ಸಿದ್ದಾಪುರ: ಕಳೆದ 3ವರ್ಷಗಳ ಹಿಂದೆ ಸುರಿದ ಮಹಾಮಳೆಗೆ ಕಾವೇರಿ ನದಿ ಉಕ್ಕಿ ಹರಿದು ನದಿ ದಡದಲ್ಲಿ ವಾಸವಾಗಿದ್ದವರ ಮನೆ ಆಸ್ತಿಪಾಸ್ತಿ ಕಳೆದುಕೊಂಡು ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಇಂದಿಗೂ ಶಾಶ್ವತ ಸೂರು ಹಾಗೂ ಮೂಲಸೌಕರ್ಯ ತಲುಪದೆ ಅತಂತ್ರ ಸ್ಥಿತಿಯಲ್ಲಿ ಬದುಕು ಸಾಗಿಸುತ್ತಿರುವ ನೆಲ್ಲಿಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಟ್ಟದ ಕಾಡು, ಬರಡಿ, ಕುಂಬಾರಗುಂಡಿ ಗ್ರಾಮದ ಸಮಸ್ಯೆಗಳನ್ನು ಬಗೆ ಹರಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಹಲವು ವರ್ಷಗಳಿಂದ ನದಿ ದಡದಲ್ಲಿ ವಾಸವಾಗಿದ್ದ ನೂರಾರು ಕುಟುಂಬಗಳ ಮನೆಗಳು ನೆಲಸಮಗೊಂಡ ಹಲವು ಮನೆಗಳು ಹಾನಿಯಾಗಿದೆ. ಪ್ರವಾಹ ಸಂದರ್ಭದಲ್ಲಿ ಮನೆ ಕಳೆದುಕೊಂಡ ಕುಟುಂಬಗಳು ಪರಿಹಾರ ಕೇಂದ್ರದಲ್ಲಿದ್ದ ಸಂದರ್ಭ ಶಾಶ್ವತ ಸೂರು, ಪರಿಹಾರ, ಬಾಡಿಗೆ ನೀಡುವ ಭರವಸೆ ನೀಡಿದ್ದು ಇದುವರೆಗೂ ಯಾವುದೂ ಈಡೇರಲಿಲ್ಲ ಎಂದು ನಿವಾಸಿಗಳು ಕೊಡಗು ಜಿಲ್ಲಾಡಳಿತದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನೆಲ್ಯಹುದಿಕೇರಿ ಸೇತುವೆಯಿಂದ ಕುಂಬಾರಗುಂಡಿ ಹೊಳೆಕೆರೆ ರಸ್ತೆಗಳು ಸಂಪೂರ್ಣ ಹಾಳಾಗಿದ್ದು ವಾಹನ ಸಂಚಾರ ಹಾಗೂ ನಡೆದಾಡಲೂ ಸಾಧ್ಯವಾಗದಂಥ ಪರಿಸ್ಥಿತಿ ನಿರ್ಮಾಣವಾಗಿದ್ದು ಗುಂಡಿಗಳಲ್ಲಿ ಮಳೆ ನೀರು ನಿಂತು ಕೆಸರು ಮಯವಾಗಿದೆ. ಕೂಡಲೇ ಗ್ರಾಮ ಪಂಚಾಯಿತಿ ಎಚ್ಚೆತ್ತುಕೊಂಡು ತಾತ್ಕಾಲಿಕ ಗುಂಡಿ ಮುಚ್ಚುವ ಕೆಲಸ ಮಾಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ರಸ್ತೆ ಸೇರಿದಂತೆ ಮೂಲ ಸೌಕರ್ಯ ಕಲ್ಪಿಸಬೇಕೆಂದು ಒತ್ತಾಯಿಸಿ ಗ್ರಾಮದಲ್ಲಿ ಜಮಾಯಿಸಿದ ಸ್ಥಳೀಯರು ಸಮಸ್ಯೆ ಬಗೆಹರಿಯದಿದ್ದಲ್ಲಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.ಪ್ರವಾಹದಿಂದ ಮನೆ ಆಸ್ತಿಪಾಸ್ತಿ ಕಳೆದುಕೊಂಡು ಗುಡಿಸಿಲಿನಲ್ಲಿ ವಾಸವಾಗಿದ್ದೇವೆ ನೆಮ್ಮದಿಯಾಗಿ ಜೀವನ ನಡೆಸಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು ಶಾಶ್ವತ ಸೂರು ಪರಿಹಾರ ಇನ್ನೂ ಸಿಕ್ಕಿಲ್ಲ ಗಾಳಿ. ಮಳೆ ಚಳಿಯಲ್ಲಿ ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದರೂ ಜನರ ಸಮಸ್ಯೆಗಳಿಗೆ ಸ್ಪಂದಿಸಲು ಯಾರೂ ಮುಂದಾಗುತ್ತಿಲ್ಲ ಎಂದು ಮಹಿಳೆಯರು ಅಳಲು ತೋಡಿಕೊಂಡರು.
