ನ್ಯಾಯ ವಿಜ್ಞಾನ ಪ್ರಯೋಗಾಲಯವನ್ನು ಉನ್ನತೀಕರಿಸಲು ಹೆಚ್ಚು ಆದ್ಯತೆ: ಅರಗ ಜ್ಞಾನೇಂದ್ರ

Prasthutha|

ಬೆಂಗಳೂರು: ನ್ಯಾಯ ವಿಜ್ಞಾನ ಪ್ರಯೋಗಾಲಯವನ್ನು ಉನ್ನತೀಕರಿಸಲು ಹೆಚ್ಚು ಆದ್ಯತೆ ನೀಡಲಾಗುವುದು ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದರು. ಕೋರಮಂಗಲದ ಕೆಎಸ್ಆರ್ ಪಿ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಪೊಲೀಸ್ ಪಬ್ಲಿಕ್ ಶಾಲೆಯ ಶಿಶು ವಿಹಾರ, ಆಡಳಿತ ಕಚೇರಿಯ ನೂತನ ಕಟ್ಟಡ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು.

- Advertisement -


ಸಂಚಾರಿ ಫೋರೆನ್ಸಿಕ್ ಪ್ರಯೋಗಾಲಯಗಳಿಗೂ ಕೂಡ ಇಂದು ಚಾಲನೆ ನೀಡಲಾಗಿದೆ. ಆಡುಗೋಡಿಯಲ್ಲಿ ಪೊಲೀಸ್ ಇಲಾಖೆಯ ನೂರು ಎಕರೆ ಜಾಗವಿದ್ದು, ಅಲ್ಲಿ ಮತ್ತೊಂದು ಪೊಲೀಸ್ ಪಬ್ಲಿಕ್ ಶಾಲೆ ಪ್ರಾರಂಭಿಸುವ ಸಂಬಂಧ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚಿಸಿ ತೀರ್ಮಾನಿಸಲಾಗುವುದು.


ಪೊಲೀಸರ ಮಕ್ಕಳಿಗೂ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಪೊಲೀಸ್ ಪಬ್ಲಿಕ್ ಶಾಲೆಗಳನ್ನು ಪ್ರಾರಂಭಿಸಲಾಗಿದೆ. ನಾಗರಿಕರು ನೆಮ್ಮದಿಯ ಬದುಕು ನಡೆಸಲು ಹಗಲಿರುಳು ಪೊಲೀಸರು ಎಚ್ಚರವಾಗಿದ್ದು, ರಕ್ಷಣೆ ಮಾಡಬೇಕಾಗಿದೆ. ರಾಷ್ಟ್ರದ ಗಡಿ ಕಾಯುವ ಸೈನಿಕರಿಗೆ ತಮ್ಮ ಶತ್ರುಗಳ ಬಗ್ಗೆ ಅರಿವಿರುತ್ತದೆ. ಆದರೆ, ನಾಡಿನಲ್ಲಿ ಸೇವೆ ಸಲ್ಲಿಸುವ ಪೊಲೀಸರಿಗೆ ಅಂಥ ಮಾಹಿತಿ ಇರುವುದಿಲ್ಲ. ಒಂದು ರೀತಿಯಲ್ಲಿ ಸವಾಲಿನ ಕೆಲಸವನ್ನು ಪೊಲೀಸರು ನಿಭಾಯಿಸಬೇಕಾಗಿದೆ.

- Advertisement -


ಪೊಲೀಸರು ಮತ್ತು ಅವರ ಕುಟುಂಬದವರಿಗೆ ಕಲ್ಯಾಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ರಾಜ್ಯದಲ್ಲಿ ಮಾದಕ ವಸ್ತು ಮೂಲೋತ್ಪಾಟನೆ ಮಾಡಲು ನಿರ್ಧಾರ ಮಾಡಲಾಗಿದೆ. ಯುವಕರು ಮಾದಕ ವಸ್ತುಗಳಿಗೆ ಬಲಿಯಾಗುವುದನ್ನು ತಪ್ಪಿಸಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಹೇಳಿದರು.


ಕಾರ್ಯಕ್ರಮದಲ್ಲಿ ಮಾಜಿ ಸಚಿವ ರಾಮಲಿಂಗಾರೆಡ್ಡಿ, ಒಳಾಡಳಿತ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಾ.ರಜನೀಶ್ ಗೋಯಲ್, ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್, ರಾಜ್ಯ ಅಪರ ಪೊಲೀಸ್ ಮಹಾನಿರ್ದೇಶಕರಾದ ಅಲೋಕ್ ಕುಮಾರ್, ಡಾ.ಎ.ಎಸ್.ಎನ್.ಮೂರ್ತಿ ಮತ್ತಿತರ ಗಣ್ಯರು ಪಾಲ್ಗೊಂಡಿದ್ದರು.

Join Whatsapp