ಯಡಿಯೂರಪ್ಪರನ್ನು ನೇಪಥ್ಯಕ್ಕೆ ಸರಿಸಲು ಐಟಿ ಅಸ್ತ್ರ

Prasthutha: November 6, 2021
✍️-ಎ.ಉಮೇಶ್

ಗಾಯಗೊಂಡ ಹುಲಿಯಂತಾಗಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಿಂಧಗಿ, ಹಾನಗಲ್ ಉಪಚುನಾವಣೆಯ ಫಲಿತಾಂಶದಿಂದ ಅಲ್ಪ ನಿರಾಳರಾಗಿದ್ದಾರೆ. ತಮ್ಮನ್ನು ನಿರ್ಲಕ್ಷಿಸಿದರೆ ಬಿಜೆಪಿಗೆ ಕ್ಲೀನ್ ಸ್ವೀಪ್ ಮಾಡಲು ಸಾಧ್ಯವಾಗುವುದಿಲ್ಲ ಎಂಬ ಸಂದೇಶವನ್ನು ಫಲಿತಾಂಶ ನೀಡಿದೆ. ಇದರ ಸುಳಿವರಿತೇ ಬಿಜೆಪಿಯ ದಿಲ್ಲಿಯ ದೊರೆಗಳು ಯಡಿಯೂರಪ್ಪ ಅವರ ಆಪ್ತರ ಮನೆ, ಕಚೇರಿಗಳ ಮೇಲೆ ಆದಾಯ ತೆರಿಗೆ ದಾಳಿ ಎಂಬ ಗುನ್ನಾ ಬಡಿದಿದ್ದಾರೆ. ಇನ್ನೂ ಮುಂದೆ ಯಾವ ದಿಕ್ಕಿನಲ್ಲೂ ಯಡಿಯೂರಪ್ಪ ಜೋರಾಗಿ ಉಸಿರಾಡುವಂತಿಲ್ಲ. ಅಂತಹ ವಾತಾವರಣವನ್ನು ನಿರ್ಮಿಸಲಾಗಿದೆ.
ಸಿಬಿಐ, ಆದಾಯ ತೆರಿಗೆ, ಜಾರಿ ನಿರ್ದೇಶನಾಲಯ, ಎನ್ ಸಿಬಿ ಸೇರಿದಂತೆ ಸ್ವಾಯತ್ತ ಸಂಸ್ಥೆಗಳನ್ನು ಕೇಂದ್ರ ಸರ್ಕಾರ ದುರುಪಯೋಗ ಪಡಿಸಿಕೊಂಡು ರಾಜಕೀಯ ಎದುರಾಳಿಗಳನ್ನು ಹತ್ತಿಕ್ಕುತ್ತಿದೆ ಎಂಬುದು ಹಳೆಯ ಆರೋಪ. ತಮ್ಮದೇ ಪಕ್ಷದ ಉನ್ನತ ನಾಯಕನನ್ನು ಮೂಲೆಗುಂಪು ಮಾಡಲು ಆದಾಯ ತೆರಿಗೆ ಇಲಾಖೆಯನ್ನು ಬಳಸಿಕೊಂಡಿರುವುದು ಅರಗಿಸಿಕೊಳ್ಳಲಾಗದ ಸತ್ಯ.


