ಸರಳ, ಸಾಂಪ್ರದಾಯಿಕವಾಗಿ ನಾಡ ಹಬ್ಬ ಮೈಸೂರು ದಸರಾ ಆಚರಣೆ: ಬೊಮ್ಮಾಯಿ

Prasthutha|

ಬೆಂಗಳೂರು: ಮೈಸೂರು ದಸರಾ ಕೇವಲ ಕರ್ನಾಟಕಕ್ಕೆ ಸೀಮಿತವಾಗಿಲ್ಲ, ಇದೊಂದು ಜಗತ್ ಪ್ರಸಿದ್ಧ ಆಚರಣೆಯಾಗಿದ್ದು, ಪ್ರತಿ ವರ್ಷ ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸುತ್ತಾ ಬರುತ್ತಿದ್ದು, ಕೋವಿಡ್ ಹಿನ್ನೆಲೆಯಲ್ಲಿ ಈ ಬಾರಿ ಕಳೆದ ಬಾರಿಗಿಂತ ವಿಶೇಷವಾಗಿ ಸರಳ ಹಾಗೂ ಸಾಂಪ್ರದಾಯಿಕವಾಗಿ ಮೈಸೂರು ದಸರಾವನ್ನು ಆಚರಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಎಸ್ ಬೊಮ್ಮಾಯಿ ಅವರು ಹೇಳಿದರು.

- Advertisement -

ಇಂದು ವಿಧಾನಸೌಧದಲ್ಲಿ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ “ನಾಡ ಹಬ್ಬ ಮೈಸೂರು ದಸರಾ -2021”ರ ಆಚರಣೆ ಕುರಿತಂತೆ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, ರೈತರು ದುಡಿಮೆಯ ನಂತರ ಆಚರಿಸುವ ದಸರಾ ಹಬ್ಬ ಅತ್ಯಂತ ಖುಷಿಯ ಹಾಗೂ ಮಹತ್ವದ ನಾಡಹಬ್ಬವಾಗಿದೆ.

ಕೋವಿಡ್ ಹಿನ್ನಲೆಯಲ್ಲಿ ಜನರು ಹಾಗೂ ಸರ್ಕಾರಗಳು ಸಹ ಆರ್ಥಿಕ ಸಮಸ್ಯೆಯಲ್ಲಿ ಸಿಲುಕಿವೆ, ಇಂತಹ ಸಮಯದಲ್ಲಿ ಸಹ ಹಬ್ಬವನ್ನು ಆಚರಿಸಲು ಉದ್ದೇಶಿಸಲಾಗಿದ್ದು, ಜವಾಬ್ಧಾರಿಯೊಂದಿಗೆ ಪಾರಂಪರಿಕಾ ದಸರಾ ಆಚರಣೆಯನ್ನು ಸರಳವಾಗಿ ಆಚರಣೆ ಮಾಡಲಾಗುವುದು. ಅದರಲ್ಲಿ ಮುಖ್ಯವಾಗಿ ಚಾಮುಂಡಿ ಬೆಟ್ಟ ಹಾಗೂ ಅರಮನೆ ಆವರಣದಲ್ಲಿ ಅರ್ಥಪೂರ್ಣವಾಗಿ ಆಚರಿಸಬೇಕಾಗಿದೆ ಎಂದು ತಿಳಿಸಿದರು.

