ಮಂಗಳೂರಿನ ಜನನಿಬಿಡ ಬಂದರು ಪ್ರದೇಶದಲ್ಲಿ 1500 ಕೆ.ಜಿ.ಸ್ಫೋಟಕ ವಶ: ಓರ್ವನ ಬಂಧನ

Prasthutha|

ಮಂಗಳೂರು: ನಗರದ ಜನನಿಬಿಡ ಪ್ರದೇಶವಾದ ಬಂದರು ಅಝೀಝುದ್ದೀನ್ ರಸ್ತೆಯ ಅಂಗಡಿಯೊಂದರಲ್ಲಿ ಬೃಹತ್ ಪ್ರಮಾಣದ ಸ್ಫೋಟಕ ಸಾಮಗ್ರಿ ದಾಸ್ತಾನು ಇರಿಸಿರುವುದನ್ನು ಪತ್ತೆಹಚ್ಚಿರುವ ಮಂಗಳೂರು ಪೊಲೀಸರು, 1500 ಕೆ.ಜಿ.ಗೂ ಅಧಿಕ ವಿವಿಧ ಸ್ಫೋಟಕ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿ ಆನಂದ ಗಟ್ಟಿ ಎಂಬಾತನನ್ನು ಪೊಲೀಸರು ಬಂಧಿಸಿ ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.

- Advertisement -

ಒಟ್ಟು 1,11,140 ರೂಪಾಯಿ ಮೌಲ್ಯದ ಸ್ಫೋಟಕಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿ ಆನಂದ ಗಟ್ಟಿ ಗನ್ ಮಾರಾಟ ಮಾಡುವ ಲೈಸನ್ಸ್ ಪಡೆದು, ಅಲ್ಲಿ ಅಕ್ರಮವಾಗಿ ಸ್ಫೋಟಕ ಸಾಮಗ್ರಿ ದಾಸ್ತಾನು ಇರಿಸಿಕೊಂಡಿದ್ದ ಎಂದು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ.
ಸಲ್ಫರ್ ಪೌಡರ್ 400 k.g, ಪೊಟ್ಯಾಸಿಯಮ್‌ ನೈಟ್ರೇಟ್ 350 k.g, ಬೇರಿಯಂ ನೈಟ್ರೇಟ್ 50 k.g, ಪೊಟ್ಯಾಸಿಯಮ್‌ ಕ್ಲೋರೈಟ್ 395 k.g, ಅಲ್ಯೂಮಿನಿಯಂ ಪೌಡರ್- 260 k.g, ಚಾರ್ ಕೋಲ್- 240 k.g, ಲೀಡ್ ಬಾಲ್ಸ್ 30 k.g, ಆ್ಯರ್ ಪಿಸ್ತೂಲ್ ಪೆಲೆಟ್ಸ್ ವಶ ಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

ಗೋಡಾನ್ ನಲ್ಲಿ ಪತ್ತೆಯಾದ ಸ್ಫೋಟಕ ವಸ್ತುಗಳು ಗನ್ ತಯಾರಿಗೆ ಬಳಸುವಂಥವುಗಳಲ್ಲ. ಹೀಗಾಗಿ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಅಲ್ಲಿ ಅಕ್ರಮವಾಗಿ ಸ್ಫೋಟಕ ವಸ್ತುಗಳನ್ನು ದಾಸ್ತಾನು ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ ಎಂದು ಅವರು ತಿಳಿಸಿದರು.

- Advertisement -

ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಕಡೆಯಿಂದ ಸ್ಫೋಟಕ, ಸಿಡಿಮದ್ದು ತಯಾರಿಗೆ ಇಲ್ಲಿಂದ ಕಚ್ಚಾ ವಸ್ತುಗಳನ್ನು ಒಯ್ಯುತ್ತಿದ್ದರು ಎನ್ನುವುದು ತಿಳಿದುಬಂದಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ನಕ್ಸಲ್ ಅಥವಾ ಇತರ ಸಮಾಜವಿರೋಧಿ ಕೃತ್ಯಗಳಿಗೆ ಇಲ್ಲಿಂದ ಸ್ಫೋಟಕ ಪೂರೈಕೆ ಆಗುತ್ತಿದ್ದ ಬಗ್ಗೆ ಮಾಹಿತಿಯಿಲ್ಲ. ಆದರೆ, ಈ ರೀತಿಯ ದುಷ್ಕೃತ್ಯಗಳಿಗೆ ಇಲ್ಲಿನ ಕಚ್ಚಾವಸ್ತು ಬಳಕೆಯಾಗಲ್ಲ ಎನ್ನುವ ಹಾಗಿಲ್ಲ. ಸುಲಭದಲ್ಲಿ ಇಲ್ಲಿ ಲಭ್ಯ ಆಗುತ್ತಿದ್ದುದರಿಂದ ಸಮಾಜ ವಿರೋಧಿ ಶಕ್ತಿಗಳು ಕೃತ್ಯಕ್ಕೆ ಬಳಕೆ ಮಾಡುವ ಸಾಧ್ಯತೆಯೂ ಇರುತ್ತದೆ ಎಂದಿದ್ದಾರೆ.

Join Whatsapp