ಮದರಸಾಗಳ ಮೇಲಿನ ಬುಲ್ಡೋಜರ್ ದಾಳಿ ಆಕ್ರಮಣಕಾರಿ ಕ್ರಮ, ಇದನ್ನು ಭಾರತದ ಮುಸ್ಲಿಮರು ಒಪ್ಪುವುದಿಲ್ಲ: ಮುಹಮ್ಮದ್ ಅಹ್ಮದ್ ಬೇಗ್ ನದ್ವಿ

Prasthutha|


ನವದೆಹಲಿ: ಯುಪಿ, ಮಧ್ಯಪ್ರದೇಶದಂತೆಯೇ, ಅಸ್ಸಾಂನಲ್ಲೂ ಮದರಸಾಗಳ ಮೇಲೆ ಬುಲ್ಡೋಜರ್ ದಾಳಿ ನಡೆದಿರುವುದು ಖಂಡನೀಯ. ಇದು ಅತ್ಯಂತ ಆಕ್ರಮಣಕಾರಿ ಕ್ರಮ ಎಂದು ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ನ ರಾಷ್ಟ್ರೀಯ ಅಧ್ಯಕ್ಷ ಮುಹಮ್ಮದ್ ಅಹ್ಮದ್ ಬೇಗ್ ನದ್ವಿ ತಿಳಿಸಿದ್ದಾರೆ.

- Advertisement -


ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಅಸ್ಸಾಮ್ನ ಮದರಸಾ ಮತ್ತು ತೆಲಂಗಾಣ ಶಂಸಾಬಾದ್ ಮಸೀದಿ ಮೇಲೆ ಬುಲ್ಡೋಜರ್ ದಾಳಿ ನಡೆದಿರುವುದು ರಾಜ್ಯ ಸರ್ಕಾರಗಳ ಕ್ರೂರ ಹಾಗೂ ಆಕ್ರಮಣಕಾರಿ ನಡವಳಿಕೆಯಾಗಿದ್ದು, ಇದನ್ನು ಭಾರತೀಯ ಮುಸ್ಲಿಮರು ಎಂದಿಗೂ ಸಹಿಸುವುದಿಲ್ಲವೆಂದು ಅವರು ತಿಳಿಸಿದ್ದಾರೆ.


ಮುಸ್ಲಿಮರು ಮಸೀದಿ ಮತ್ತು ಮದರಸಾಗಳನ್ನು ತಮ್ಮ ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುತ್ತಾರೆ. ಅದನ್ನು ರಕ್ಷಿಸಲು ಮುಸ್ಲಿಮರು ಸದಾ ಬದ್ಧರಾಗಿದ್ದಾರೆ. ಆರೆಸ್ಸೆಸ್ಸ್ ಪ್ರಾಯೋಜಿತ ಸರಕಾರದ ಈ ಅಕ್ರಮ ನಡವಳಿಕೆ ಖಂಡನೀಯ. ಈ ದೇಶ ಆರೆಸ್ಸೆಸ್ಸಿನ ಹಿಂದುತ್ವದ ಸ್ವತ್ತಲ್ಲ, ಸ್ವಾತಂತ್ರ್ಯದ ಹೋರಾಟಗಳಲ್ಲಿ ಆರೆಸ್ಸೆಸ್ ಯಾವುದೇ ಪಾತ್ರ ವಹಿಸಿರಲಿಲ್ಲ. ಎಲ್ಲಾ ಭಾರತೀಯರು ಭಾರತದ ಸ್ವಾತಂತ್ರ್ಯಕ್ಕಾಗಿ ರಕ್ತ, ಪ್ರಾಣ ಮತ್ತು ಜೀವನ ತ್ಯಾಗ ಮಾಡಿ ಹೋರಾಟ ಮಾಡುವಾಗ ಆರೆಸ್ಸೆಸ್, ಹಿಂದುತ್ವ ರಾಷ್ಟ್ರದ ತಂತ್ರಗಾರಿಕೆ ಯಲ್ಲಿ ತೊಡಗಿಸಿಕೊಂಡಿತ್ತು. ಅಂತಹವರು ಇಂದು ದೇಶದ ಒಂದು ವರ್ಗದ ಜನರ ಮೇಲೆ ಕುಂಟು ನೆಪದಲ್ಲಿ ದಬ್ಬಾಳಿಕೆ ನಡೆಸುತ್ತಿದ್ದಾರೆ. ಇದೇ ವೇಳೆ ಕೆಲವರು ದೇಶದ ಅಲ್ಪಸಂಖ್ಯಾತ ತಳಸಮುದಾಯವನ್ನು ಶೈಕ್ಷಣಿಕ, ರಾಜಕೀಯ, ಆರ್ಥಿಕವಾಗಿ ಮೇಲೆತ್ತಲು ಪ್ರಯತ್ನಿಸುವವರ ವಿರುದ್ಧ ಸುಳ್ಳಾರೋಪ ಹೊರಿಸಲು ಪ್ರಯತ್ನ ನಡೆಸುತ್ತಿದ್ದಾರೆ. ಅವರನ್ನು, 2047ರ ವೇಳೆಗೆ ಭಾರತವನ್ನು ಇಸ್ಲಾಮಿಕ್ ದೇಶವನ್ನಾಗಿ ಮಾಡಲು ಹೊರಟ ಉಗ್ರಗಾಮಿಗಳೆಂದು ಬಿಂಬಿಸಿ ಸರಕಾರ ಜೈಲಿಗೆ ಹಾಕುತ್ತಿರುವುದು ಕೂಡ ಖಂಡನೀಯ ಎಂದು ಮುಹಮ್ಮದ್ ಅಹ್ಮದ್ ಬೇಗ್ ನದ್ವಿ ಹೇಳಿದ್ದಾರೆ.