- Advertisement -

ಈಗಾಗಲೇ ಕೋವಿಡ್ ಮೂರನೆ ಅಲೆಯ ಬಗ್ಗೆ ತಜ್ಞರು ವರದಿಗಳನ್ನು ಸಲ್ಲಿಸಿದ್ದು, ಈ ಬಗ್ಗೆ ಎಚ್ಚರಿಕೆ ವಹಿಸಲಾಗುವುದು. ತಜ್ಞರು ಕೋವಿಡ್ 3ನೇ ಅಕ್ಟೋಬರ್ ಕೊನೆಗೆ ಬರುತ್ತದೆ ಎಂದು ತಿಳಿಸಿದ್ದಾರೆ. ಸೆಪ್ಟೆಂಬರ್ 20ರ ನಂತರ ಕೋವಿಡ್ ಸ್ಥಿತಿಗತಿ ನೋಡಿಕೊಂಡು ದಸರಾವನ್ನು ಮತ್ತಷ್ಟು ಅರ್ಥಪೂರ್ಣವಾಗಿ ಆಚರಿಸುವ ಬಗ್ಗೆ ತೀರ್ಮಾನ ತೆಗೆದುಕೊಳ್ಳೋಣ. ತಜ್ಞರು ನೀಡಿರುವ ಸಲಹೆ ಸೂಚನೆಗಳನ್ನು ಪಾಲಿಸುವುದರೊಂದಿಗೆ ಕಳೆದ ಬಾರಿಯಂತೆ ಈ ವರ್ಷವೂ ಮೈಸೂರು ದಸರಾವನ್ನು ಆಚರಿಸಲಾಗುವುದು ಎಂದು ತಿಳಿಸಿದರು.

ಈ ಬಾರಿಯ ದಸರಾ ಆಚರಣೆಗಾಗಿ 6 ಕೋಟಿ ಬಿಡುಗಡೆ ಮಾಡಲಾಗುವುದು, ದೀಪಾಂಲಕಾರವನ್ನು ಪ್ರತ್ಯೇಕವಾಗಿ ಮಾಡಲಾಗುವುದು. ಮೈಸೂರಿನ ರಸ್ತೆಗಳ ದುರಸ್ತಿಗಾಗಿ ಪ್ರತ್ಯೇಕ ಬೇಡಿಕೆಯನ್ನು ಇಲಾಖಾ ಮೂಲಕ ಸಲ್ಲಿಸಲು ಸೂಚಿಸಿದರು.

ಪ್ರವಾಸೋದ್ಯಮ ಅಭಿವೃದ್ಧಿಗಾಗಿ ರಾಜ್ಯವನ್ನು ಗಮನದಲ್ಲಿಟ್ಟುಕೊಂಡು ಟೂರಿಸಂ ಸರ್ಕೀಟ್ ರೂಪಿಸುವ ಕುರಿತು ಶೀಘ್ರದಲ್ಲಿ ಪ್ರತ್ಯೇಕ ಸಭೆಯನ್ನು ಹಮ್ಮಿಕೊಳ್ಳೋಣ, ಕೋವಿಡ್ ಹಿನ್ನಲೆಯಲ್ಲಿ ಕುಸಿದಿರುವ ಪ್ರವಾಸೋದ್ಯಮವ ಚೇತರಿಸಿಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಇದರಲ್ಲಿ ಮೈಸೂರು ಪ್ರವಾಸೋದ್ಯಮ ಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುವುದು ಎಂದು ಮುಖ್ಯಮಂತ್ರಿಗಳು ಸಭೆಯಲ್ಲಿ ಭರವಸೆ ನೀಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲ್ ಕುಮಾರ್ ಅವರು ಮಾತನಾಡಿ ಮುಖ್ಯಮಂತ್ರಿಗಳ ನಿರ್ದೇಶನದಂತೆ ಸರಳ ದಸರಾವನ್ನು ಆಚರಿಸಲು ನಿರ್ಧರಿಸಿದ್ದು, ಸರಳ ದಸರಾವನ್ನು ನಮ್ಮ ಇತಿಮಿತಿಯೊಳಗೆ ಆಚರಿಸಲು ಅಗತ್ಯವಿರುವ ಕ್ರಮಕೈಗೊಳ್ಳಲಾಗುವುದು, ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ರಾಜ್ಯದ ಕಲಾವಿದರಿಗೆ ಅವಕಾಶ ನೀಡಲಾಗುವುದು ಎಂದು ಹೇಳಿದರು.

ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ಮಾತನಾಡಿ ಈ ಹಿಂದಿನ ದಸರಾ ಕಾರ್ಯಕ್ರಮಗಳ ಪೆಂಡಿಂಗ್ ಬಿಲ್ಲುಗಳಿಗೆ ಹಣ ಬಿಡುಗಡೆ ಮಾಡಿ ಸಮಸ್ಯೆ ಬಗೆಹರಿಸಿರುವ ಮುಖ್ಯಮಂತ್ರಿಗಳಿಗೆ ಧನ್ಯವಾದಗಳನ್ನು ತಿಳಿಸಿದ ಸಚಿವರು ಯಾವುದೇ ಕಾರಣಕ್ಕೂ ದಸರಾ ಆಚರಣೆಯನ್ನು ನಿಲ್ಲಿಸಲು ಸಾಧ್ಯವಿಲ್ಲ, ಕಳೆದ ಭಾರಿಯಂತೆ ಸರಳ ಸಾಂಸ್ಕೃತಿಕ ದಸರಾವನ್ನು ಆಚರಿಸಲಾಗುವುದು, ಕೋವಿಡ್ ಹಿನ್ನಲೆಯಲ್ಲಿ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳ ಮೂಲಕ ಆಚರಿಸಬೇಕಾಗಿದೆ. ಯಾವುದೇ ಕಾರಣಕ್ಕೂ ಗುಂಪು ಸೇರುವುದಕ್ಕೆ ಆಸ್ಪದ ನೀಡಬಾರದು, ದೀಪಂಲಕಾರ ಅತ್ಯಂತ ಮುಖ್ಯ ಆಕರ್ಷಣೆಯಾಗಿದ್ದು ಅದೊಂದು ದಸರೆಯ ಕಳೆ, ಯುವ ದಸರಾ ಸೇರಿದಂತೆ ಇತರೆ ಕಾರ್ಯಕ್ರಮಗಳ ಈ ಸಂದರ್ಭದಲ್ಲಿ ಬೇಡ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಪ್ರವಾಸೋದ್ಯಮ ಸಚಿವ ಆನಂದ ಸಿಂಗ್ ಅವರು ಮಾತನಾಡಿ ಜಗತ್ ಪ್ರಸಿದ್ಧ ಮೈಸೂರು ದಸರಾ ಎಲ್ಲಿಂದ ಆರಂಭವಾಯ್ತು ಎನ್ನುವ ಮೂಲವನ್ನು ಮರೆಯುತ್ತಿದ್ದೇವೆ, ವಿಜಯನಗರದ ಸಾಮ್ರಾಜ್ಯ ಹಂಪಿಯಲ್ಲಿ ಆರಂಭವಾದ ದಸರಾ ಕಾಲನಂತರದಲ್ಲಿ ಮೈಸೂರಿಗೆ ಶಿಫ್ಟ್ ಆಯ್ತು, ಹಾಗಾಗಿ ಹಂಪಿ ಉತ್ಸವಕ್ಕೆ ಸಹ ಇದೇ ರೀತಿ ಮೈಸೂರಿನ ದಸರಾ ರೀತಿ ಪ್ರಾಮುಖ್ಯತೆ ನೀಡಿ ಎಂದು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದರು.

ಸಭೆಯಲ್ಲಿ ಸಚಿವರುಗಳಾದ ಬೈರತಿ ಬಸವರಾಜ, ಸಂಸದರುಗಳಾದ ಸುಮಲತಾ ಅಂಬರೀಶ್, ಪ್ರತಾಪ್ ಸಿಂಹ ಸೇರಿದಂತೆ ಮೈಸೂರು, ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಗಳ ಅನೇಕ ಶಾಸಕರುಗಳು ಮತ್ತು ಮುಖ್ಯ ಕಾರ್ಯದರ್ಶಿಗಳಾದ ಪಿ.ರವಿಕುಮಾರ್ ಮೂರು ಜಿಲ್ಲೆಗಳ ಜಿಲ್ಲಾಧಿಕಾರಿಗಳು ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Join Whatsapp