ಕರ್ನಾಟಕದಲ್ಲಿ ಜನಸಂಘದ ಕಾಲದಿಂದಲೂ ಸೈಕಲ್ ತುಳಿದು ಬಿಜೆಪಿ ಕಟ್ಟಿದವರಲ್ಲಿ ಯಡಿಯೂರಪ್ಪಕೂಡ ಒಬ್ಬರು. ಮೊದಮೊದಲು ಬಿಜೆಪಿಗೆ ಬುನಾದಿ ಹಾಕಿದ ವಿ.ಎಸ್.ಆಚಾರ್ಯ, ಡಿ.ಎಚ್.ಶಂಕರ ಮೂರ್ತಿ, ಎಸ್.ಮಲ್ಲಿಕಾರ್ಜುನಯ್ಯ, ಬಿ.ಬಿ.ಶಿವಪ್ಪ ಸೇರಿದಂತೆ ಅನೇಕರು ಈಗ ನೇಪಥ್ಯಕ್ಕೆ ಸರಿದಿದ್ದಾರೆ. ಕೆಲವರು ಇಹಲೋಕ ತ್ಯಜಿಸಿದ್ದಾರೆ. ಅಂತಹವರ ಜನ್ಮದಿನದಂದು ಪಕ್ಷದ ಕಚೇರಿಯಲ್ಲಿ ಸಣ್ಣ ಊದುಬತ್ತಿಯನ್ನು ಹಚ್ಚದ ಬಿಜೆಪಿ, ಕಾಂಗ್ರೆಸ್‌ಗೆ ಹೊಟ್ಟೆ ಉರಿ ತರಿಸಲು ಸರ್ದಾರ್ ವಲ್ಲಭಬಾಯಿ ಪಟೇಲ್, ಪಿ.ವಿ.ನರಸಿಂಹರಾವ್ ಅವರಂತಹ ಕಾಂಗ್ರೆಸ್ ನಾಯಕರ ಜನ್ಮದಿನಾಚರಣೆಗಳನ್ನು ಹೆಚ್ಚು ಆಚರಿಸುತ್ತಿದೆ. ಇತ್ತೀಚಿನ ನಾಯಕರಾದ ಅನಂತಕುಮಾರ್ ಕೂಡ ಪಕ್ಷ ಸಂಘಟಿಸಿದವರಲ್ಲಿ ಪ್ರಮುಖರು. ಅವರು ಕೂಡ ಇಹಲೋಕ ತ್ಯಜಿಸಿದ್ದಾರೆ. ಬಿಜೆಪಿ ಕಟ್ಟಿದವರು ನಾವು ಎಂದು ಎದೆ ತಟ್ಟಿ ಹೇಳಿಕೊಳ್ಳುವ ಪ್ರಭಾವಿ ನಾಯಕರ ಪೈಕಿ ಮುಂಚೂಣಿಯಲ್ಲಿ ಇರುವುದು ಈಗ ಯಡಿಯೂರಪ್ಪ ಮಾತ್ರ. ಡಿ.ಎಚ್.ಶಂಕರ ಮೂರ್ತಿ ಅವರಂತೆ ಯಡಿಯೂರಪ್ಪರನ್ನು ಮೂಲೆಗುಂಪು ಮಾಡುವ ಹುನ್ನಾರ ನಡೆದಿದೆ. ಅವರ ಪುತ್ರ ಬಿ.ವೈ.ರಾಘವೇಂದ್ರ ಸಂಸದರಾಗಿರುವುದರಿಂದ ಒಂದಿಷ್ಟು ಆಮ್ಲಜನಕ ಉಳಿದುಕೊಂಡಿದೆ. ಕಿರಿಯ ಮಗ ಬಿ.ವೈ.ವಿಜೇಯೆಂದ್ರರ ಪ್ರಭಾವಿ ಸಂಪರ್ಕಗಳಿಗೆ ಕತ್ತರಿ ಹಾಕಿ ನಿಶ್ಯಕ್ತೀಕರಣಗೊಳಿಸಲಾಗುತ್ತಿದೆ.


ಯಡಿಯೂರಪ್ಪ ಸುಲಭವಾಗಿ ಸೋಲು ಒಪ್ಪಿಕೊಳ್ಳುವ ಜಾಯಮಾನದವರಲ್ಲ. ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವಾಗ ಬಿಜೆಪಿ ಹೈಕಮಾಂಡ್ ಪಟ್ಟ ಪಾಡು ಅಷ್ಟಿಷ್ಟಲ್ಲ. ಯಡಿಯೂರಪ್ಪ ಕುಟುಂಬದ ಸದಸ್ಯರು ಆರ್ ಟಿಜಿಎಸ್ ನಲ್ಲಿ ಲಂಚ ಪಡೆದ ಹಗರಣ ಮುಂದಿಟ್ಟುಕೊಂಡು ಬೆದರಿಕೆ ಹಾಕಲಾಯಿತು. ಅಕ್ರಮ ಸಂಪತ್ತಿನ ಹೆಸರಿನಲ್ಲಿ ಜಾರಿ ನಿರ್ದೇಶನಾಲಯದ ತನಿಖೆ ನಡೆಸುವ ಧಮಕಿ ಹಾಕಲಾಯಿತು. ಇಳಿ ವಯಸ್ಸಿನಲ್ಲಿ ಮಗನನ್ನು ಕೃಷ್ಣ ಜನ್ಮಸ್ಥಾನದಲ್ಲಿ ನೋಡಲು ಬಯಸದ ಯಡಿಯೂರಪ್ಪ ಬಿಕ್ಕಿ ಬಿಕ್ಕಿ ಅಳುತ್ತಲೇ ಪದತ್ಯಾಗ ಮಾಡಿದರು. ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ದಿನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ ಕಾರ್ಯ ಕ್ರಮದಲ್ಲಿ ಕಣ್ಣೀರು ಹಾಕಿದ ಯಡಿಯೂರಪ್ಪ, ನಾನು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ 20 ದಿನಗಳಾದರೂ ಸಂಪುಟ ವಿಸ್ತರಣೆಗೆ ಅವಕಾಶ ಕೊಡಲಿಲ್ಲ ಎಂದು ಬಿಕ್ಕಳಿಸುತ್ತಲೇ ಮೋ-ಶಾ ಜೋಡಿಯನ್ನು ತರಾಟೆಗೆ ತೆಗೆದುಕೊಳ್ಳಲು ಬಾಯಿ ತೆರೆದರು. ಆದರೆ ಅಷ್ಟೆ ಬೇಗ ಅವಡುಗಚ್ಚಿ ಮಾತು ಬದಲಿಸಿದರು.