- Advertisement -


ಭಾರತದಲ್ಲಿ ಅನೇಕ ಬ್ರಾಹ್ಮಣ್ಯ ಹಿಂದುತ್ವ ಸಂಘಟನೆಗಳು ದೇಶವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲು ಅಹೋರಾತ್ರಿ ಬಹಿರಂಗ ಕಾರ್ಯಚಟುವಟಿಕೆಗಳನ್ನು ನಡೆಸುತ್ತಿವೆ. ಅಂತಹ ದೇಶದ್ರೋಹಿಗಳ ಮೇಲೆ ಯಾವುದೇ ಕಠಿಣ ಕ್ರಮಕ್ಕೆ ಸರಕಾರ ಮುಂದಾಗದೆ ದ್ವಂದ್ವ ನೀತಿ ತೋರುತ್ತಿದೆ. ಈ ದೇಶವು ಇಂತಹ ದ್ವಂದ್ವ ನೀತಿಗಳಿಂದ ಎಂದಿಗೂ ಪ್ರಗತಿ ಸಾಧಿಸಲು ಸಾಧ್ಯವಿಲ್ಲ. ಇದು ಜಾತ್ಯತೀತ ದೇಶ. ಇಲ್ಲಿ ಎಲ್ಲಾ ಜಾತಿ, ಧರ್ಮ, ಪಂಥ, ಪಂಗಡದ ಜನರಿಗೆ ಅವರವರ ನಂಬಿಕೆಯ ಪ್ರಕಾರ ಬದುಕುವ ಪೂರ್ಣ ಸ್ವಾತಂತ್ರ್ಯವನ್ನು ಸಂವಿಧಾನ ನೀಡಿದೆ. ದೇಶದಲ್ಲಿ ದ್ವೇಷ ಬೆಳೆಸಿ ವಿಷಬೀಜ ಬಿತ್ತುತ್ತಿರುವುದು ದೇಶಕ್ಕೆ ಬಹುದೊಡ್ಡ ಅಪಾಯವನ್ನು ತಂದೊಡ್ಡಲಿದೆ ಎಂದು ಅವರು ಎಚ್ಚರಿಸಿದ್ದಾರೆ.


