ಕೋವಿಡ್ ತಡೆಯುವುದನ್ನು ಬಿಟ್ಟು ಮಂತ್ರಿಮಂಡಲ ರಚನೆಗೆ ಸಿಎಂ ಓಡಾಡುತ್ತಿದ್ದಾರೆ: ಸಿದ್ದರಾಮಯ್ಯ ಟೀಕೆ

Prasthutha|

ಕಾರವಾರ, ಆ.2: ಕೊರೊನಾ ಮೂರನೆ ಅಲೆ ನಮ್ಮ ರಾಜ್ಯಕ್ಕೆ ಬರದಂತೆ ತಡೆಯುವುದು ರಾಜ್ಯ ಸರ್ಕಾರದ ಪ್ರಾಥಮಿಕ ಕೆಲಸವಾಗಬೇಕು. ಅಕ್ಕ ಪಕ್ಕದ ರಾಜ್ಯಗಳಾದ ಮಹಾರಾಷ್ಟ್ರ ಹಾಗೂ ಕೇರಳದಲ್ಲಿ ಮೂರನೆ ಅಲೆ ಈಗಾಗಲೇ ಬಂದಿದ್ದು ಸೋಂಕು ಪ್ರಮಾಣ ಹೆಚ್ಚಾಗಿದೆ. ಈ ರಾಜ್ಯಗಳಿಂದ ನಮ್ಮ ರಾಜ್ಯಕ್ಕೆ ಬರುವವರ ಪ್ರಮಾಣ ಹೆಚ್ಚಾಗಿರುತ್ತದೆ ಹಾಗಾಗಿ ರಾಜ್ಯದ ಗಡಿಗಳಲ್ಲಿ ಕಟ್ಟೆಚ್ಚರ ವಹಿಸಬೇಕು ಎಂದು ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ಕಾರವಾರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇರಳದಿಂದ ರಾಜ್ಯದ ಕರಾವಳಿ, ಚಾಮರಾಜನಗರ, ಕೊಡಗು ಜಿಲ್ಲೆಗಳಿಗೆ ಹೆಚ್ಚು ಜನ ಬರುತ್ತಾರೆ, ರಾಜ್ಯದ ಗಡಿಗಳಲ್ಲಿ ಅವರನ್ನು ಕಟ್ಟುನಿಟ್ಟಾಗಿ ತಪಾಸಣೆ ನಡೆಸಿ, ಎರಡು ಡೋಸ್ ಲಸಿಕೆ ಪಡೆಯದವರನ್ನು ಗಡಿ ಒಳಗೆ ಬಿಡಬಾರದು ಹಾಗೂ ಪರೀಕ್ಷೆ ನಡೆಸಿ ನೆಗೆಟಿವ್ ಬಂದವರನ್ನು ಮಾತ್ರ ಒಳಗೆ ಬಿಡಬೇಕು ಎಂದು ಹೇಳಿದರು.

- Advertisement -

ಈಗಾಗಲೇ ನಾವು ಸಾಕಷ್ಟು ಕಷ್ಟ ಅನುಭವಿಸಿದ್ದೇವೆ. ಸೂಕ್ತ ಆಸ್ಪತ್ರೆ, ಹಾಸಿಗೆಗಳು, ವೆಂಟಿಲೇಟರ್, ಆಕ್ಸಿಜನ್ ಇಲ್ಲದೆ ಸಾವಿರಾರು ಜನ ಸಾವಿಗೀಡಾಗಿದ್ದಾರೆ, ಇದು ಮತ್ತೆ ಮರುಕಳಿಸದಂತೆ ತಡೆಯಬೇಕು. ಇದನ್ನು ಬಿಟ್ಟು ಮುಖ್ಯಮಂತ್ರಿಗಳು ಮಂತ್ರಿಮಂಡಲ ರಚನೆಗೆ ಓಡಾಡುತ್ತಿದ್ದಾರೆ. ಒಮ್ಮೆ ದೆಹಲಿಗೆ ಹೋಗಲಿ, ಪದೇ ಪದೇ ಹೋಗುವ ಅಗತ್ಯವೇನಿದೆ? ಬಿಜೆಪಿ ಹೈಕಮಾಂಡ್ ಕೂಡ ರಾಜ್ಯದ ಸಮಸ್ಯೆಯನ್ನು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದರು.

ಬಿಜೆಪಿ ಶಾಸಕರು ಬೆಂಗಳೂರಿನಲ್ಲಿ ಠಿಕಾಣಿ ಹೂಡಿ, ಮಂತ್ರಿ ಪದವಿಗಾಗಿ ಲಾಬಿ ಮಾಡುತ್ತಿದ್ದಾರೆ. ಒಬ್ಬ ಶಾಸಕನು ತನ್ನ ಕ್ಷೇತ್ರಕ್ಕೆ ಹೋಗಿ ಕೆಲಸ ಮಾಡುತ್ತಿಲ್ಲ. ಇವರಿಗೆ ಜನರ ಜೀವಕ್ಕಿಂತ ಮಂತ್ರಿಯಾಗುವುದು ಮುಖ್ಯವಾಗಿದೆ. ಬಸವರಾಜ ಬೊಮ್ಮಾಯಿಯವರು ಈಗಷ್ಟೇ ಮುಖ್ಯಮಂತ್ರಿಗಳಾಗಿದ್ದಾರೆ. ಅವರ ಬಗ್ಗೆ ಟೀಕೆ ಮಾಡುವುದಿಲ್ಲ.‌ ಆದರೆ ರಾಜ್ಯದ ಸಮಸ್ಯೆಗಳ ಬಗ್ಗೆ ಗಮನ ಕೊಡಬೇಕು ಎಂದು ಒತ್ತಾಯಿಸುತ್ತೇನೆ ಎಂದರು.