ಪೆಟ್ಟು ಬಿದ್ದ ಹುಲಿಯಂತಾದ ಯಡಿಯೂರಪ್ಪರಾಜಕಾರಣದಲ್ಲಿ ಏನು ಆಗಿಲ್ಲ ಎಂಬಂತಿದ್ದರೂ, ತಮ್ಮ ಜೊತೆಯಲ್ಲಿದ್ದುಕೊಂಡೇ ದ್ವಿಪಾತ್ರ ನಿರ್ವಹಿಸಿ, ನಿರಾಯಾಸವಾಗಿ ಮುಖ್ಯಮಂತ್ರಿ ಗದ್ದುಗೆಗೇರಿದ ಬಸವರಾಜ ಬೊಮ್ಮಾಯಿ ವಿರುದ್ಧ ಒಳಗೊಳಗೆ ಹಲ್ಲು ಮಸೆಯುತ್ತಿದ್ದಾರೆ. ಗಾಯಕ್ಕೆ ಉಪ್ಪು ಸವರಿದಂತೆ ಬೊಮ್ಮಾಯಿ ಮುಖ್ಯಮಂತ್ರಿಯಾಗುತ್ತಿದ್ದಂತೆ ಯಡಿಯೂರಪ್ಪ ಅವರ ಆಪ್ತ ಬಳಗದಲ್ಲಿದ್ದ ಎಲ್ಲ ಅಧಿಕಾರಿಗಳ ಸ್ಥಾನಪಲ್ಲಟ ಮಾಡಿದ್ದಾರೆ. ಕೆಲವು ಅಧಿಕಾರಿಗಳನ್ನು ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂದಾದಾಗ ಅವರ ಸುತ್ತ ಮುತ್ತಲಿನ ರೆಕ್ಕೆಪುಕ್ಕಗಳನ್ನು ಕತ್ತರಿಸಿ ಅತಂತ್ರಗೊಳಿಸಲಾಗಿದೆ. ಈ ರೀತಿಯ ಗಾಯಗಳು ಯಡಿಯೂರಪ್ಪ ಅವರನ್ನು ಕೆರಳಿಸುತ್ತಲೇ ಇವೆ.


ಉಪಚುನಾವಣೆ ಘೋಷಣೆಯಾದಾಗ ಸಿಂಧಗಿ ಕ್ಷೇತ್ರದಲ್ಲಿ ಸ್ಪರ್ಧಿಸಲು ಬಿ.ವೈ.ವಿಜಯೇಂದ್ರಗೆ ಅವಕಾಶ ಸಿಗಲಿದೆ ಎಂಬ ನಿರೀಕ್ಷೆಗಳಿದ್ದವು. ಅದು ಹುಸಿಯಾಗಿದೆ. ಹಾನಗಲ್ ಕ್ಷೇತ್ರದ ಚುನಾವಣೆಯ ಉಸ್ತುವಾರಿಯಾದರೂ ಸಿಗಲಿದೆ ಎಂಬ ನಿರೀಕ್ಷೆಯಲ್ಲಿದ್ದವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಟೀಂ ಅದಕ್ಕೂ ಕಲ್ಲು ಹಾಕಿ ಶಾಕ್ ನೀಡಿತ್ತು. ಅತ್ತ ಅಧಿಕಾರವೂ ಇಲ್ಲ, ಇತ್ತ ಅವಕಾಶವೂ ಇಲ್ಲ ಎಂದಾದಾಗ ಯಡಿಯೂರಪ್ಪಮನ ಶಾಂತಿಗಾಗಿ ಮಾಲ್ಡೀವ್ಸ್ ಪ್ರವಾಸ ಕೈಗೊಂಡರು.
ಅಲ್ಲಿಂದ ಬರುವ ವೇಳೆಗೆ ಇಲ್ಲಿನ ರಾಜಕೀಯ ಚಿತ್ರಣವೇ ಮತ್ತಷ್ಟು ಬದಲಾಗಿ ಹೋಗಿತ್ತು. ಹೀಗೇ ಬಿಟ್ಟರೆ ತನ್ನನ್ನು ಸವಕಲು ನಾಣ್ಯ ಮಾಡುತ್ತಾರೆ ಎಂಬ ಕಾರಣಕ್ಕೆ ಯಡಿಯೂರಪ್ಪ, ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷ ಸಂಘಟನೆ ಮಾಡುತ್ತೇನೆ ಎಂದು ಘೋಷಣೆ ಮಾಡಿದರು. ಅದಕ್ಕಾಗಿ ಹೊಸ ಕಾರನ್ನು ಖರೀದಿ ಮಾಡಿ, ಇಂಟಿರಿಯರ್ ಡಿಸೈನ್ ಮಾಡಿಸಿಕೊಂಡು ತಯಾರಾದರು. ಅದೇ ವೇಳೆಗೆ ಬಿಜೆಪಿ, ರಾಜ್ಯ ಪ್ರವಾಸಕ್ಕಾಗಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಕೆ.ಎಸ್.ಈಶ್ವರಪ್ಪ, ಆರ್.ಅಶೋಕ್ ನೇತೃತ್ವದಲ್ಲಿ ಮೂರು ತಂಡಗಳನ್ನು ಘೋಷಣೆ ಮಾಡಿತ್ತು. ಅದರಲ್ಲಿ ಅಪ್ಪಿತಪ್ಪಿಯೂ ಯಡಿಯೂರಪ್ಪ ಅವರ ಹೆಸರು ಇರಲಿಲ್ಲ. ಯಡಿಯೂರಪ್ಪ ನಮ್ಮ ಪಕ್ಷದ ಉನ್ನತ ನಾಯಕರು, ಅವರ ರಾಜ್ಯ ಪ್ರವಾಸಕ್ಕೆ ಯಾರ ಅನುಮತಿಯೂ ಬೇಕಿಲ್ಲ ಎಂದು ಬಿಜೆಪಿ ವರಿಷ್ಠ ನಾಯಕರು ತಿಪ್ಪೆ ಸಾರಿಸುವ ಹೇಳಿಕೆ ನೀಡಿದರು. ನೀವು ನಮ್ಮ ಆಪ್ತರು ಯಾವಾಗ ಬೇಕಾದರೂ ಮನೆಗೆ ಬನ್ನಿ ಎಂದು ಮುಖ ತಿರುಗಿಸಿ ಹೇಳಿದಂತಿತ್ತು ಆ ಹೇಳಿಕೆ. ಅಲ್ಲಿಗೆ ಯಡಿಯೂರಪ್ಪ ಅವರ ರಾಜ್ಯ ಪ್ರವಾಸ ಕನಸಿಗೂ ಕಲ್ಲು ಬಿತ್ತು.