ಇಂತಹ ಆಪತ್ತಿನ ಸಮಯದಲ್ಲಿ ದೇಶವನ್ನು ಪ್ರಜಾಪ್ರಭುತ್ವ ರೀತಿಯಲ್ಲಿ ಉಳಿಸಿಕೊಳ್ಳಲು ಮುಸ್ಲಿಮರು, ದಲಿತರು, ಸಿಖ್ಖರು ಒಗ್ಗೂಡಿ ಸರಕಾರದ ದಬ್ಬಾಳಿಕೆಯ ವಿರುದ್ಧ ನಿಲ್ಲಬೇಕಾಗಿದೆ. ವಿಶೇಷವಾಗಿ ರಾಜಕೀಯ ಮುಖಂಡರು ಮತ್ತು ಧಾರ್ಮಿಕ ಮುಖಂಡರು ದಬ್ಬಾಳಿಕೆಯನ್ನು ಕೊನೆಗೊಳಿಸಲು ತಕ್ಷಣ ಮುಂದಾಗಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಆದರೆ ಇದೀಗ ಕಂಡು ಬರುವ ಅನ್ಯಾಯದ ವಿರುದ್ಧದ ಮೌನ ಖಂಡಿತಾ ದೇಶಕ್ಕೆ ಅಪಾಯಕಾರಿ. ಇದು ದೇಶವನ್ನು ಅಭಿವೃದ್ಧಿಪಥದತ್ತ ಕೊಂಡೊಯ್ಯುವ ಬದಲು ದುರ್ಬಲಗೊಳಿಸಲಿದೆ. ಸಾಮ್ರಾಜ್ಯಶಾಹಿ ದೃಷ್ಟಿಕೋನ ಹೊಂದಿದ್ದ ಸರ್ವಾಧಿಕಾರಿಗಳ ಅಂತ್ಯ ಹೇಗಾಯಿತು ಎಂಬುದು ಇತಿಹಾಸದಲ್ಲಿ ದಾಖಲಾಗಿದೆ. ಇಟಲಿಯ ಸರ್ವಾಧಿಕಾರಿ ಮುಸಲೋನಿಯನ್ನು ಸಾರ್ವಜನಿಕವಾಗಿ ಕೊಲ್ಲಲಾಯಿತು. ಲಕ್ಷಾಂತರ ಜನರ ರಕ್ತದಿಂದ ಹೋಳಿ ಆಟವಾಡಿದ ಜರ್ಮನಿಯ ಹಿಟ್ಲರ್ ತನ್ನ ರಿವಾಲ್ವರ್ನಿಂದ ತನ್ನನ್ನೇ ಕೊಂದನೆಂದು ಇತಿಹಾಸ ಹೇಳುತ್ತದೆ. ಸರ್ವಾಧಿಕಾರಿಗಳು ಅತ್ಯಂತ ಕೆಟ್ಟ ಸಾವಿಗೆ ಶರಣಾಗಿದ್ದರು. ಇದು ನಮ್ಮ ದೇಶಕ್ಕೂ ಎಲ್ಲಾ ದಮನಕಾರಿಗಳಿಗೂ ಸಹ ಪಾಠ ಆಗಬೇಕಾಗಿದೆ ಎಂದು ಅವರು ಹೇಳಿದ್ದಾರೆ.


ಮಸೀದಿ, ಮದರಸಾಗಳು ಮತ್ತು ಇತರ ಧರ್ಮದವರ ಧಾರ್ಮಿಕ ಕೇಂದ್ರಗಳನ್ನು ಧ್ವಂಸಗೊಳಿಸಿ ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಸಾಧ್ಯವಿಲ್ಲ. ನಿರುದ್ಯೋಗ, ಬೆಲೆ ಏರಿಕೆ ಮತ್ತು ಆರ್ಥಿಕ ಸಂಕಷ್ಟ ದಿಂದ ದೇಶವನ್ನು ರಕ್ಷಣೆ ಮಾಡಬೇಕಾದುದು ಸರಕಾರದ ಕೆಲಸ. ಸರಕಾರ ಇದರತ್ತ ಗಮನ ಹರಿಸಬೇಕಾಗಿದೆ. ಎಲ್ಲಾ ರಾಜಕೀಯ ನಾಯಕರು, ಧಾರ್ಮಿಕ ಮುಖಂಡರು ಮತ್ತು ವಿಶೇಷವಾಗಿ ಎಲ್ಲಾ ವಿದ್ವಾಂಸರು ರಾಷ್ಟ್ರದ ರಕ್ಷಣೆಗಾಗಿ ಮತ್ತು ಸಂವಿಧಾನದ ರಕ್ಷಣೆಗಾಗಿ ಒಟ್ಟಾಗಿ ಧ್ವನಿ ಎತ್ತಬೇಕೆಂದು ಹೋರಾಟದ ನಾಯಕತ್ವ ವಹಿಸಬೇಕೆಂದು ಅವರು ಪತ್ರಿಕಾ ಪ್ರಕಟಣೆಯ ಮೂಲಕ ಆಗ್ರಹಿಸಿದ್ದಾರೆ.

Join Whatsapp