ಕೊಡಗು | ಮುಸ್ಲಿಮ್ ಕುಟುಂಬದ ಮೇಲೆ ಹಲ್ಲೆ: ಸಂತ್ರಸ್ತರ ವಿರುದ್ಧವೇ ಪ್ರಕರಣ ದಾಖಲಿಸಿದ ಪೊಲೀಸರು

Prasthutha|

ಮಡಿಕೇರಿ : ಕಾರಿನಲ್ಲಿ ಹೋಗುತ್ತಿದ್ದ ಕುಟುಂಬವನ್ನು ಗುಂಪೊಂದು ಅಡ್ಡಗಟ್ಟಿ ಹಲ್ಲೆ ನಡೆಸಿದ ಘಟನೆ ಕೊಡಗು ಜಿಲ್ಲೆಯ ಶನಿವಾರಸಂತೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಹಲ್ಲೆ ನಡೆಸಿದವರನ್ನು ಬಂಧಿಸುವ ಬದಲು ಸಂತ್ರಸ್ತರನ್ನೇ ಬಂಧಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

- Advertisement -


ಶನಿವಾರಸಂತೆ ನಿವಾಸಿ ಜಾಕಿರ್ ಪಾಷ ಅವರು ಭಾನುವಾರ ತನ್ನ ಪತ್ನಿ, ಮಕ್ಕಳೊಂದಿಗೆ ಕಾರಿನಲ್ಲಿ ಗುಡುಗಳಲೆ ಎಂಬಲ್ಲಿಗೆ ಹೋಗುತ್ತಿದ್ದಾಗ ಎರಡು ಬೈಕ್ ಗಳಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು, ಕಾರಿಗೆ ಅಡ್ಡ ಬಂದು ಅಸಭ್ಯವಾಗಿ ವರ್ತಿಸಿದ್ದಾರೆ. ಕಾರು ನಿಲ್ಲಿಸಿದ ಜಾಕಿರ್, ಅವರನ್ನು ಪ್ರಶ್ನಿಸಿದಾಗ ನಾಲ್ವರು ಸೇರಿ ಪಾಷ ಅವರಿಗೆ ಹಲ್ಲೆ ನಡೆಸಿದ್ದಾರೆ.


ಈ ವೇಳೆ ಕಾರಿನಲ್ಲಿ ಕುಳಿತಿದ್ದ ಅವರ ಪತ್ನಿ ತಕ್ಷಣ ಜಾಕಿರ್ ಅವರ ಸಹೋದರರಿಗೆ ಕರೆ ಮಾಡಿ ವಿಷಯ ತಿಳಿಸಿದ್ದು, ತಕ್ಷಣ ಬರುವಂತೆ ಹೇಳಿದ್ದಾರೆ. ಸ್ಥಳಕ್ಕೆ ಧಾವಿಸಿದ ಜಾಕಿರ್ ಅವರ ಸಹೋದರರು, ದುಷ್ಕರ್ಮಿಗಳ ಮೇಲೆ ಹಲ್ಲೆ ನಡೆಸಿದ್ದು, ಈ ವೇಳೆ ಇಬ್ಬರು ಪರಾರಿಯಾಗಿದ್ದಾರೆ. ಮತ್ತಿಬ್ಬರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

- Advertisement -


ಈ ವಿಷಯ ತಿಳಿದ ಸಂಘಪರಿವಾರದ ನಾಯಕರು ಪೊಲೀಸರ ಮೇಲೆ ಒತ್ತಡ ಹಾಕಿದ್ದಾರೆ. ಒತ್ತಡಕ್ಕೆ ಮಣಿದ ಪೊಲೀಸರು ದೂರು ನೀಡಲು ಬಂದ ಜಾಕಿರ್ ಪಾಷ, ಅಝರ್, ಮುಜಾಹಿದ್ ಮತ್ತು ರಶೀದ್ ಅವರ ಮೇಲೆ 307, 323,142,144,147,148 ಸೇರಿದಂತೆ ಐಪಿಸಿಯ ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಿ, ಬಂಧಿಸಿದ್ದಾರೆ. ಹಲ್ಲೆ ನಡೆಸಿದ ಸಂದೇಶ್, ನಂದನ್ ಸೇರಿದಂತೆ ಇತರರ ಮೇಲೆ ದೂರು ನೀಡಿದ್ದರೂ ಶನಿವಾರ ಸಂತೆ ಪೊಲೀಸರು ಪ್ರಕರಣ ದಾಖಲಿಸದೆ ನಿರ್ಲಕ್ಷ್ಯ ತೋರಿದ್ದಾರೆ. ಇದರ ವಿರುದ್ಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡುವುದಾಗಿ ಸಂತ್ರಸ್ತ ಕುಟುಂಬದ ಸದಸ್ಯ ಅಕ್ಮಲ್ ತಿಳಿಸಿದ್ದಾರೆ.



Join Whatsapp