ಆ ವೇಳೆಗೆ ಸಿಂಧಗಿ ಮತ್ತು ಹಾನಗಲ್ ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಣೆಯಾಯಿತು. ಅಭ್ಯರ್ಥಿಗಳ ಆಯ್ಕೆ ವಿಷಯದಲ್ಲಿ ರಾಜ್ಯದ ನಾಯಕರು ಯಡಿಯೂರಪ್ಪ ಅವರನ್ನು ಔಪಚಾರಿಕವಾಗಿ ಸಂಪರ್ಕ ಮಾಡಿದರಾದರೂ, ಈ ಮೊದಲೇ ತಾವು ನಿಶ್ಚಯಿಸಿದ ಅಭ್ಯರ್ಥಿಗಳ ಹೆಸರನ್ನು ಹೈಕಮಾಂಡ್ ಗೆ ಶಿಫಾರಸ್ಸು ಮಾಡಿದ್ದರು. ದೆಹಲಿಯ ನಾಯಕರೂ ಮತ್ತೂ ಒಂದು ಹೆಜ್ಜೆ ಮುಂದೆ ಹೋಗಿ ರಾಜ್ಯ ನಾಯಕರು ಶಿಫಾರಸು ಮಾಡಿದ ಹೆಸರುಗಳನ್ನು ಕಸದ ಬುಟ್ಟಿಗೆ ಹಾಕಿ ನೇರವಾಗಿ ತಮ್ಮನ್ನು ಸಂಪರ್ಕಿಸಿದವರಿಗೆ ಟಿಕೆಟ್ ನೀಡಿದ್ದಾರೆ.


ಉಪಚುನಾವಣೆಯ ಫಲಿತಾಂಶ ಬಸವರಾಜ ಬೊಮ್ಮಾಯಿ ಸರ್ಕಾರದ ಸಂಖ್ಯಾಬಲದ ಮೇಲೆ ಯಾವ ಪರಿಣಾಮವನ್ನೂ ಬೀರುವುದಿಲ್ಲವಾದರೂ, ಯಡಿಯೂರಪ್ಪ ಅವರ ಪಾಳೆಯದಿಂದ ಅತಂತ್ರ ಪರಿಸ್ಥಿತಿ ಅನುಭವಿಸುವ ಭಯದಲ್ಲಿತ್ತು. ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಬಳ್ಳಾರಿಯ ಗಣಿಧಣಿಗಳು ಒಳಗೊಳಗೆ ಒಂದೆರಡು ಸಭೆಗಳನ್ನು ನಡೆಸಿದ್ದರು. ಗಣಿಧಣಿಗಳು ಬಹಿರಂಗವಾಗಿ ಹೊರಗೆ ಕಾಣಿಸಿಕೊಳ್ಳಲು ಹಿಂದೇಟು ಹಾಕಿದ್ದರು. ಜಗದೀಶ್ ಶೆಟ್ಟರ್ ತಮ್ಮ ರಾಜಕೀಯ ದಾಯಾದಿ ಬಸವರಾಜ ಬೊಮ್ಮಾಯಿ ಮೇಲಿನ ಸಿಟ್ಟಿನಿಂದ ಭಿನ್ನರ ಬಣ ಸೇರಿಕೊಳ್ಳಲು ಮುಂದಾದರಾದರೂ, ಅದರ ನಾಯಕತ್ವ ವಹಿಸಿಕೊಳ್ಳುವ ಧೈರ್ಯ ಮಾಡಲಿಲ್ಲ. ಎಂ.ಪಿ.ರೇಣುಕಾಚಾರ್ಯ ಹೊರತು ಪಡಿಸಿ ಉಳಿದೆಲ್ಲಾ ಶಾಸಕರು ಆದಾಯ ತೆರಿಗೆ, ಜಾರಿ ನಿರ್ದೇಶನಾಲಯದ ಭಯದಿಂದ ಬಹಿರಂಗವಾಗಿ ಬರಲು ಇಚ್ಛಿಸದೆ ಒಳಗೊಳಗೆ ಮಸಲತ್ತು ನಡೆಸುತ್ತಿದ್ದಾರೆ.


