ಶಿಕ್ಷಣ, ಉದ್ಯೋಗದಲ್ಲಿ ಮುಸ್ಲಿಮರಿಗೆ ಶೇ 5ರಷ್ಟು ಮೀಸಲಾತಿ ನೀಡಿ: ಸರ್ಕಾರಕ್ಕೆ ಪತ್ರ ಬರೆದ ಕಾಂಗ್ರೆಸ್ ಕಾರ್ಯಾಧ್ಯಕ್ಷ

Prasthutha|

ಮುಂಬೈ: ಮುಸ್ಲಿಮರಿಗೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಶೇ.5ರಷ್ಟು ಮೀಸಲಾತಿ ಅನುಷ್ಠಾನಗೊಳಿಸಬೇಕು ಎಂದು ಮಹಾರಾಷ್ಟ್ರ ಕಾಂಗ್ರೆಸ್’ನ ಕಾರ್ಯಾಧ್ಯಕ್ಷ ನಸೀಮ್ ಖಾನ್, ಮಹಾ ವಿಕಾಸ್ ಅಗದಿ (MVS) ಸರ್ಕಾರವನ್ನು ಒತ್ತಾಯಿಸಿದ್ದಾರೆ. ನಸೀಮ್ ಖಾನ್, ಈ ಹಿಂದಿನ ಕಾಂಗ್ರೆಸ್-ಎನ್’ಸಿಪಿ ಸರ್ಕಾರದಲ್ಲಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು.

- Advertisement -

ಮಹಾರಾಷ್ಟ್ರದ ಕಂದಾಯ ಸಚಿವ ಬಾಳಾಸಾಹೇಬ್ ತೋರಟ್ ಹಾಗೂ ಕಾಂಗ್ರೆಸ್ ನಾಯಕರಿಗೆ ಈ ಕುರಿತು ಪತ್ರ ಬರೆದಿರುವ ನಸೀಮ್ ಖಾನ್, ‘ಮುಸ್ಲಿಮರಿಗೆ ಮೀಸಲಾತಿ ವಿಷಯವನ್ನು ಬಾಂಬೆ ಹೈಕೋರ್ಟ್ ಎತ್ತಿಹಿಡಿದಿತ್ತು. ಆದರೆ ಈ ಹಿಂದಿನ NDA ಸರ್ಕಾರವು ಮೀಸಲಾತಿಯನ್ನು ಅನುಷ್ಠಾನಗೊಳಿಸಿರಲಿಲ್ಲ. MVS ಸರ್ಕಾರ ಅಧಿಕಾರಕ್ಕೆ ಬಂದು ಈಗಾಗಲೇ ಎರಡು ವರ್ಷಗಳು ಕಳೆದಿವೆ. ಆದರೆ ಮುಸಲ್ಮಾನರ ಮೀಸಲಾತಿ ವಿಷಯದಲ್ಲಿ ಯಾವುದೇ ತೀರ್ಮಾನವನ್ನು ಇದುವರೆಗೆ ತೆಗೆದುಕೊಂಡಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಪಸಂಖ್ಯಾತರ ಅಭಿವೃದ್ಧಿಗೆ ಬಿಡುಗಡೆಯಾಗುತ್ತಿರುವ ಅನುದಾನಗಳು ಅರ್ಹ ಫಲಾನುಭವಿಗಳಿಗೆ ತಲುಪಿಸಲು ಸರ್ಕಾರದ ಭಾಗವಾಗಿರುವ ಕಾಂಗ್ರೆಸ್ ಮುತುವರ್ಜಿವಹಿಸಬೇಕಾಗಿದೆ ಎಂದು ನಸೀಮ್ ಖಾನ್ ಪತ್ರದಲ್ಲಿ ಆಗ್ರಹಿಸಿದ್ದಾರೆ.

ಕಾಂಗ್ರೆಸ್-ಎನ್’ಸಿಪಿ ಸರ್ಕಾರದ ಅವಧಿಯಲ್ಲಿ ಸರ್ಕಾರಿ ಶಾಲಾ ಕಾಲೇಜು ಹಾಗೂ ಉದ್ಯೋಗದಲ್ಲಿ ಮರಾಠರಿಗೆ ಶೇ.16 ಹಾಗೂ ಮುಸಲ್ಮಾನರಿಗೆ ಶೇ.5ರಷ್ಟು ಮೀಸಲಾತಿ ನೀಡುವ ಕುರಿತು ಸುತ್ತೋಲೆ ಹೊರಡಿಸಿತ್ತು.  ಆದರೆ ಇದನ್ನು ಪ್ರಶ್ನಿಸಿ ನ್ಯಾಯಾಲಯದಲ್ಲಿ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆ ನಡೆಸಿದ್ದ  ಹೈಕೋರ್ಟ್, ಮರಾಠರಿಗೆ ನೀಡಿದ್ದ ಮೀಸಲಾತಿಯನ್ನು ರದ್ದುಗೊಳಿಸಿ, ಮುಸ್ಲಿಮರಿಗೆ ಶಿಕ್ಷಣದಲ್ಲಿ ನೀಡಿದ್ದ ಮೀಸಲಾತಿಯನ್ನು ಎತ್ತಿಹಿಡಿದಿತ್ತು. ಆದರೆ 2014ರಲ್ಲಿ ಅಧಿಕಾರಕ್ಕ ಬಂದ NDA ಸರ್ಕಾರವು ಧರ್ಮಾಧರಿತ ಮೀಸಲಾತಿಗೆ ವಿರೋಧ ವ್ಯಕ್ತಪಡಿಸಿ ಇದನ್ನು ತಡೆಹಿಡಿದಿತ್ತು.

Join Whatsapp