ಭಾರತ ಮತ್ತುಆಸ್ಟ್ರೇಲಿಯಾ ತಂಡಗಳ ನಡುವಿನ ಟಿ20 ಸರಣಿಯ ಎರಡನೇ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದೆ. ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಪಂದ್ಯ ಆಯೋಜನೆಯಾಗಿದೆ. ಆದರೆ ಸಂಜೆ 6.30ಕ್ಕೆ ನಡೆಬೇಕಾಗಿದ್ದ ಟಾಸ್, ಮಳೆಯಿಂದಾಗಿ ಮುಂದೂಡಲ್ಪಟ್ಟಿದೆ.
ಸಂಜೆ 7ಗಂಟೆಗೆ ಪಂದ್ಯ ಆರಂಭವಾಗಬೇಕಿತ್ತು. ಆದರೆ ಅಧಿಕಾರಿಗಳು ಎರಡೆರಡು ಬಾರಿ ಮೈದಾನವನ್ನು ಪರೀಕ್ಷಿಸಿದ ಬಳಿಕ ಸಮಯವನ್ನು ಮುಂದೂಡಿದ್ದಾರೆ. ಮಳೆ ನಿಂತಿದ್ದರೂ ಸಹ ಮೈದಾನ ಪೂರ್ತಿಯಾಗಿ ಒದ್ದೆಯಾಗಿದ್ದು, ಪಂದ್ಯ ನಡೆಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ರಾತ್ರಿ 8 ಗಂಟೆಗೆ ಮತ್ತೊಮ್ಮೆ ಅಧಿಕಾರಿಗಳು ಮೈದಾನವನ್ನು ಪರೀಕ್ಷಿಸಲಿದ್ದಾರೆ.
ಪಂದ್ಯ ಆರಂಭವಾದರೂ ಸಹ ಓವರ್ಗಳನ್ನು ಕಡಿತಗೊಳಿಸುವುದು ನಿಶ್ಚಿತವಾಗಿದೆ. ವಿದರ್ಭ ಕ್ರಿಕೆಟ್ ಸ್ಟೇಡಿಯಂನ ಪಿಚ್ ಬೌಲರ್ಗಳಿಗೆ ನೆರವು ನೀಡುತ್ತದೆ. ಆದರೆ ಮೊಹಾಲಿಯಲ್ಲಿ ನಡೆದಿದ್ದ ಮೊದಲ ಪಂದ್ಯದಲ್ಲಿ ಅಕ್ಷರ್ ಪಟೇಲ್ ಹೊರತು ಪಡಿಸಿ, ಭಾರತ ಉಳಿದೆಲ್ಲಾ ಬೌಲರ್ಗಳು, ಆಸೀಸ್ ಬ್ಯಾಟ್ಸ್ಮನ್ಗಳಿಂದ ಭರ್ಜರಿಯಾಗಿ ದಂಡಿಸಿಕೊಂಡಿದ್ದರು. ಅದರಲ್ಲೂ ಪ್ರಮುಖ ಬೌಲರ್ಗಳಾದ ಭುವನೇಶ್ವರ್ ಕುಮಾರ್ ಮತ್ತು ಹರ್ಷಲ್ ಪಟೇಲ್ 8 ಓವರ್ಗಳಲ್ಲಿ ಬರೋಬ್ಬರಿ 101 ರನ್ ಬಿಟ್ಟುಕೊಟ್ಟಿದ್ದರು.
ಕಳೆದ ಕೆಲ ದಿನಗಳಿಂದ ನಾಗ್ಪುರದಲ್ಲಿ ಮಳೆಯಾಗುತ್ತಿದೆ. ಹೀಗಾಗಿ ಗುರುವಾರದಂದು ಎರಡೂ ತಂಡಗಳ ಅಭ್ಯಾಸವನ್ನು ರದ್ದುಗೊಳಿಸಲಾಗಿತ್ತು.
ಮೊದಲ ಪಂದ್ಯದಲ್ಲಿ208 ರನ್ಗಳ ಬೃಹತ್ ಮೊತ್ತವನ್ನು ಪೇರಿಸಿದ ಹೊರತಾಗಿಯೂ ಪಂದ್ಯವನ್ನು ಗೆಲ್ಲಲು ರೋಹಿತ್ ಬಳಗಕ್ಕೆ ಸಾಧ್ಯವಾಗಿರಲಿಲ್ಲ.