ಪವಿತ್ರಾಗೆ ನಸೀಮಾ ಬಾನು ಮನೆಯಲ್ಲಿ ಸೀಮಂತ: ಮುಸ್ಲಿಮ್ ದಂಪತಿಯ ಕಾರ್ಯಕ್ಕೆ ವ್ಯಾಪಕ ಶ್ಲಾಘನೆ

Prasthutha|

ದಾವಣಗೆರೆ, ಆ.2: ಧರ್ಮಗಳ ನಡುವೆ ಅಂತರ ಕಡಿಮೆಯಾಗುತ್ತಿರುವ ಪ್ರಸ್ತುತ ಸಮಯದಲ್ಲಿ ದಾವಣಗೆರೆಯಲ್ಲಿ ಸೌಹಾರ್ದಕ್ಕೆ ಸಾಕ್ಷಿಯಾಗುವಂಥ ಸೀಮಂತವೊಂದು ನಡೆದಿದೆ. ಮುಸ್ಲಿಂ ಮನೆಯಲ್ಲಿ ಹಿಂದೂ ಯುವತಿಗೆ ಉಡಿತುಂಬುವ ಕಾರ್ಯ ಮುಸ್ಲಿಮ್ ದಂಪತಿಯಿಂದ ಮಾಡಲಾಗಿದೆ.

- Advertisement -

ಮಂಡ್ಯದ ನಿವಾಸಿ ಪವಿತ್ರಾ ಎಂಬ ಯುವತಿ ದಾವಣಗೆರೆ ಯುವಕ ಸತೀಶ್ ಅರವಿಂದ್ ಅವರನ್ನು ಮದುವೆಯಾಗಿದ್ದರು. ಪವಿತ್ರಾ ಈಗ ತುಂಬು ಗರ್ಭಿಣಿ. ಅವರನ್ನು ನಸೀಮಾ ಬಾನು ತಮ್ಮ ಮನೆಗೆ ಕರೆಸಿ ಸೀಮಂತ ಮಾಡಿ ಕಳುಹಿಸಿಕೊಡುವ ಮೂಲಕ ಸೌಹಾರ್ದಕ್ಕೆ ಸಾಕ್ಷಿಯಾದರು. ನಸೀಮಾಬಾನು ಅವರ ಪತಿ, ವಕೀಲ ಅನೀಸ್ ಪಾಷ ಇದಕ್ಕೆ ಬೆಂಬಲವಾಗಿ ನಿಂತರು.
ಹೆಣ್ಣಿಗೆ ಇಂಥ ಸಮಯದಲ್ಲಿಯೇ ಎಲ್ಲರೂ ಜೊತೆಯಲ್ಲಿ ಇರಬೇಕು. ಪ್ರೀತಿ ತೋರಬೇಕು ಎಂದು ಅನಿಸುವುದು. ನನಗೂ ಈಗ ಅದೇ ರೀತಿ ಭಾವನೆಗಳಿವೆ. ನಸೀಮಾ-ಅನೀಸ್ ದಂಪತಿ ನನ್ನನ್ನು ನನ್ನ ಮನೆಮಂದಿಗಿಂತ ಹೆಚ್ಚು ಪ್ರೀತಿಯಿಂದ ಕರೆಸಿ ಸೀಮಂತ ಮಾಡಿರುವುದು ಖುಷಿ ನೀಡಿದೆ’ ಎಂದು ಪವಿತ್ರಾ ಸಂತೋಷ ವ್ಯಕ್ತಪಡಿಸಿದರು.

ಇದು ನಮ್ಮೊಳಗಿನ ಪ್ರೀತಿ. ಜೊತೆಗೆ ಭಾವೈಕ್ಯದ ಸಂಕೇತ. ಧರ್ಮ-ಧರ್ಮಗಳ ನಡುವೆ ದ್ವೇಷ ಕಡಿಮೆಯಾಗಬೇಕಿದ್ದರೆ ಧರ್ಮ ಮೀರಿ ಬಾಂಧವ್ಯ ಬೆಳೆಯಬೇಕು ಎಂಬುದು ಅನೀಸ್ ಪಾಷ ಅವರ ಅನಿಸಿಕೆ.

- Advertisement -

ಪವಿತ್ರಾ ಅವರು ಕಾಲೇಜು ದಿನಗಳಲ್ಲಿ ವಿದ್ಯಾರ್ಥಿ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದರು. ಬಳಿಕ ಜನಶಕ್ತಿ, ಮಹಿಳಾ ಮುನ್ನಡೆ ಮುಂತಾದ ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ವಿದ್ಯಾರ್ಥಿ ಸಂಘಟನೆ, ಕೋಮು ಸೌಹಾರ್ದ ವೇದಿಕೆ, ಜನಶಕ್ತಿಯಲ್ಲಿ ತೊಡಗಿಸಿಕೊಂಡಿರುವ ಸತೀಶ್ ಅರವಿಂದ್ ಅವರನ್ನು ಪ್ರೀತಿಸಿ ಎರಡು ವರ್ಷಗಳ ಹಿಂದೆ ಮದುವೆಯಾಗಿದ್ದರು.

Join Whatsapp