ಅನಿಲ್ ದೇಶ್ ಮುಖ್ ವಿರುದ್ಧದ ತನಿಖಾ ವರದಿಯನ್ನು ಸೋರಿಕೆ ಮಾಡಲು ಪೊಲೀಸರು ಐಫೋನನ್ನು ಲಂಚವಾಗಿ ಪಡೆದಿದ್ದಾರೆ: ಸಿಬಿಐ

Prasthutha|

ನವದೆಹಲಿ: ಭ್ರಷ್ಟಾಚಾರದಲ್ಲಿ ಆರೋಪಿಯಾಗಿರುವ ಮಹಾರಾಷ್ಟ್ರದ ಮಾಜಿ ಸಚಿವ ಅನಿಲ್ ದೇಶ್ ಮುಖ್ ಅವರ ಪ್ರಕರಣದ ವರದಿಯನ್ನು ಸೋರಿಕೆ ಮಾಡಲು ಕೇಂದ್ರ ತನಿಖಾ ದಳದ ಸಬ್ ಇನ್ಸ್ ಪೆಕ್ಟರ್ ಗೆ ಐಫೋನ್ 12 ಪ್ರೊ ಅನ್ನು ಲಂಚವಾಗಿ ನೀಡಲಾಗಿದೆಯೆಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಸಬ್ ಇನ್ಸ್ ಪೆಕ್ಟರ್ ಅಭಿಷೇಕ್ ತಿವಾರಿ ಮತ್ತು ಮಾಜಿ ಸಚಿವ ಅನಿಲ್ ಅವರ ವಕೀಲರಾದ ಆನಂದ್ ದಾಗ ಅವರನ್ನು ಸಿಬಿಐ ಬಂಧಿಸಿದೆ. ದೇಶ್ ಮುಖ್ ವಿರುದ್ಧ ತನಿಖೆಯ ಮೇಲೆ ಪ್ರಭಾವ ಬೀರಲು ಯತ್ನಿಸಿದ ಆರೋಪದಲ್ಲಿ ಬಂಧಿಸಲಾಗಿತ್ತು. ಮುಂಬೈ ನ ಮಾಜಿ ಪೊಲೀಸ್ ಮುಖ್ಯಸ್ಥರಾದ ಪರಮ್ ಬೀರ್ ಸಿಂಗ್ ಅವರು ಕಳೆದ ಏಪ್ರಿಲ್ ನಲ್ಲಿ ದೇಶ್ ಮುಖ್ ವಿರುದ್ಧ ಭ್ರಷ್ಟಾಚಾರದ ಆರೋಪ ಹೊರಿಸಿದ್ದರು.

- Advertisement -

ತನಿಖೆಗೆ ಸಂಬಂಧಿಸಿದ ವಿವರಗಳನ್ನು ಸೋರಿಕೆ ಮಾಡುವ ನಿಟ್ಟಿನಲ್ಲಿ ಇನ್ಸ್ ಪೆಕ್ಟರ್ ಅಭಿಷೇಕ್ ತಿವಾರಿಯನ್ನು ಭೇಟಿ ಮಾಡಿದ ವಕೀಲ ಆನಂದ್ ದಾಗಾ ಅವರು ಐಫೋನ್ 12 ಪ್ರೊ ಅನ್ನು ಉಡುಗೊರೆಯಾಗಿ ನೀಡಿದ್ದರು. ಅಭಿಷೇಕ್ ತಿವಾರಿ ಅವರಿಂದ ಈಗಾಗಲೇ ಐಫೋನ್ 12 ಪ್ರೊ ಅನ್ನು ವಶಪಡಿಸಿ ವಿಧಿವಿಜ್ಞಾನ ವಿಶ್ಲೇಷಣೆಗಾಗಿ ಕಳುಹಿಸಲಾಗಿದೆ ಎಂದು ಸಿಬಿಐ ಮೂಲಗಳು ಮಾಧ್ಯಮಗಳಿಗೆ ತಿಳಿಸಿವೆ.

ಈ ಕುರಿತು ಪ್ರಕರಣ ದಾಖಲಿಸಿರುವ ಸಿಬಿಐ ತಂಡ ಸಬ್ ಇನ್ಸ್ ಪೆಕ್ಟರ್ ಮತ್ತು ವಕೀಲರನ್ನು ಎರಡು ದಿನಗಳ ಅವಧಿಗೆ ಸಿಬಿಐ ಕಸ್ಟಡಿಗೆ ಒಪ್ಪಿಸಲಾಗಿದೆ.

- Advertisement -