- Advertisement -

ಲಾಕ್ ಡೌನ್ ಹೇರುವಂತ ಪರಿಸ್ಥಿತಿ ನಿರ್ಮಾಣವಾಗದಂತೆ ಸರ್ಕಾರ ನೋಡಿಕೊಳ್ಳಬೇಕು. ಕಳೆದೆರಡು ದಿನಗಳಿಂದ ಸೋಂಕಿನ ಪ್ರಮಾಣ ಎರಡು ಸಾವಿರ ಸಮೀಪದಲ್ಲಿದೆ. ಇದು ಎರಡು ಸಾವಿರದ ಗಡಿ ದಾಟಿದರೆ ಮೂರನೆ ಅಲೆ ಶುರುವಾಗಿದೆ ಎಂದರ್ಥ ಎಂದು ಸಿದ್ದರಾಮಯ್ಯ ಹೇಳಿದರು.

ರೇಣುಕಾಚಾರ್ಯ ಅವರು ತಮ್ಮ ವಿರುದ್ಧ ಮಾನಹಾನಿಯಾಗುವಂತ ವೀಡಿಯೋ ಪ್ರಸಾರ ಮಾಡದಂತೆ ಕೋರ್ಟ್ ಮೊರೆ ಹೋಗಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆ ಉತ್ತರಿಸಿದ ಅವರು, ತಮ್ಮ ವೀಡಿಯೋ ಬರಬಹುದು ಎಂಬ ಅನುಮಾನ ಸುಮ್ಮಸುಮ್ಮನೆ ರೇಣುಕಾಚಾರ್ಯ ಅವರಿಗೆ ಏಕೆ ಬರುತ್ತದೆ? ಎಂದು ಪ್ರಶ್ನಿಸಿದರು.

ಯಾವುದೋ ಕಾನೂನು ಬಾಹಿರ, ಅನೈತಿಕ ಕೃತ್ಯ ನಡೆಸಿ, ಸಿಕ್ಕಿಬಿದ್ದಿರಬಹುದು. ಎಷ್ಟೊಂದು ಮಂದಿ ರಾಜಕಾರಣಿಗಳಿದ್ದಾರೆ ಅವರನ್ನೆಲ್ಲಾ ಬಿಟ್ಟು ರೇಣುಕಾಚಾರ್ಯ, ಸದಾನಂದ ಗೌಡರದ್ದೇ ಏಕೆ ವೀಡಿಯೋ ಮಾಡ್ತಾರೆ? ಕಳ್ಳನ ಮನಸ್ಸು ಹುಳ್ ಹುಳ್ಳಗೆ ಎನ್ನುವಂತೆ ಇವರ ಕಥೆಯಾಗಿದೆ ಎಂದು ವ್ಯಂಗ್ಯವಾಡಿದರು.

ಭಾರತೀಯ ಜನತಾ ಪಕ್ಷದವರು ತಾವು ಮಹಾನ್ ಸುಸಂಸ್ಕೃತರು ಎಂದು ಹೇಳಿಕೊಳ್ಳುತ್ತಾರೆ. ನಮ್ಮಂತ ಸಂಸ್ಕಾರ, ನಡತೆ ಯಾರಿಗೂ ಇಲ್ಲ ಎನ್ನುವಂತೆ ವರ್ತಿಸುತ್ತಾರೆ. ವಾಸ್ತವದಲ್ಲಿ ಇವರಷ್ಟು ಭಂಡರು ಯಾರೂ ಇಲ್ಲ. ಜೆಡಿಎಸ್ ಈಗ ಜಾತ್ಯತೀತ ಪಕ್ಷವಾಗಿ ಉಳಿದಿಲ್ಲ, ಜಾತ್ಯತೀತ ಸಿದ್ದಾಂತ ಬಿಟ್ಟು ತುಂಬಾ ಸಮಯವಾಗಿದೆ. ಹಿಂದೆ ನಾವಿದ್ದ ಕಾಲದಲ್ಲಿ ಇದ್ದ ಜೆಡಿಎಸ್ ಪಕ್ಷ ಈಗಿಲ್ಲ. ಬಿಜೆಪಿ ಭ್ರಷ್ಟರ ಪಕ್ಷ, ಅವರ ಸರ್ಕಾರ ಭ್ರಷ್ಟ ಸರ್ಕಾರ. ಯಡಿಯೂರಪ್ಪ ಭ್ರಷ್ಟರಲ್ಲದೆ ಹೋಗಿದ್ದರೆ ಮುಖ್ಯಮಂತ್ರಿ ಹುದ್ದೆಯಿಂದ ಏಕೆ ಕೆಳಗಿಳಿಸುತ್ತಿದ್ದರೆ? ವಯಸ್ಸಾಗಿದ್ದು ಒಂದೇ ಕಾರಣವಾಗಿದ್ದರೆ ಎಪ್ಪತ್ತೈದು ದಾಟಿ ಎರಡು ವರ್ಷ ಕಳೆದಿಲ್ಲವೆ? ಇಷ್ಟು ಕಾಲ ಏಕೆ ಸುಮ್ಮನಿದ್ದರು? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

Join Whatsapp