ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸುವ ಪ್ರತಿಯೊಬ್ಬ ಕ್ರೀಡಾಪಟುವೂ ಚಾಂಪಿಯನ್ : ರಾಜ್ಯಪಾಲ ಗೆಹ್ಲೂಟ್

Prasthutha|

ಬೆಂಗಳೂರು: ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸುವ ಪ್ರತಿಯೊಬ್ಬ ಕ್ರೀಡಾಪಟುವೂ ಚಾಂಪಿಯನ್ ಎಂದು ರಾಜ್ಯಪಾಲ ಥಾವರ್‍ಚಂದ್ ಗೆಹ್ಲೂಟ್ ಪ್ರಶಂಸೆ ವ್ಯಕ್ತಪಡಿಸಿದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ರಾಭವನದಲ್ಲಿ ಆಯೋಜಿಸಲಾಗಿದ್ದ ‘ಟೋಕಿಯೋ ಒಲಂಪಿಕ್ಸ್-2020 ರಲ್ಲಿ ಭಾಗವಹಿಸಿದ್ದ ರಾಜ್ಯದ ಕ್ರೀಡಾಪಟುಗಳಿಗೆ ಪ್ರೋತ್ಸಾಹಧನ ವಿತರಣಾ ಸಮಾರಂಭ’ದಲ್ಲಿ ಅವರು ಮಾತನಾಡಿದ ರಾಜ್ಯಪಾಲರು, ಭಾರತದ ಕ್ರೀಡಾಪಟುಗಳು ಟೋಕಿಯೋ ಒಲಂಪಿಕ್ಸ್‍ನಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ. ಇದೇ ಮೊದಲ ಬಾರಿಗೆ 125 ಆಟಗಾರರ ಅತಿ ದೊಡ್ಡ ತಂಡವನ್ನು ಒಲಂಪಿಕ್ಸ್‍ಗೆ ಕಳುಹಿಸಲಾಗಿದೆ. ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಆಟಗಾರರು 7 ಪದಕಗಳನ್ನು ಗೆದ್ದಿದ್ದಾರೆ. ಇನ್ನು ಕೆಲವರು ಕಡಿಮೆ ಅಂತರದಿಂದ ಪದಕಗಳಿಂದ ವಂಚಿತರಾಗಿದ್ದಾರೆ ಎಂದರು.

- Advertisement -

ಆಟಗಾರರು ಅದ್ಭುತ ಪ್ರದರ್ಶನಗಳನ್ನು ನೀಡುವ ಮೂಲಕ ಅನೇಕ ಹೊಸ ದಾಖಲೆಗಳನ್ನು ಬರೆಯುವ ಮೂಲಕ ದೇಶಕ್ಕೆ ಹೆಮ್ಮೆ ತಂದಿದ್ದಾರೆ. ಭಾರತೀಯ ಆಟಗಾರರ ಈ ಸಾಧನೆ ಶ್ಲಾಘನೀಯ ಮತ್ತು ಯುವ ಆಟಗಾರರಿಗೆ ಸ್ಫೂರ್ತಿದಾಯಕವಾಗಲಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

1900ರಲ್ಲಿ ಮೊದಲ ಬಾರಿಗೆ ಭಾರತವು ಒಲಂಪಿಕ್ಸ್‍ನಲ್ಲಿ ಭಾಗವಹಿಸಿತು. ಒಲಂಪಿಕ್ಸ್-2020ರ ಆರಂಭದವರೆವಿಗೂ ಭಾರತವು ಒಟ್ಟು 28 ಪದಕಗಳನ್ನು ಗೆದ್ದಿದೆ. 1928ರಿಂದ 1980ರವರೆವಿಗೂ ಭಾರತೀಯ ರಾಷ್ಟ್ರೀಯ ಹಾಕಿ ತಂಡವು ಪ್ರಾಬಲ್ಯವನ್ನು ಸಾಧಿಸಿತ್ತು. 2012 ರಲ್ಲಿ 83 ಸದಸ್ಯರ ಭಾರತೀಯ ತಂಡವು ಗರಿಷ್ಟ 6 ಪದಕಗಳಳನ್ನು ಗೆದ್ದಿತ್ತು. 2012ರಿಂದೀಚೆಗೆ ಅಂದರೆ ಪದಕಗಳನ್ನು ಗೆಲ್ಲುತ್ತಾ ಬಂದಿದ್ದು, 2021ರಲ್ಲಿ 7 ಪದಕಗಳನ್ನು ಗೆಲ್ಲುವ ಮೂಲಕ ಭಾರತದ ಆಟಗಾರರು ಮತ್ತೊಂದು ದಾಖಲೆಯನ್ನು ಬರೆದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

