ಮೂಡುಬಿದಿರೆ: ನಿಧಾನವಾಗಿ ಹೋಗು ಎಂದದ್ದಕ್ಕೆ ಟಿಪ್ಪರ್ ಹರಿಸಿ ವ್ಯಕ್ತಿಯನ್ನು ಹತ್ಯೆ ಮಾಡಿದ ಚಾಲಕ

Prasthutha|

ಮೂಡುಬಿದಿರೆ: ಧೂಳು ಬರುವ ಹಾಗೆ ವಾಹನವನ್ನು ಚಲಾಯಿಸಬೇಡ, ನಿಧಾನವಾಗಿ ಹೋಗೆಂದು ಹೇಳಿದ ವ್ಯಕ್ತಿಗೆ ಟಿಪ್ಪರ್ ಚಾಲಕ ರಾಡ್ ನಿಂದ ಹೊಡೆದು, ಅವರ ಮೇಲೆ ಟಿಪ್ಪರ್ ಹರಿಸಿ ಕೊಲೆ ಮಾಡಿರುವ ಘಟನೆ ಮೂಡುಬಿದಿರೆಯಲ್ಲಿ ನಡೆದಿದೆ.

- Advertisement -

ಕೋಟೆಬಾಗಿಲಿನ ನಿವಾಸಿ ಫಯಾಝ್ (61) ಹತ್ಯೆಗೀಡಾದ ವ್ಯಕ್ತಿ. ಕೋಟೆಬಾಗಿಲು ನಿವಾಸಿ,  ಟಿಪ್ಪರ್ ಚಾಲಕ ಹಾರೀಸ್ ಕೊಲೆ ಆರೋಪಿ ಎಂದು ತಿಳಿದು ಬಂದಿದೆ.

ಫಯಾಝ್ ಅವರು  ಶುಕ್ರವಾರ ಮಧ್ಯಾಹ್ನ ನಮಾಝ್ ಗಾಗಿ ಮಸೀದಿಗೆ ನಡೆದುಕೊಂಡು ಹೋಗುತ್ತಿದ್ದಾಗ ಅದೇ ಮಾರ್ಗದಲ್ಲಿ  ಆರೋಪಿ  ಹಾರೀಸ್ ಅತೀ ವೇಗವಾಗಿ ಟಿಪ್ಪರ್ ಚಲಾಯಿಸಿಕೊಂಡು ಬಂದಿದ್ದಾನೆ. ಈ ವೇಳೆ ಫಯಾಝ್ ಅವರ ಮೇಲೆ  ಧೂಳು ಹಾರಿದೆ ಎನ್ನಲಾಗಿದೆ. ಕೋಪಗೊಂಡ ಫಯಾಝ್ ಅವರು ನಿಧಾನ ಹೋಗುವಂತೆ ಜೋರಾಗಿ ಹೇಳಿದ್ದಾರೆ.   ಈ ವಿಚಾರವಾಗಿ  ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದಿದೆ.

- Advertisement -

ನಮಾಝ್ ಮುಗಿಸಿಕೊಂಡು ಹಿಂದಿರುಗುವ ಸಂದರ್ಭದಲ್ಲಿ ಹಾರೀಸ್ ಮತ್ತೆ ತಕರಾರು ತೆಗೆದು ಫಯಾಝ್ ಅವರ ಮೇಲೆ ಮಾರಾಕಾಸ್ತ್ರದಿಂದ ದಾಳಿ ಮಾಡಿ ತಲೆ ಭಾಗಕ್ಕೆ ಹೊಡೆದು ಟಿಪ್ಪರನ್ನು ಸ್ಟಾರ್ಟ್ ಮಾಡಿ ಮುಂದಕ್ಕೆ ಚಲಾಯಿಸಿದ್ದಾನೆ.

ಆಯತಪ್ಪಿ ಫಯಾಝ್ ಅವರು ರಸ್ತೆಗೆ ಬಿದ್ದಿದ್ದಾರೆ. ಬಿದ್ದ ಅವರ ಮೇಲೆಯೇ ಟಿಪ್ಪರನ್ನು ಹಾಯಿಸಿದ್ದಾನೆ.

 ಈ ಬಗ್ಗೆ ಮೂಡುಬಿದಿರೆ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ಆರೋಪಿ ಅಲ್ಲಿಂದ ಪರಾರಿಯಾಗಿದ್ದಾನೆ.

Join Whatsapp