ಈ ಸಂದರ್ಭ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಾಬು ವರ್ಗಿಸ್ ಸ್ಥಳಕ್ಕೆ ಭೇಟಿ ನೀಡಿ ಸ್ಥಳೀಯ ನಿವಾಸಿಗಳ ಸಮಸ್ಯೆ ಆಲಿಸಿದರು. ನಂತರ ಮಾತನಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಟ್ಟದಕಾಡು, ಕುಂಬಾರಗುಂಡಿ, ಹೊಳೆಕೆರೆ, ಬರಡಿ ಭಾಗದ ನದಿ ದಡದ ನಿವಾಸಿಗಳಿಗೆ ಸರ್ಕಾರ ಶಾಶ್ವತ ಸೂರು ಪರಿಹಾರ ನೀಡುತ್ತಿಲ್ಲ.
ಸಂತ್ರಸ್ತರಿಗಾಗಿ ಅಭ್ಯತ್ ಮಂಗಲ ಬಳಿ 8ಎಕರೆ ಜಾಗ ಗುರುತಿಸಲಾಗಿದ್ದರೂ ಇಂದಿಗೂ ಅಭಿವೃದ್ಧಿ ಕಾರ್ಯಗಳು ಮಾಡಲು ಮುಂದಾಗಿಲ್ಲ.ಜಿಲ್ಲಾಧಿಕಾರಿಗಳು ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಹೋರಾಟ ಸಮಿತಿ ಮೂಲಕ ಮನವಿ ಮಾಡಲಾಗಿದ್ದರೂ ಜನರ ಸಮಸ್ಯೆಗಳನ್ನ ಬಗೆಹರಿಸಲು ಅಧಿಕಾರಿಗಳು ಮುಂದಾಗುತ್ತಿಲ್ಲ ಹಲವು ಕುಟುಂಬಗಳು ಸ್ವಂತ ಜಾಗದಲ್ಲಿ ಮನೆ ನಿರ್ಮಿಸಿ ಕೊಳ್ಳಲು ಸರ್ಕಾರ ಪರಿಹಾರ ನೀಡಬೇಕು ಇತರ ಕುಟುಂಬಗಳಿಗೆ ಕೂಡಲೇ ಶಾಶ್ವತ ಸೂರು ಕಲ್ಪಿಸಬೇಕೆಂದು ಒತ್ತಾಯಿಸಿದ ಅವರು ಹಲವು ಕಡೆ ರಸ್ತೆಗಳು ಹಾಳಾಗಿದ್ದು ಎಲ್ಲವೂ ಗ್ರಾಮ ಪಂಚಾಯಿತಿಯಿಂದ ಮಾಡಲು ಸಾಧ್ಯವಾಗುತ್ತಿಲ್ಲ ಗ್ರಾಮದ ಸಮಸ್ಯೆಗಳನ್ನ ಮುಂದಿಟ್ಟು ಜಿಲ್ಲಾಧಿಕಾರಿಗಳು, ಶಾಸಕರು, ಸಂಸದರು ಹಾಗೂ ಅಧಿಕಾರಿಗಳನ್ನ ನಿಯೋಗದ ಮೂಲಕ ಭೇಟಿ ಮಾಡಿ ಗ್ರಾಮದ ಸಮಸ್ಯೆ ಬಗೆಹರಿಸಲು ಮುಂದಾಗುವುದಾಗಿ ಭರವಸೆ ನೀಡಿದರು.
ಈ ಸಂದರ್ಭ ಸ್ಥಳೀಯರಾದ ಸುನೀಲ್, ಮನು, ಲೋಕೇಶ್, ಮಾಲತಿ, ಶೋಭಾ, ಪುಷ್ಪ, ಲತಾ, ಪ್ರಮೀಳಾ,ಅನೀಶ್, ಶರತ್, ಸುಜಿತ್, ಮುರಳಿ, ಪ್ರವೀಣ್, ಅನಿಲ್ ,ವಿನು, ಅನೀಶ್, ಮಂಜು,ಸುಲೋಚನಾ, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.