ಆಸ್ತಿಗಾಗಿ ಶವದ ಹೆಬ್ಬೆಟ್ಟು ಒತ್ತಿಸಿಕೊಂಡ ಸಂಬಂಧಿಕರು !

Prasthutha|

ಮೈಸೂರು; ಹೆಣ್ಣು-ಹೊನ್ನು-ಮಣ್ಣಿಗಾಗಿ ಮನುಷ್ಯ ಏನೆಲ್ಲಾ ಮಾಡಬಾರದ್ದನ್ನು ಮಾಡುತ್ತಾನೆ ಎಂಬುದಕ್ಕೆ ಮೈಸೂರಿನಲ್ಲಿ ಭಾನುವಾರ ನಡೆದ ಘಟನೆಯೊಂದು ಸಾಕ್ಷಿಯಾಗಿದೆ. ಸತ್ತು ಮಲಗಿರುವ ವೃದ್ಧೆಯಿಂದ ಆಸ್ತಿಗಾಗಿ ಖಾಲಿ ಪತ್ರಕ್ಕೆ ಹೆಬ್ಬೆಟ್ಟು ಒತ್ತಿಸಿಕೊಳ್ಳುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

- Advertisement -

ಮೈಸೂರಿನ ಶ್ರೀರಾಂಪುರದ ನಿವಾಸಿ ವೃದ್ಧೆ ಜಯಮ್ಮ (73) ವಯೋಸಹಜ ಕಾರಣಗಳಿಂದ ಕೆಲ ದಿನಗಳ ಹಿಂದೆ ಸಾವನ್ನಪ್ಪಿದ್ದರು. ಬದುಕಿದ್ದಾಗ ತಿರುಗಿನೋಡದ ಕುಟುಂಬಸ್ಥರು ಜಯಮ್ಮ ಸತ್ತ ಸುದ್ದಿ ಕೇಳಿ ಓಡೋಡಿ ಬಂದಿದ್ದಾರೆ. ಮೃತದೇಹದ ಅಂತಿಮ ದರ್ಶನ ಪಡೆಯಲು ಅಲ್ಲ. ಬದಲಾಗಿ ವೃದ್ಧೆ ಜಯಮ್ಮಳ ಹೆಸರಿನಲ್ಲಿದ್ದ ಆಸ್ತಿ ಲಪಟಾಯಿಸಲು !

ಜಯಮ್ಮ ಸತ್ತಾಗ ಆಸ್ತಿಯಲ್ಲಿ ಪಾಲು ಪಡೆಯಲು ಕಿತ್ತಾಟ ನಡೆದಿದೆ. ಜಯಮ್ಮ ಸತ್ತು ಮಲಗಿದಾಗ ಅಕ್ಕನ ಮಗ ಸೇರಿದಂತೆ ಸಂಬಂಧಿಕರು ಆಸ್ತಿಗಾಗಿ ಖಾಲಿ ಬಾಂಡ್ ಪೇಪರ್ ಮೇಲೆ ಶವದ ಹೆಬ್ಬೆಟ್ಟು ಒತ್ತಿಸಿಕೊಂಡಿದ್ದಾರೆ.

- Advertisement -

ಜಯಮ್ಮನ ಕುಟುಂಬಕ್ಕೆ ಪಿರ್ತಾರ್ಜಿತವಾಗಿ 14 ಎಕರೆ ಆಸ್ತಿ ಇತ್ತು. ಮದುವೆಯಾದ ಹೊಸದರಲ್ಲೇ ಪತಿಯಿಂದ ದೂರವಾಗಿದ್ದ ಜಯಮ್ಮ ಆಸ್ತಿಯಲ್ಲಿ ಪಾಲು ಪಡೆಯಲು ಪತಿಯೂ ಬದುಕಿಲ್ಲ, ಮಕ್ಕಳೂ ಇಲ್ಲ. ಜಯಮ್ಮ‌ನ ಪಾಲಿನ ಪಿತ್ರಾರ್ಜಿತ ಆಸ್ತಿಗಾಗಿ ತವರು ಮನೆಯಲ್ಲಿ ಉಂಟಾದ ಗೊಂದಲ ಈಗ ಬಯಲಿಗೆ ಬಂದಿದೆ. ಜಯಮ್ಮನಿಗೆ ಇಬ್ಬರು ಅಕ್ಕಂದಿರು, ಒಬ್ಬ ತಮ್ಮ ಇದ್ದಾರೆ. ಖಾಲಿ ಪೇಪರ್ ಮೇಲೆ ಹೆಬ್ಬೆಟ್ಟು ಒತ್ತಿಸಿಕೊಳ್ಳುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

Join Whatsapp