ಹುಬ್ಬಳ್ಳಿ: ಹಳೇ ಹುಬ್ಬಳ್ಳಿಯಲ್ಲಿ ವಾಟ್ಸಾಪ್ ಸ್ಟೇಟಸ್ ವಿಚಾರಕ್ಕೆ ಸಂಬಂಧಿಸಿ ಉಂಟಾಗಿದ್ದ ಘರ್ಷಣೆಗೆ ಪ್ರಚೋದನೆ ಗೈದಿದ್ದಾರೆಂದು ಆರೋಪಿಸಿ ಮೌಲಾನ ವಸೀಂ ಪಠಾನ್ ರನ್ನು ಹುಬ್ಬಳ್ಳಿ ಪೊಲೀಸರು ಇಂದು ಬಂಧಿಸಿದ್ದಾರೆ.
ಬಂಧನಕ್ಕೂ ಮೊದಲು ವೀಡಿಯೊ ಮೂಲಕ ಸಂದೇಶ ರವಾನಿಸಿದ್ದ ಮೌಲಾನ ವಸೀಂ ತನಗೆ ಜೀವ ಭಯವಿದೆ, ಗಲಭೆಗೆ ನಾನು ಕಾರಣ ಅಲ್ಲ, ನನ್ನ ವಿರುದ್ಧ ಆರೋಪ ಮಾಡಲಾಗುತ್ತಿದೆ ಎಂದು ಹೇಳಿದ್ದರು. ಘರ್ಷಣೆಯ ರಾತ್ರಿ ಠಾಣೆಯ ಬಳಿ ದೂರು ನೀಡಲು ಜನ ಸೇರಿದ್ದು, ಪ್ರತಿಭಟನೆ ಗಲಭೆಗೆ ತಿರುಗಿದ ಕೂಡಲೇ ಪೊಲೀಸರೇ ನನಗೆ ಕರೆ ಮಾಡಿ ಕರೆದು ಸಮಾಧಾನ ಮಾಡಲು ಹೇಳಿದ್ದರು.
ಎಲ್ಲರೂ ಘೋಷಣೆ ಕೂಗುತ್ತಿದ್ದರು. ಆ ಸಮಯದಲ್ಲಿ ಕರೆಂಟ್ ಹೋಯ್ತು. ಗಲಭೆ ಜೋರಾಯ್ತು. ನಾನು ಅಲ್ಲಿಯೇ ಇದ್ದುದರಿಂದ ಪೊಲೀಸರೇ ಅವರ ವಾಹನ ಹತ್ತಿ ಸಮಾಧಾನಿಸಲು ಹೇಳಿದ್ದು, ಅದರಂತೆ ಸಮಾಧಾನ ಮಾಡಿದ್ದೇನೆಯೇ ಹೊರತು ಯಾವುದೇ ಪ್ರಚೋದನಕಾರಿ ಹೇಳಿಕೆ ನೀಡಿಲ್ಲ ಎಂದು ಸ್ಪಷ್ಟನೆ ನೀಡಿದ್ದರು.
ವೀಡಿಯೋ ವೈರಲ್ಲಾದ ಬೆನ್ನಲ್ಲೇ ಇದೀಗ ಪೊಲೀಸರು ಗಲಭೆಯ ರೂವಾರಿಯೆಂದು ಬಿಂಬಿಸಿ ಮೌಲಾನ ವಸೀಂರನ್ನು ಬಂಧಿಸಿ ವಶಕ್ಕೆ ಪಡೆದಿದ್ದಾರೆ.