ಆಪರೇಷನ್ ಕಮಲದಂತಹ ರಹಸ್ಯ ಕಾರ್ಯಾಚರಣೆಯಲ್ಲಿ ಪಳಗಿದ ಯಡಿಯೂರಪ್ಪ ಮತ್ತು ಅವರ ಪುತ್ರ ವಿಜಯೇಂದ್ರ ಅನಿವಾರ್ಯವಾಗಿ ಮುಂದಾಳತ್ವದಲ್ಲಿ ನಿಲ್ಲಲೇಬೇಕಾದ ಪರಿಸ್ಥಿತಿ ಎದುರಾಗಿತ್ತು. ಉಪಚುನಾವಣೆ ಫಲಿತಾಂಶ ಭಾರೀ ರಾಜಕೀಯ ಬೆಳವಣಿಗೆಗೆ ಕಿಡಿಯಾಗಲಿದೆ ಎಂಬ ಚರ್ಚೆಗಳು ರಾಜಕೀಯ ವಲಯದಲ್ಲಿ ನಡೆದಿದ್ದವು.


ಉಪಚುನಾವಣೆಯಲ್ಲಿ ಬಿಜೆಪಿ ಗೆದ್ದರೆ ಬಸವರಾಜ ಬೊಮ್ಮಾಯಿ ಅವರ ನಾಯಕತ್ವ ಗಟ್ಟಿಯಾಗಲಿದೆ ಎಂಬ ಸಂದೇಶ ರವಾನೆಯಾಗಲಿದೆ. ತಮ್ಮ ಹಾಗೂ ಕುಟುಂಬದ ಅಸ್ತಿತ್ವವನ್ನು ಮಂಕಾಗಿಸಲಿದೆ ಎಂಬ ದುಗುಡ ಯಡಿಯೂರಪ್ಪಅವರನ್ನು ಕಾಡುತಿದೆ. ಒಂದು ವೇಳೆ ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಸೋಲು ಕಂಡರೆ ಯಡಿಯೂರಪ್ಪಅವರನ್ನು ಕೈ ಬಿಟ್ಟರೆ ಪಕ್ಷಕ್ಕೆ ಉಳಿಗಾಲವಿಲ್ಲ ಎಂಬ ವಾದದ ಮೂಲಕ ಬಿಎಸ್‌ವೈ ಪಡೆಯ ಕೂಗು ಮಾರಿಗಳು ಉಯಿಲೆಬ್ಬಿಸಲು ತಯಾರಿ ನಡೆಸಿದ್ದರು. ತಮ್ಮ ವರ್ಚಸ್ಸು ಹಾಗೂ ಮಕ್ಕಳ ರಾಜಕೀಯ ಏಳಿಗೆಗಾಗಿ ಏನಾದರೂ ಮಾಡಲೇಬೇಕು ಎಂಬ ಲೆಕ್ಕಾಚಾರದಲ್ಲಿದ್ದ ಬಿಎಸ್‌ವೈ ಗೆ ಆಪ್ತರ ಮೇಲೆ ನಡೆದ ಆದಾಯ ದಾಳಿ, ಭಾರೀ ಶಾಕ್ ನೀಡಿದೆ.


ಯಡಿಯೂರಪ್ಪ ಅವರ ಕುಟುಂಬದ ವಿರುದ್ಧ ಬಿಜೆಪಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಭಾರೀ ಭ್ರಷ್ಟಾಚಾರದ ಆರೋಪಗಳನ್ನು ಮಾಡುತ್ತಲೇ ಬಂದಿದ್ದರು. ಈ ಇಬ್ಬರು ನಾಯಕರು ರೊಚ್ಚಿಗೇಳುವ ಮೊದಲು ಯಡಿಯೂರಪ್ಪ ಭ್ರಷ್ಟಾಚಾರ ಮಾಡುವುದು ಕೂಡ ಲೋಕ ಕಲ್ಯಾಣಕ್ಕಾಗಿ ಎಂಬ ಭಾವನೆ ಬಿಜೆಪಿ ಮುಖಂಡರಲ್ಲಿತ್ತು. ಪಕ್ಷ ಸಂಘಟನೆ, ಸಂಘಪರಿವಾರದ ನಿರ್ವಹಣೆಗಾಗಿ ಹಣ ಬೇಕು, ಅದಕ್ಕಾಗಿ ಭ್ರಷ್ಟಾಚಾರ ಮಾಡಲೇಬೇಕು ಎಂಬ ವಾದಗಳಿದ್ದವು. ಅದಕ್ಕಾಗಿ ಆರ್‌ಟಿಜಿಎಸ್‌ನಲ್ಲಿ ಲಂಚ ಪಡೆದಾಗಲೂ ಬಿಜೆಪಿಯ ರಾಜ್ಯ ಮತ್ತು ರಾಷ್ಟ್ರೀಯ ಮುಖಂಡರು ಯಡಿಯೂರಪ್ಪ ಅವರ ಬೆಂಬಲಕ್ಕೆ ನಿಂತಿದ್ದರು.


