ದಾವಣಗೆರೆ : ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆದು ಕಾಂಗ್ರೆಸ್ ಸರ್ಕಾರ ರಚನೆಯಾಗಿ ಆರು ತಿಂಗಳ ಅವಧಿ ಪೂರ್ಣಗೋಳಿಸುತ್ತಿದೆ. ಆದರೆ ಬಿಜೆಪಿಯಿಂದ ವಿರೋಧ ಪಕ್ಷದ ನಾಯಕನ ತೀರ್ಮಾನ ಇನ್ನೂ ಆಗಿಲ್ಲ. ಬಿಜೆಪಿಯಲ್ಲಿ ಸಮರ್ಥವಾದ ನಾಯಕತ್ವವಿಲ್ಲದ ಕಾರಣ ಹೀಗಾಗುತ್ತಿದೆ ಎನ್ನಲಾಗುತ್ತಿರುವಾಗಲೇ ಬಿಜೆಪಿ ನಾಯಕ, ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ ಅದನ್ನೇ ಹೇಳಿದ್ದಾರೆ, ಬಿಒಜೆಪಿಯಲ್ಲಿ ಸಮರ್ಥ ನಾಯಕತ್ವ ಇಲ್ಲ, ಹಲವರು ಬಿಜೆಪಿ ಪಕ್ಷ ಬಿಡುವ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಸ್ಪೋಟಕ ಹೇಳಿಕೆ ನೀಡಿದ್ದಾರೆ.
ಮುಂದುವರೆದು ಅವರು, ನಮ್ಮವರಿಗೆ ನಾನು ಬೇಡ ಅನಿಸುತ್ತದೆ. ಆದರೆ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರುತ್ತೇನೆ ಎಂದು ನಾನು ಎಲ್ಲೂ ಹೇಳಿಲ್ಲ. ಹೊನ್ನಾಳಿ- ನ್ಯಾಮತಿ ತಾಲ್ಲೂಕು ಬರಗಾಲ ಪಟ್ಟಿಗೆ ಸೇರ್ಪಡೆಗೆ ಒತ್ತಾಯಿಸಿ ಕಾಂಗ್ರೆಸ್ ನಾಯಕರನ್ನೂ ಭೇಟಿಯಾಗಿದ್ದೇನೆ. ಇದನ್ನೇ ತಪ್ಪಾಗಿ ಬಿಂಬಿಸಲಾಗಿದೆ. ಪಕ್ಷದ ಹಿರಿಯರನ್ನು ಕಡೆಗಣಿಸಿರುವ ನೋವು ಖಂಡಿತಾ ಇದೆ. ಆದರೆ ಬಿಜೆಪಿ ಬಿಡುವುದಿಲ್ಲ. ಕಾಂಗ್ರೆಸ್ ಸೇರುವುದಿಲ್ಲ ಎಂದು ಸುದ್ದಿಗಾರರೊಂದಿಗೆ ಹೇಳಿದ್ದಾರೆ.
ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತೇನೆ ಎಂದು ಎಲ್ಲೂ ಹೇಳಿಲ್ಲ. 2019ರಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ ಅವರು ಇದು ನನ್ನ ಕೊನೆಯ ಚುನಾವಣೆ ಎಂದು ಹೇಳಿದ್ದರಿಂದ ಹೊನ್ನಾಳಿ-ನ್ಯಾಮತಿ ತಾಲ್ಲೂಕುಗಳ ಕಾರ್ಯಕರ್ತರು ಹಾಗೂ ಮುಖಂಡರ ಒತ್ತಾಯದ ಮೇರೆಗೆ ಈ ಬಾರಿಯ ಚುನಾವಣೆಗೆ ಆಕಾಂಕ್ಷಿ ಎಂದು ಹೇಳಿದ್ದೇನೆ ಎಂದು ರೇಣುಕಾಚಾರ್ಯ ಈ ಸಂದರ್ಭದಲ್ಲಿ ಹೇಳಿದ್ದಾರೆ.