲೆ ಸೇರಿದಂತೆ ರಾಜ್ಯದ ಹಲವು ಕಡೆ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಜನಸಾಮಾನ್ಯರು ಸಂಕಷ್ಟಕೀಡಾಗಿದ್ದು, ಹಾನಿಗೊಂಡಿರುವ ಮನೆಗಳಿಗೆ ಹಾಗೂ ಕೃಷಿ ಪ್ರದೇಶಗಳಿಗೆ ವಿಳಂಬ ಮಾಡದೆ ರಾಜ್ಯ ಸರ್ಕಾರವು ತುರ್ತಾಗಿ ಪರಿಹಾರ ನೀಡಬೇಕು. ಮನೆಯಲ್ಲಿನ ಗೃಹೋಪಯೋಗಿ ಸೇರಿದಂತೆ ಇತರೆ ಸಾಮಗ್ರಿಗಳು ಹಾನಿಯಾದಲ್ಲಿ ನೀಡಲಾಗುತ್ತಿರುವ 10 ಸಾವಿರ ರೂ.ಗಳ ಪರಿಹಾರ ಯಾವುದಕ್ಕೂ ಸಾಲುವುದಿಲ್ಲ. ಪ್ರತಿಯೊಬ್ಬ ಸಂತ್ರಸ್ತರಿಗೂ ಕನಿಷ್ಠ 50 ಸಾವಿರ ರೂ.ಗಳ ತುರ್ತು ಪರಿಹಾರವನ್ನು ನೀಡಲು ರಾಜ್ಯ ಸರ್ಕಾರ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಅನಗತ್ಯ ದುಂದುವೆಚ್ಚಗಳನ್ನು ಮಾಡುವ ಸರ್ಕಾರ ಇಂತಹ ಸಂದರ್ಭದಲ್ಲಿ ಜನರ ಸಂಕಷ್ಟಗಳಿಗೆ ಸ್ಪಂದಿಸುತ್ತಿಲ್ಲ. ಜೀವಹಾನಿ ಹಾಗೂ ಸಂಪೂರ್ಣ ಮನೆಹಾನಿಯಾದಲ್ಲಿ 5 ಲಕ್ಷ ರೂ.ಗಳ ಪರಿಹಾರವನ್ನು 10 ಲಕ್ಷ ರೂ.ಗಳಿಗೆ ಏರಿಸಬೇಕು. ಪರಿಹಾರವನ್ನು ನೀಡುವ ನಿಯಮಾವಳಿಗಳನ್ನು ಸಡಿಲಗೊಳಿಸಬೇಕು. ಅನಗತ್ಯ ನಿಯಮಗಳಿಂದ ಸಿಗಬೇಕಾದ ಪರಿಹಾರವು ಸಂತ್ರಸ್ತರಿಗೆ ಸಿಗುತ್ತಿಲ್ಲ.

ಜನಸಾಮಾನ್ಯರ ಸಂಕಷ್ಟಗಳಿಗೆ ಸ್ಪಂದಿಸದ ಈ ಸರ್ಕಾರ ಚಲನಚಿತ್ರಗಳಿಗೆ ತೆರಿಗೆ ವಿನಾಯಿತಿಯನ್ನು ನೀಡುತ್ತದೆ. ಆದರೆ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡಲು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲವೆಂದು ಶೌವಾದ್ ಗೂನಡ್ಕ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Join Whatsapp