‘ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು’ ಎಂಬಂತೆ ಅಧಿಕಾರದಿಂದ ಕೆಳಗಿಸುವಾಗ ಒಂದೊಂದೇ ಹಗರಣಗಳು ಚರ್ಚೆಯಾಗಲಾರಂಭಿಸಿದವು. ಎಚ್.ವಿಶ್ವನಾಥ್ 20 ಸಾವಿರ ಕೋಟಿ ರೂಪಾಯಿಗಳ ಭ್ರಷ್ಟಾಚಾರವನ್ನು ಬಹಿರಂಗ ಮಾಡಿ, ದಾಖಲೆಗಳನ್ನು ಬಿಡುಗಡೆ ಮಾಡಿದರು. ಅಲ್ಲಿಂದ ಯಡಿಯೂರಪ್ಪಅವರ ಪಾಲಿನ ಕೆಟ್ಟ ದಿನಗಳು ಶುರುವಾದವು. ನೇರವಾಗಿ ಯಡಿಯೂರಪ್ಪ ಅವರ ಮೇಲೆ ದಾಳಿ ನಡೆಸುವ ಬದಲಾಗಿ. ಆಪ್ತರ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಮುಗಿ ಬಿದ್ದಿದೆ.
ಯಡಿಯೂರಪ್ಪ ಅವರ ಕುಟುಂಬದ ಆಪ್ತ ಉಮೇಶ್ ಮನೆಯಿಂದ ಆರಂಭವಾದ ದಾಳಿ, ಮೂವರು ಗುತ್ತಿಗೆದಾರರ ಮನೆಗಳ ಶೋಧ ಮತ್ತು ಜಪ್ತಿ ಕಾರ್ಯಾಚರಣೆಯವರೆಗೂ ಬಂದಿತ್ತು. ಒಬ್ಬೊಬ್ಬರ ಬಳಿಯೂ ಮುನ್ನೂರು ನಾನ್ನೂರು ಕೋಟಿ ರೂಪಾಯಿ ಅಕ್ರಮ ಸಂಪತ್ತು ಪತ್ತೆಯಾಗಿತ್ತು. ಎಲ್ಲರೂ ಬೋಗಸ್ ಬಿಲ್ ಗಳನ್ನು ಮಾಡಿರುವುದನ್ನು ಆದಾಯ ತೆರಿಗೆ ದಾಳಿ ಗುರುತಿಸಿದೆ. ಪ್ರಾಥಮಿಕ ಮಾಹಿತಿ ಪ್ರಕಾರ 750 ಕೋಟಿ ರೂಪಾಯಿ ಅಕ್ರಮ ಸಂಪತ್ತಿನ ದಾಖಲೆಗಳು ಪತ್ತೆಯಾಗಿವೆ. ಇನ್ನೂ ಮುಂದೆ ನಡೆಯುವ ವಿಚಾರಣೆಯೇ ಅಸಲಿ ಕಹಾನಿ. ದಾಳಿಗೆ ಒಳಗಾದವರೆಲ್ಲರೂ ಯಡಿಯೂರಪ್ಪ ಅವರ ಕುಟುಂಬದ ಆಪ್ತ ವಲಯದಲ್ಲಿ ಗುರುತಿಸಿಕೊಂಡವರಾಗಿದ್ದಾರೆ. ಇನ್ನೂ ಕೆಲವರು ಬೇನಾಮಿ ಆಸ್ತಿಗಳಿಗೆ ನಾಮಾಂಕಿತ ಮಾಲೀಕರು ಎಂಬ ಮಾಹಿತಿ ಇದೆ.


