“ನಾನು ಸತ್ತರೆ ನೀವೇ ಅಂತ್ಯಸಂಸ್ಕಾರ ನೆರವೇರಿಸಿ” ಎಂದಿದ್ದ ಹಿಂದೂ ವೃದ್ಧೆಯ ಕೊನೆಯ ಮಾತು ಈಡೇರಿಸಿದ ಮುಸ್ಲಿಮ್ ಯುವಕರು

Prasthutha|

ಮೈಸೂರು: “ನಾನು ಸತ್ತರೆ ನನ್ನ ಅಂತ್ಯಸಂಸ್ಕಾರವನ್ನು ಮುಸ್ಲಿಮರೇ ನೆರವೇರಿಸಬೇಕು” ಎಂದು ಹೇಳಿದ್ದ ಹಿಂದೂ ವೃದ್ಧರೊಬ್ಬರು ಸಾವನ್ನಪ್ಪಿದ್ದು, ಅವರ ಕೊನೆಯ ಆಸೆಯಂತೆ ಸ್ಥಳೀಯ ಮುಸ್ಲಿಮರೇ ಅವರ ಅಂತ್ಯಸಂಸ್ಕಾರವನ್ನು ಹಿಂದೂ ಸಂಪ್ರದಾಯದಂತೆ ನೆರವೇರಿಸಿದ್ದಾರೆ.

- Advertisement -


ಕೋಮು ಸಂಘರ್ಷದ ವಿಷಯದಲ್ಲೇ ಹೆಚ್ಚಾಗಿ ಮಾಧ್ಯಮಗಳಲ್ಲಿ ಹೆಸರು ಕೇಳಿ ಬರುವ ಮೈಸೂರಿನ ಕ್ಯಾತಮಾರನಹಳ್ಳಿ, ಈ ಸೌಹಾರ್ದ ಮತ್ತು ಮಾನವೀಯ ಘಟನೆಗೆ ಸಾಕ್ಷಿಯಾಗಿದೆ. ಕ್ಯಾತಮಾರನಹಳ್ಳಿಯ ಗೌಸಿಯನಗರ ಮುಸ್ಲಿಮ್ ಬಾಹುಳ್ಯದ ಪ್ರದೇಶವಾಗಿದ್ದು, ಸುಮಾರು 40 ವರ್ಷಗಳಿಂದ ಜಯಮ್ಮ ಎಂಬವರು ಈ ಪ್ರದೇಶದಲ್ಲಿ ವಾಸವಾಗಿದ್ದರು. ವಿಧವೆಯಾಗಿದ್ದ ಅವರು ತನ್ನ ಸಹೋದರನ ಮನೆಯಲ್ಲಿ ನೆಲೆಸಿದ್ದರು. ಸ್ಥಳೀಯ ಮುಸ್ಲಿಮರು ಜಯಮ್ಮ ಅವರನ್ನು ತಾಯಿ ಸಮಾನವಾಗಿ ಕಂಡು ಅವರ ಬೇಕು ಬೇಡಗಳನ್ನು ನೆರವೇರಿಸುತ್ತಿದ್ದರು. ಮುಸ್ಲಿಮರ ಪ್ರೀತಿ, ಆದರಕ್ಕೆ ಮನಸೋತ ಜಯಮ್ಮ ಅವರು, “ಒಂದು ವೇಳೆ ನಾನು ಸತ್ತರೆ ನೀವೇ ನನ್ನ ಅಂತ್ಯಸಂಸ್ಕಾರ ನೆರವೇರಿಸಿ” ಎಂದು ಹೇಳಿದ್ದರು.


ಇತ್ತೀಚೆಗೆ ಜಯಮ್ಮ ಅವರ ಆರೋಗ್ಯದಲ್ಲಿ ಏರುಪೇರು ಕಂಡು ಬಂದಿದ್ದು, ಅವರನ್ನು ಸ್ಥಳೀಯರೇ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಿಸದೆ ನಿನ್ನೆ ಬೆಳಗ್ಗೆ ಅವರು ಮೃತಪಟ್ಟಿದ್ದರು. ಜಯಮ್ಮ ಅವರ ನಿಧನದಿಂದಾಗಿ ಇಡೀ ಗೌಸಿಯನಗರದಲ್ಲಿ ನಿನ್ನೆ ಮೌನ ಆವರಿಸಿತ್ತು. ಇಡೀ ಗ್ರಾಮದ ಜನರು ಮಮ್ಮಲ ಮರಗಿದರು.

- Advertisement -


ಜಯಮ್ಮ ಅವರ ಸಹೋದರದೊಂದಿಗೆ ಸೇರಿ ಹಿಂದೂ ಸಂಪ್ರದಾಯದಂತೆ ಕ್ಯಾತಮಾರನಹಳ್ಳಿಯ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ನೆರವೇರಿಸಿ ಜಯಮ್ಮ ಅವರ ಕೊನೆಯ ಆಸೆಯನ್ನು ಈಡೇರಿಸಿದ್ದಾರೆ. ಮುಸ್ಲಿಮ್ ಯುವಕರ ಈ ಕೆಲಸಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

Join Whatsapp