ಮುಂಬೈ : ರಿಲಯನ್ಸ್ ಇಂಡಸ್ಟ್ರೀಸ್ ಸಮೂಹದ ಮುಖ್ಯಸ್ಥ ಮುಖೇಶ್ ಅಂಬಾನಿ ಮತ್ತು ಅವರ ಕುಟುಂಬದ ಸದಸ್ಯರು ಲಂಡನ್ ನ ಸ್ಟೋಕ್ ಪಾರ್ಕ್ನಲ್ಲಿ ಭಾಗಶಃ ವಾಸಿಸುವ ಯೋಜನೆ ಕುರಿತಾದ ವರದಿ ಅಧಾರ ರಹಿತವಾದದ್ದು ಎಂದು ರಿಲಯನ್ಸ್ ಇಂಡಸ್ಟ್ರೀಸ್ ಸಮೂಹವು ಸ್ಪಷ್ಟ ಪಡಿಸಿದೆ.
ಆಧಾರ ರಹಿತ ವರದಿಯು ಸಾಮಾಜಿಕ ಮಾಧ್ಯಮದಲ್ಲಿ ಊಹಾಪೋಹಗಳಿಗೆ ಕಾರಣವಾಗಿದೆ. ರಿಲಯನ್ಸ್ ಇಂಡಸ್ಟ್ರೀಸ್ ಸಮೂಹದ ಮುಖ್ಯಸ್ಥರು ಮತ್ತು ಅವರ ಕುಟುಂಬದ ಸದಸ್ಯರು ಲಂಡನ್ ನಲ್ಲಾಗಲೀ ಅಥವಾ ವಿಶ್ವದ ಬೇರೆ ಯಾವ ದೇಶಕ್ಕೂ ಸ್ಥಳಾಂತರಗೊಳ್ಳುವ ಅಥವಾ ವಾಸಿಸುವ ಉದ್ದೇಶ ಹೊಂದಿಲ್ಲ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಸಮೂಹ ಸ್ಪಷ್ಟಪಡಿಸಿದೆ.
ಇತ್ತೀಚೆಗೆ ಸ್ಟೋಕ್ ಪಾರ್ಕ್ ಎಸ್ಟೇಟ್ ಅನ್ನು ಸ್ವಾಧೀನಪಡಿಸಿಕೊಂಡಿರುವ ರಿಲಯನ್ಸ್ ಸಮೂಹದ ಕಂಪನಿ ಅಗಿರುವ ಆರ್ ಐಐಎಚ್ಎಲ್, ತಾನು ಸ್ವಾಧೀನ ಪಡಿಸಿಕೊಳ್ಳುವಾಗ ಯೋಜನಾ ಮಾರ್ಗಸೂಚಿಗಳು ಮತ್ತು ಸ್ಥಳೀಯ ನಿಯಮಗಳನ್ನು ಸಂಪೂರ್ಣವಾಗಿ ಪಾಲಿಸಿ ಪಾರಂಪರಿಕ ಆಸ್ತಿಯನ್ನು ಸ್ವಾಧೀನಪಡಿಸಿಕೊಂಡಿರುವುದಾಗಿ ಸ್ಪಷ್ಟಪಡಿಸಿದೆ. ಸ್ವಾಧೀನ ಪಡಿಸಿಕೊಂಡಿರುವ ಆಸ್ತಿಯನ್ನು ಪ್ರಮುಖ ಗಾಲ್ಫ್ ಮತ್ತು ಕ್ರೀಡಾ ರೆಸಾರ್ಟ್ ಆಗಿ ಉನ್ನತೀಕರಿಸುವ ಉದ್ದೇಶ ಹೊಂದಿದೆ ಎಂದೂ ಸ್ಪಷ್ಟಪಡಿಸಿದೆ.
ಸ್ಟೋಕ್ ಪಾರ್ಕ್ ಎಸ್ಟೇಟ್ ಸ್ವಾಧೀನವು ರಿಲಯನ್ಸ್ ಇಂಡಸ್ಟ್ರೀಸ್ ಸಮೂಹದ ತ್ವರಿತವಾಗಿ ಬೆಳೆಯುತ್ತಿರುವ ಗ್ರಾಹಕವಲಯದ ವ್ಯಾಪಾರ ವರ್ಗಕ್ಕೆ ಸೇರಿಸುತ್ತದೆ. ಈ ಬೆಳವಣಿಗೆಯು ಜಾಗತಿಕ ಐಷಾರಾಮಿ ಆತಿಥ್ಯ ಉದ್ಯಮದಲ್ಲಿ ಭಾರತದ ಹೆಜ್ಜೆಗುರುತನ್ನು ವಿಸ್ತರಿಸುತ್ತದೆ ಎಂದೂ ತಿಳಿಸಿದೆ.