ಯಡಿಯೂರಪ್ಪ ಅವರನ್ನು ನೇರವಾಗಿ ಮುಟ್ಟದೆ ರೆಂಬೆಕೊಂಬೆಗಳನ್ನು ಕಡಿಯುವ ಕೆಲಸಕ್ಕೆ ಕೈ ಹಾಕಲಾಗಿದೆ. ಆದಾಯ ತೆರಿಗೆ ಅಲ್ಲದೆ ಬೇರೆ ಯಾವುದೇ ತನಿಖೆ ನಡೆದಿದ್ದರೂ ಬಹುಶಃ ಅಕ್ರಮ ಸಂಪತ್ತಿನ ದಾಖಲೆಗಳನ್ನು ಕರಾರುವಾಕ್ಕಾಗಿ ಲೆಕ್ಕ ಹಾಕಲು ಸಾಧ್ಯವಾಗುತ್ತಿರಲಿಲ್ಲವೇನೋ. ಇಂಚಿಂಚು ಎಳೆ ಬಿಡಿಸಬೇಕಾದರೆ ಸಿಬಿಐ, ಜಾರಿ ನಿರ್ದೇಶನಾಲಯಕ್ಕಿಂತಲೂ ಆದಾಯ ತೆರಿಗೆ ಇಲಾಖೆಯೇ ಸೂಕ್ತ. ಎಲ್ಲಾ ಕೋನಗಳಿಂದಲೂ ಲೆಕ್ಕಾಚಾರ ಹಾಕಿಯೇ ಚಾಣಾಕ್ಷರು ದಾಳಿ ಮಾಡಿಸಿದ್ದಾರೆ. ಶೋಧ ಕಾರ್ಯಾಚರಣೆಯ ಬಳಿಕ ಜಪ್ತಿ ಮಾಡಲಾದ ಅಕ್ರಮ ಸಂಪತ್ತಿನ ಮಾಹಿತಿಯನ್ನು ಅಧಿಕೃತವಾಗಿ ನೀಡಲಾಗಿದೆ.


ದಾಳಿಗೊಳಗಾದವರನ್ನು ವಿಚಾರಣೆ ನಡೆಸಿ ಎಲ್ಲ ಮಾಹಿತಿಗಳನ್ನು ಕಲೆ ಹಾಕಲಾಗುತ್ತದೆ. ಈ ಮೊದಲು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಯಡಿಯೂರಪ್ಪ ಹೈಕಮಾಂಡ್ ವಿರುದ್ಧ ತಿರುಗಿ ಬಿದ್ದಿದ್ದರು, ಬಿಜೆಪಿ ಬಿಟ್ಟು ಕೆಜೆಪಿ ಬಲಗೊಳಿಸಲು ಹೋಗಿದ್ದರು. ಅದರಿಂದಾಗಿಯೇ 2013ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 40 ಸ್ಥಾನಗಳಿಗೆ ಕುಸಿದಿತ್ತು. ಈ ಬಾರಿಯೂ ಯಡಿಯೂರಪ್ಪ ಬಂಡಾಯವೆದ್ದರೆ ಮಟ್ಟ ಹಾಕಲು ಅಗತ್ಯವಾದ ಎಲ್ಲಾ ತಯಾರಿಗಳನ್ನು ಹೈಕಮಾಂಡ್ ಮಾಡಿಕೊಳ್ಳುತ್ತಿದೆ. ನೇರವಾಗಿ ಯಡಿಯೂರಪ್ಪ ಅವರನ್ನು ಮುಟ್ಟಿದರೆ ರಾಜ್ಯದಲ್ಲಿ ಪ್ರಬಲ ಲಿಂಗಾಯಿತ ಸಮುದಾಯ ಭುಗಿಲೇಳಲಿದೆ ಎಂಬ ಆತಂಕ ದಿಲ್ಲಿಯ ನಾಯಕರನ್ನು ಕಾಡುತ್ತಿದೆ. ಅದಕ್ಕಾಗಿ ಹಂತ-ಹಂತವಾಗಿ ವರ್ಚಸ್ಸು ಕುಗ್ಗಿಸುವ ಸಂಚು ನಡೆದಿದೆ. ಅಧಿಕಾರಾವಧಿಯಲ್ಲಿ ಯಡಿಯೂರಪ್ಪ ಎಷ್ಟು ಆಸ್ತಿ ಸಂಪಾದನೆ ಮಾಡಿದ್ದಾರೆ. ಅದರಲ್ಲೇ ಬೇನಾಮಿ ಎಷ್ಟು ಎಂಬ ಸಂಪೂರ್ಣ ಮಾಹಿತಿ ಉಮೇಶ್ ಅವರ ಬಳಿ ಇದೆ. ಅದನ್ನು ತಿಳಿದುಕೊಳ್ಳಲು ಆದಾಯ ತೆರಿಗೆ ಅಧಿಕಾರಿಗಳು ಅಖಾಡಕ್ಕೆ ಇಳಿದಿದ್ದಾರೆ. ಇದು ಮೇಲ್ನೋಟಕ್ಕೆ ಜಲಸಂಪನ್ಮೂಲ ಇಲಾಖೆಯ ಗುತ್ತಿಗೆದಾರರ ಭ್ರಷ್ಟಾಚಾರದ ವಿಚಾರಣೆಗಾಗಿ ನಡೆಯುತ್ತಿರುವ ತನಿಖೆ ಎಂದು ಬಿಂಬಿಸಲಾಗುತ್ತಿದ್ದರೂ ವಾಸ್ತವದಲ್ಲಿ ಯಡಿಯೂರಪ್ಪಅವರ ಸ್ಥಿರ ಮತ್ತು ಚರಾಸ್ತಿಗಳ ಮಾಹಿತಿಗೆ ಫೈಲ್ ಓಪನ್ ಆಗಿದೆ.


