ಬರೇಲಿ: ಕಳ್ಳತನದ ಆರೋಪ ಹೊರಿಸಿ ಮುಸ್ಲಿಮ್ ಯುವಕನಿಗೆ ಗಂಭೀರವಾಗಿ ಹಲ್ಲೆ ನಡೆಸಿದ ಘಟನೆ ಉತ್ತರ ಪ್ರದೇಶದಿಂದ ವರದಿಯಾಗಿದೆ. ಹಲ್ಲೆ ನಡೆಸುತ್ತಿರುವ ವೀಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಆತನ ಕೂದಲನ್ನು ಎಳೆದು, ಕುತ್ತಿಗೆಗೆ ತುಳಿದು ಕಳ್ಳತನವನ್ನು ಒಪ್ಪಿಕೊಳ್ಳುವಂತೆ ಬಲವಂತಪಡಿಸುತ್ತಿರುವುದು ಬಹಿರಂಗವಾಗಿದೆ. ಮಾತ್ರವಲ್ಲದೆ ಸಂತ್ರಸ್ತ ಯುವಕನ ಕಾಲುಗಳನ್ನು ಕಟ್ಟಿಹಾಕಲಾಗಿತ್ತು.
ಘಟನೆಗೆ ಸಂಬಂಧಿಸಿದಂತೆ ಅಪರಿಚಿತ ದುಷ್ಕರ್ಮಿಗಳ ವಿರುದ್ಧ ಐಪಿಸಿ ಸೆಕ್ಷನ್ 147, 149, 342 ಅಡಿಯಲ್ಲಿ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿದ್ದೇವೆಂದು ಬರೇಲಿಯ ಹಿರಿಯ ಪೊಲೀಸ್ ವರಿಷ್ಠಾಧಿಕಾರಿಯಾದ ರೋಹಿತ್ ಸಿಂಗ್ ಸಜ್ವಾನ್ ತಿಳಿಸಿದ್ದಾರೆ. ಮಾತ್ರವಲ್ಲದೆ, ವೀಡಿಯೋ ಮತ್ತು ಫೋಟೋದ ಆಧಾರದಲ್ಲಿ ಆರೋಪಿಗಳನ್ನು ಪತ್ತೆಹಚ್ಚಲಾಗುವುದೆಂದು ಅವರು ತಿಳಿಸಿದ್ದಾರೆ.
ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಸಾಹಿಲ್ ಎಂಬವನು ಸಹ ಪ್ರಯಾಣಿಕನಾದ ದೇವೆಂದ್ರ ಕುಮಾರ್ ಎಂಬಾತನ ಫೋನ್ ಕಳ್ಳತನದ ಆರೋಪದಲ್ಲಿ ಸಾಹಿಲ್ ಮೇಲೆ ಗಂಭೀರ ಹಲ್ಲೆ ನಡೆಸಲಾಗಿದೆಯೆಂದು ಹೇಳಲಾಗುತ್ತಿದೆ. ಆದರೆ ಪೊಲೀಸರು ಸಾಹಿಲ್ ಕಳ್ಳತನ ನಡೆಸಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ. ಅದಾಗಲೇ 30 ಮಂದಿಯ ಗುಂಪು ಸಾಹಿಲ್ ಮೇಲೆ ಹಲ್ಲೆ ನಡೆಸಿತ್ತು. ಮೊಬೈಲ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೊಬ್ಬ ಪ್ರಯಾಣಿಕನಾದ ಸಬೀರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಬರೇಲಿಯಲ್ಲಿ ಈ ರೀತಿ ಇತ್ತೀಚೆಗೆ ನಡೆದಿರುವ ನಾಲ್ಕನೇ ಗುಂಪು ಹಲ್ಲೆಯ ಘಟನೆ ಇದಾಗಿದೆ ಎಂದು ಸಾರ್ವಜನಿಕರು ಮಾಹಿತಿ ನೀಡಿದ್ದಾರೆ. 2019 ರಲ್ಲಿ ಮಾನಸಿಕ ಅಸ್ವಸ್ಥ ಮುಸ್ಲಿಮ್ ವ್ಯಕ್ತಿಯನ್ನು ಜಾನುವಾರು ಕಳ್ಳತನದ ಶಂಕೆಯಲ್ಲಿ ಹಲ್ಲೆ ನಡೆಸಿ ಹತ್ಯೆ ನಡೆಸಲಾಗಿತ್ತು. ಕಳೆದ ಸೆಪ್ಟೆಂಬರ್ ನಲ್ಲಿ ಅಮಲೇರಿದ ಮುಸ್ಲಿಮ್ ವ್ಯಕ್ತಿಯನ್ನು ಕಳ್ಳನೆಂದು ತಪ್ಪಾಗಿ ಭಾವಿಸಿ ಮರಕ್ಕೆ ಕಟ್ಟಿಹಾಕಿ ಗುಂಪೊಂದು ಆತನ ಮೇಲೆ ಹಲ್ಲೆ ನಡೆಸಿತ್ತು. ಆತ ನಂತರ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದನು. ಮಾತ್ರವಲ್ಲದೆ ಫೆಬ್ರವರಿಯಲ್ಲಿ 31 ಪ್ರಾಯದ ಟ್ಯಾಕ್ಸಿ ಚಾಲಕನ ಮೇಲೆ ಜಾನುವಾರ ಆರೋಪ ಹೊರಿಸಿ ತಲೆಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಲಾಗಿತ್ತು.