- Advertisement -

ನೀರಜ್ ಚೋಪ್ಡಾ ಅವರು ಜಾವೆಲಿನ್ ಎಸೆತದಲ್ಲಿ ಚಿನ್ನದ ಪದಕ, ಮೀರಾಬಾಯಿ ಚಾನು ವೇಟ್ ಲಿಪ್ಟಿಂಗ್‍ನ 49 ಕೆಜಿ ವಿಭಾಗದಲ್ಲಿ 202 ಕೆಜಿ ಭಾರ ಎತ್ತುವ ಮೂಲಕ ಬೆಳ್ಳಿ ಪದಕ, ಕುಸ್ತಿಪಟು ರವಿ ದಹಿಯಾ 57 ಕೆಜಿ ತೂಕ ವಿಭಾಗದಲ್ಲಿ ಬೆಳ್ಳಿ ಪದಕ, ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧು ಕಂಚಿನ ಪದಕ, 65 ಕೆಜಿ ತೂಕದ ಫ್ರೀಸ್ಟೈಲ್ ಕುಸ್ತಿಯಲ್ಲಿ ಬಜರಂಗ್ ಪುನಿಯಾ ಕಂಚಿನ ಪದಕ, ಲೋವ್ಲಿನಾ ಬೊರ್ಗೊಹೈನ್ ಬಾಕ್ಸಿಂಗ್‍ನಲ್ಲಿ ಕಂಚಿನ ಪದಕ ಮತ್ತು 41 ವರ್ಷಗಳ ನಂತರ ಪುರುಷರ ಹಾಕಿ ತಂಡವು ಕಂಚಿನ ಪದಕ ಗೆಲ್ಲುವ ಮೂಲಕ ಇತಿಹಾಸವನ್ನು ಬರೆದಿದ್ದಾರೆ. ಭಾರತೀಯ ಮಹಿಳಾ ಹಾಕಿ ತಂಡವು ಪ್ರಸ್ತುತ ಒಲಿಂಪಿಕ್ಸ್‍ನಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಭರವಸೆಯನ್ನು ಮೂಡಿಸಿದ್ದಾರೆ. ಮಹಿಳಾ ಹಾಕಿ ತಂಡದ ಕೋಚ್ ಅಂಕಿತಾ ಬಿ.ಎಸ್ ರವರ ಮಾರ್ಗದರ್ಶನದಿಂದಾಗಿ ಭಾರತೀಯ ಮಹಿಳಾ ಹಾಕಿ ತಂಡ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಯಿತು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರಸ್ತುತ ಟೋಕಿಯೋದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತೀಯ ಆಟಗಾರರು ಉತ್ತಮ ಪ್ರದರ್ಶನ ನೀಡುವ ಮೂಲಕ 11 ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಬಾರಿ ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತ ಹೊಸ ಇತಿಹಾಸ ನಿರ್ಮಿಸಲಿದೆ ಎಂದು ಆಶಯ ವ್ಯಕ್ತಪಡಿಸಿದರು. ಟೋಕಿಯೋ ಒಲಿಂಪಿಕ್ಸ್ 2020ರಲ್ಲಿ ಕರ್ನಾಟಕ ರಾಜ್ಯದಿಂದ ಗಾಲ್ಫ್‍ನಲ್ಲಿ ಅದಿತಿ ಅಶೋಕ್, ಈಜು ಸ್ಫರ್ಧೆಯಲ್ಲಿ ಶ್ರೀಹರಿ ನಟರಾಜನ್ ಮತ್ತು ಹಾರ್ಸ್ ರೈಡಿಂಗ್‍ನಲ್ಲಿ ಫವಾಜ್ ಮಿರ್ಜಾ ತಮ್ಮ ಅತ್ಯತ್ತಮ ಪ್ರದರ್ಶನ ನೀಡುವ ಮೂಲಕ ರಾಜ್ಯ ಮತ್ತು ದೇಶಕ್ಕೆ ಕೀರ್ತಿ ತಂದಿದ್ದಾರೆ.

ರಾಜ್ಯವು ಅತ್ಯಾಧುನಿಕ ಸಿಂಥೆಟಿಕ್ ಅಥ್ಲೆಟಿಕ್ ಟ್ರ್ಯಾಕ್‍ಗಳನ್ನು, 14 ಜಿಲ್ಲಾ ಕೇಂದ್ರ ಕ್ರೀಡಾಂಗಣಗಳು, 121 ತಾಲ್ಲೂಕು ಕ್ರೀಡಾಂಗಣಗಳು, 29 ಈಜುಕೊಳಗಳು ಮತ್ತು 44 ಒಳಾಂಗಣ ಕ್ರೀಡಾಂಗಣಗಳೊಂದಿಗೆ 14 ಸ್ಥಳಗಳಲ್ಲಿ 4 ಸಿಂಥೆಟಿಕ್ ಹಾಕಿ ಟರ್ಫ್ ಕೋರ್ಟ್‍ಗಳನ್ನು ಹೊಂದಿದೆ. ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಅತ್ಯಾಧುನಿಕ ಕ್ರೀಡಾ ವಿಜ್ಞಾನ ಕೇಂದ್ರವನ್ನು ಸ್ಥಾಪಿಸಲಾಗಿದೆ. ಕ್ರೀಡಾ ಚಟುವಟಿಕೆಗಳನ್ನು ಉತ್ತೇಜಿಸಲು ಪ್ರಸ್ತುತ ಸಮಾರಂಭದಲ್ಲಿ ಟೋಕಿಯೋ 2020ರಲ್ಲಿ ಭಾಗವಹಿಸಿದ ರಾಜ್ಯದ ಮೂವರು ಪ್ರತಿಭಾವಂತ ಆಟಗಾರರನ್ನು ಪ್ರೋತ್ಸಾಹಕವಾಗಿ ರಾಜ್ಯಪಾಲರ ವಿವೇಚನಾ ನಿಧಿಯಿಂದ ಒಂದು ಲಕ್ಷ ರೂಪಾಯಿ ಮತ್ತು ಸಹಾಯಕ ತರಬೇತುದಾರರಿಗೆ ಒಂದು ಲಕ್ಷ ರೂಪಾಯಿಗಳನ್ನು ನೀಡಿ ಗೌರವಿಸಲಾಯಿತು.

Join Whatsapp