ಜಲ ಸಂಪನ್ಮೂಲ ಇಲಾಖೆಯಲ್ಲಿ ಭ್ರಷ್ಟ್ಟಾಚಾರ ನಡೆದಿದ್ದರೆ ಅದನ್ನು ತನಿಖೆ ನಡೆಸಲು ರಾಜ್ಯದಲ್ಲಿ ಎಸಿಬಿ, ಲೋಕಾಯುಕ್ತ ಇದೆ. ಕೇಂದ್ರದಲ್ಲಿ ಸಿಬಿಐ ಇದೆ. ವೃತ್ತಿಪರ ತನಿಖಾ ಸಂಸ್ಥೆಗಳನ್ನು ಆದಾಯ ತೆರಿಗೆ ಇಲಾಖೆ ದಾಳಿ ನಡೆದಾಗಲೇ ತಮ್ಮ ವಿರುದ್ಧದ ಸಂಚಿನ ಸುಳಿವು ಅರಿತ ಯಡಿಯೂರಪ್ಪ, ನಿಧಾನಕ್ಕೆ ಉಪಚುನಾವಣೆ ನಡೆಯುತ್ತಿರುವ ಸಿಂಧಗಿ ಮತ್ತು ಹಾನಗಲ್ ಕ್ಷೇತ್ರದಲ್ಲಿ ಅಡ್ಡಾಡಿ ಬಂದಿದ್ದಾರೆ. ಅವರ ಪುತ್ರ ವಿಜಯೇಂದ್ರ ಕೂಡ ಒಂದೆರಡು ದಿನ ಪ್ರಚಾರ ನಡೆಸಿದ ಶಾಸ್ತ್ರ ಮಾಡಿದ್ದಾರೆ.
ಬಿಜೆಪಿ ನಾಯಕತ್ವಕ್ಕೆ ಸಡ್ಡು ಹೊಡೆಯಲಾರದ ಸಂದಿಗ್ಧತೆಗೆ ಯಡಿಯೂರಪ್ಪ ಮತ್ತವರ ಕುಟುಂಬ ಸಿಲುಕಿದೆ. ನವೆಂಬರ್ 16ರಿಂದ ರಾಜ್ಯಾದ್ಯಂತ ಪ್ರವಾಸ ಮಾಡಿ, ಬಿಜೆಪಿಗೆ 140 ಸ್ಥಾನಗಳನ್ನು ಗೆಲ್ಲಿಸಿ, ಸ್ವಂತ ಬಲದ ಮೇಲೆ ಅಧಿಕಾರಕ್ಕೆ ತರುತ್ತೇನೆ ಎಂದು ಸೊರಗಿದ ಸ್ವರದಲ್ಲಿ ಗುಡುಗಿದ್ದಾರೆ. ಹೇಗಿದ್ದ ಯಡಿಯೂರಪ್ಪ ಹೇಗಾಗಿದ್ದಾರೆ ಎಂಬ ಮರುಕ ಹುಟ್ಟುವಂತಿದೆ ಅವರ ಧ್ವನಿ. ದಿನೇ ದಿನೇ ಯಡಿಯೂರಪ್ಪ ಅವರನ್ನು ದುರ್ಬಲಗೊಳಿಸಲಾಗುತ್ತಿದೆ. ಉಪಚುನಾವಣೆಯಲ್ಲಿ ಬಿಜೆಪಿ ಎರಡು ಕ್ಷೇತ್ರಗಳಲ್ಲಿ ಗೆದ್ದರೆ ಯಡಿಯೂರಪ್ಪ ಮತ್ತಷ್ಟು ಸವಕಲಾಗುತ್ತಾರೆ ಎನ್ನಲಾಗಿತ್ತು. ಆದರೆ ಸದ್ಯಕ್ಕೆ ಒಂದು ಸ್ಥಾನದಲ್ಲಿ ಮಾತ್ರ ಬಿಜೆಪಿ ಗೆದ್ದಿದೆ. ಬಿಎಸ್ ಐ ಬಳಿ ಅಧಿಕಾರ ಇಲ್ಲದೆ ಇರುವುದರಿಂದ ಶಾಸಕರು ಮೊದಲಿನಂತೆ ಅವರ ಮನೆ ಬಾಗಿಲಿಗೆ ಹೋಗುವುದಿಲ್ಲ. ಅಲ್ಲಿಗೆ ಮತ್ತೊಬ್ಬ ಜನ ನಾಯಕನನ್ನು ಮೋ-ಶಾ ಜೋಡಿ ನೇಪಥ್ಯಕ್ಕೆ ಸರಿಸುವಲ್ಲಿ ಯಶಸ್ವಿಯಾದಂತಾಗುತ್ತದೆ. ಆದರೆ ಇವೆಲ್ಲವನ್ನೂ ಮೀರಿ ಯಡಿಯೂರಪ್ಪ ತಮ್ಮ ಛಾಪನ್ನು ತೋರಿಸುತ್ತಾರಾ ಎಂಬುದನ್ನು ಕಾದುನೋಡಬೇಕಿದೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!