ಎಸ್ಪಿ ನಾಯಕ ಅಝಂ ಖಾನ್, ಪತ್ನಿ-ಪುತ್ರನಿಗೆ 7 ವರ್ಷ ಜೈಲುಶಿಕ್ಷೆ

Prasthutha|

ರಾಂಪುರ: ನಕಲಿ ಜನನ ಪ್ರಮಾಣಪತ್ರ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ನಾಯಕ ಅಝಂ ಖಾನ್ ಅವರಿಗೆ ತೀವ್ರ ಹಿನ್ನೆಡೆಯಾಗಿದ್ದು, ಉತ್ತರ ಪ್ರದೇಶದ ರಾಂಪುರ ನ್ಯಾಯಾಲಯ ಅಝಂ ಖಾನ್, ಪತ್ನಿ ಮತ್ತು ಪುತ್ರ ಮೂವರನ್ನೂ ದೋಷಿ ಎಂದು ಘೋಷಿಸಿದೆ. ಈ ಪ್ರಕರಣದಲ್ಲಿ ಅಝಂ ಖಾನ್, ಅವರ ಪತ್ನಿ ತಂಝೀನ್ ಫಾತಿಮಾ ಮತ್ತು ಪುತ್ರ ಅಬ್ದುಲ್ಲಾ ಅವರನ್ನು ತಪ್ಪಿತಸ್ಥರೆಂದು ನ್ಯಾಯಾಲಯ ಘೋಷಿಸಿದೆ. ಮೂವರಿಗೂ ಏಳು ವರ್ಷಗಳ ಜೈಲು ಶಿಕ್ಷೆ ಮತ್ತು ತಲಾ 15,000 ರೂ. ದಂಡ ವಿಧಿಸಲಾಗಿದೆ.

- Advertisement -

ಸಂಸದ-ಶಾಸಕ ಕೋರ್ಟ್ ಮ್ಯಾಜಿಸ್ಟ್ರೇಟ್ ಶೋಬಿತ್ ಬನ್ಸಾರ್ ಈ ತೀರ್ಪು ನೀಡಿದ್ದಾರೆ.

ಬಿಜೆಪಿ ಶಾಸಕ ಆಕಾಶ್ ಸಕ್ಸೇನಾ ಅಬ್ದುಲ್ಲಾ ಅಝಂ ಖಾನ್ ಎರಡು ಜನನ ಪ್ರಮಾಣ ಪತ್ರ ಹೊಂದಿದ್ದಾರೆ ಎಂದು ಜನವರಿ 3, 2019 ರಂದು ರಾಂಪುರದ ಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಅಝಂ ಖಾನ್ ಮತ್ತು ಅವರ ಪತ್ನಿ ತಮ್ಮ ಮಗನಿಗೆ ನಕಲಿ ಜನನ ಪ್ರಮಾಣಪತ್ರವನ್ನು ಪಡೆಯಲು ಸಹಾಯ ಮಾಡಿದ್ದಾರೆ ಎಂಬ ಆರೋಪವನ್ನೂ ಮಾಡಿದ್ದರು. ಅಬ್ದುಲ್ಲಾ ಅಝಂ ಒಂದು ಸರ್ಟಿಫಿಕೇಟ್ ಲಕ್ನೋದಿಂದ ಮತ್ತು ಮತ್ತೊಂದು ಸರ್ಟಿಫಿಕೆಟ್ ರಾಂಪುರದಿಂದ ಪಡೆದುಕೊಂಡಿದ್ದಾರೆ. ರಾಂಪುರ ಮುನ್ಸಿಪಾಲಿಟಿ ನೀಡಿದ ಪ್ರಮಾಣಪತ್ರದಲ್ಲಿ ಅಬ್ದುಲ್ಲಾ ಅಝಂ ಜನವರಿ 1, 1993 ರಂದು ಜನಿಸಿದರೆ, ಲಕ್ನೋದಿಂದ ಪಡೆದ ಪ್ರಮಾಣಪತ್ರದಲ್ಲಿ, ಅವರು ಸೆಪ್ಟೆಂಬರ್ 30, 1990 ರಂದು ಜನಿಸಿದ್ದಾರೆ ಎಂದು ಸಕ್ಸೇನಾ ದೂರಿನಲ್ಲಿ ಉಲ್ಲೇಖಿಸಿದ್ದರು.

- Advertisement -

ಇದೀಗ ನ್ಯಾಯಾಲಯದ ತೀರ್ಪಿನ ನಂತರ ಅಝಂ ಖಾನ್, ಅವರ ಪತ್ನಿ ಮತ್ತು ಮಗನನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದ್ದು, ನೇರವಾಗಿ ಜೈಲಿಗೆ ಕಳುಹಿಸಲಾಗಿದೆ ಎಂದು ಪ್ರಾಸಿಕ್ಯೂಷನ್ ಪರ ವಕೀಲ ಅರುಣ್ ಪ್ರಕಾಶ್ ಸಕ್ಸೇನಾ ಹೇಳಿದ್ದಾರೆ.

ಉತ್ತರ ಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ, ರಾಂಪುರದಲ್ಲಿ ಅಝಂ ಖಾನ್ ವಿರುದ್ಧ ಭೂಕಬಳಿಕೆ, ವಂಚನೆ ಮತ್ತು ಕ್ರಿಮಿನಲ್ ಅತಿಕ್ರಮಣ ಸೇರಿದಂತೆ ವಿವಿಧ ಆರೋಪಗಳ ಮೇಲೆ 81 ಪ್ರಕರಣಗಳು ದಾಖಲಾಗಿವೆ. ಅಝಂ ಅವರ ಪತ್ನಿ ತಂಝೀನ್ ಫಾತಿಮಾ ಮತ್ತು ಪುತ್ರ ಅಬ್ದುಲ್ಲಾ ಅಝಂ ವಿರುದ್ಧವೈ ಕೆಲವು ಪ್ರಕರಣ ದಾಖಲಿಸಲಾಗಿವೆ.

Join Whatsapp